ಉಡುಪಿ, ಡಿ.20: ಉಡುಪಿ ನಗರಸಭೆಯ 13 ನೇ ಮೂಡುಪೆರಂಪಳ್ಳಿ ವಾರ್ಡ್ ಉಪ ಚುನಾವಣೆಯು ಡಿಸೆಂಬರ್ 27 ರಂದು ನಡೆಯಲಿದ್ದು, ಮತಕೇಂದ್ರಗಳಿಗೆ ವಿದ್ಯುನ್ಮಾನ ಮತ ಯಂತ್ರಗಳ ಹಂಚಿಕೆಯು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ವಿವಿಧ ರಾಜಕೀಯ ಪಕ್ಷಗಳ ಸದಸ್ಯರ ಸಮ್ಮುಖದಲ್ಲಿ ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಅಧ್ಯಕ್ಷತೆಯಲ್ಲಿ ನಡೆಯಿತು.
ಡಿಸೆಂಬರ್ 27 ರಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 5 ರ ವರೆಗೆ ಮತದಾನ ನಡೆಯಲಿದ್ದು, ಎರಡು ಮತಗಟ್ಟೆಗಳಲ್ಲಿ ಒಟ್ಟು 2,958 ಮತದಾರರು ಮತ ಚಲಾಯಿಸಲಿದ್ದಾರೆ. ಮತಗಟ್ಟೆ ಸಂಖ್ಯೆ 29 ರಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯ ಭಾಗದ ಸಂಖ್ಯೆ 115 ರಲ್ಲಿ 1249, ಮತಗಟ್ಟೆ ಸಂಖ್ಯೆ 30 ರಲ್ಲಿ ಭಾಗ ಸಂಖ್ಯೆ 116, 148, 149 ರಲ್ಲಿ ಒಟ್ಟು 1709 ಮತದಾರರಿರುವುದರಿಂದ ಒಂದು ಆಕ್ಸಿಲರಿ ಮತಗಟ್ಟೆ ಸಂಖ್ಯೆ 30ಎ ಇದ್ದು, ಮೂರು ಮತದಾನ ಕೇಂದ್ರಗಳಿಗೆ ಬ್ಯಾಲೆಟ್ ಯುನಿಟ್ ಹಾಗೂ ಕಂಟ್ರೋಲ್ ಯುನಿಟ್‌ಗಳ ಹಂಚಿಕೆಯನ್ನು ರ‍್ಯಾಂಡಮೈಸೇಶನ್ ಪ್ರಕ್ರಿಯೆಗಳ ಮೂಲಕ ಹಂಚಿಕೆ ಮಾಡಲಾಯಿತು.
ಇದೇ ಸಂದರ್ಭದಲ್ಲಿ ಮುಂಬರುವ ಲೋಕಸಭಾ ಚುನಾವಣೆಗೆ ಸಂಬಂಧಿಸದಂತೆ ಚುನಾವಣಾ ಪ್ರಚಾರಕ್ಕಾಗಿ ಚುನಾವಣಾ ವೆಚ್ಚಗಳನ್ನು ಮಾಡುವ ಕುರಿತ ಹಾಲಿ ಮಾರುಕಟ್ಟೆ ದರದಂತೆ ಚುನಾವಣಾ ಪ್ರಚಾರ ಸಾಧನಗಳು ಹಾಗೂ ಇತ್ಯಾದಿಗಳಿಗೆ ದರವನ್ನು ನಿಗಧಿಪಡಿಸುವ ಕುರಿತು ವಿವಿಧ ರಾಜಕೀಯ ಪಕ್ಷದ ಸದಸ್ಯರುಗಳೊಂದಿಗೆ ಚರ್ಚಿಸಿ, ಕರಡು ದರವನ್ನು ನಿಗಧಿಪಡಿಸಲಾಯಿತು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್, ಭಾರತೀಯ ಜನತಾ ಪಕ್ಷದ ಮನೋಹರ್ ಎಸ್ ಕಲ್ಮಾಡಿ, ಇಂಡಿಯನ್ ಕಾಂಗ್ರೇಸ್ ಪಕ್ಷದ ಹಬೀಬ್ ಅಲಿ, ಜನತಾ ದಳದ ಜಯರಾಮ್ ಆಚಾರ್ಯ ಹಾಗೂ ಮತ್ತಿತರರು ಉಪಸ್ಥಿತರಿದ್ದರು.