ಉಡುಪಿ, ಜ.31: ಕರ್ನಾಟಕ ಸರಕಾರದ ವತಿಯಿಂದ ಮಕ್ಕಳ ಮತ್ತು ಮಹಿಳಾ ಕಲ್ಯಾಣ ಅಭಿವೃದ್ಧಿ ಇಲಾಖೆ ನೀಡುವ ಹೊಯ್ಸಳ ಕೆಳದಿ ಚೆನ್ನಮ್ಮ ಪ್ರಶಸ್ತಿಗೆ ಉಡುಪಿ ಜಿಲ್ಲೆಯಿಂದ ಕೃತಿ ಆರ್ ಸನಿಲ್ ಆಯ್ಕೆಯಾಗಿದ್ದಾರೆ. ಜನವರಿ 26ರಂದು ಉಡುಪಿ ಜಿಲ್ಲಾಡಳಿತ ವತಿಯಿಂದ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಪ್ರಶಸ್ತಿ ಪ್ರಧಾನ ಮಾಡಿದರು. ಶಾಸಕ ಯಶ್ಪಾಲ್ ಸುವರ್ಣ, ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ., ಜಿಲ್ಲಾ ಪಂಚಾಯತ್ ಸಿಇಒ ಪ್ರತೀಕ್ ಬಯಾಲ್, ಎಡಿಸಿ ಜಿ.ಎಸ್.ಮಮತಾ ದೇವಿ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಕೃತಿ ಆರ್ ಸನಿಲ್ ಈ ಟಿವಿ ತೆಲುಗುವಿನ ದೀ ಜೂನಿಯರ್ಸ್, ಸುವರ್ಣ ವಾಹಿನಿಯ ಪುಟಾಣಿ ಪಂಟ್ರೂ, ಡಿಡಿ ಚಂದನದ ಡ್ಯಾನ್ಸ್ ಸಮರ ಹೀಗೆ ಹಲವಾರು ರಿಯಾಲಿಟಿ ಶೋಗಳಲ್ಲಿ ಹಾಗೂ ಹೆಜ್ಜನಾದ ಆಲ್ಬಮ್ ಸಾಂಗ್ ನಲ್ಲಿ ಕರ್ನಾಟಕ ಹಾಗೂ ಕೇರಳ ತಮಿಳುನಾಡು ಆಂಧ್ರ ತೆಲಂಗಾಣ ರಾಜ್ಯಗಳಲ್ಲಿ 1,500ಕ್ಕೂ ಹೆಚ್ಚು ಸ್ಟೇಜ್ ಷೋ ಗಳನ್ನು ನೀಡಿದ್ದಾರೆ. ಇವರ ಈ ಸಾಧನೆಗೆ ಫ್ಯೂಚರ್ ಕಲಾಂಸ್ ಬುಕ್ ಆಫ್ ರೆಕಾರ್ಡ್, ಯುನಿವರ್ಸಲ್ ಅಚೀವರ್ಸ್ ಬುಕ್ ಆಫ್ ರೆಕಾರ್ಡ್, ಕರಾವಳಿ ಸಿರಿ, ವಿದ್ಯಾರ್ಥಿ ಶ್ರೀ ಬಿರುದು, ಕರ್ನಾಟಕ ಪ್ರತಿಭಾರತ್ನ, ಹಾಗೂ ಕರುನಾಡ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಇತ್ತೀಚೆಗೆ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ವತಿಯಿಂದ ನಡೆದ 14ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಇವರ ಸಾಧನೆಯನ್ನು ಗುರುತಿಸಿ ಸನ್ಮಾನಿಸಿರುತ್ತಾರೆ. ವೆಸ್ಟರ್ನ್ ಫಾರ್ಮ್ಸ್ ಗಳಲ್ಲದೆ ಭರತನಾಟ್ಯ ಹಾಗೂ ಯಕ್ಷಗಾನದಲ್ಲೂ ಪರಿಣಿತಿ ಹೊಂದಿದ್ದಾರೆ. ಇವರು ಎಂಜಿಎಂ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯಾಗಿದ್ದು ಉಡುಪಿಯ ರೂಪೇಶ್ ಹಾಗು ರೋಹಿಣಿ ರೂಪೇಶ್ ದಂಪತಿಗಳ ಸುಪುತ್ರಿ. ತನ್ನ ನೃತ್ಯಾಭ್ಯಾಸವನ್ನು ಬ್ರಹ್ಮಗಿರಿಯ ವಿ-ರಾಕ್ಸ್ ಡಾನ್ಸ್ ಕಂಪೆನಿಯಲ್ಲಿ ವಸಂತ್ ನಾಯ್ಕ್ ಇವರಿಂದ ಪಡೆಯುತ್ತಿದ್ದಾಳೆ.