ಉಡುಪಿ, ಡಿ.3: ಪುತ್ತಿಗೆ ಪರ್ಯಾಯೋತ್ಸವದ ಸ್ವಾಗತ ಸಮಿತಿಯ ಕಾರ್ಯಕಾರಿ ಸಮಿತಿಯ ಸಭೆ ಪುತ್ತಿಗೆ ಮಠದಲ್ಲಿ ನಡೆಯಿತು. ಪರ್ಯಾಯ ಮಹೋತ್ಸವಕ್ಕೆ ಅತಿಥಿಗಳಾಗಿ ಬಂದ ಕೃಷ್ಣ ಭಕ್ತರಿಗೆ ಸಕಲ ಸೌಕರ್ಯಗಳನ್ನು ಒದಗಿಸಿ ಕೊಡುವುದು ಕೂಡ ಕೃಷ್ಣನಿಗೆ ಅತ್ಯಂತ ಪ್ರೀತಿಕರವಾದ ಸೇವೆಯೇ ಆಗಿದೆ ಎಂದು ಪುತ್ತಿಗೆ ಮಠಾಧೀಶರಾದ ಶ್ರೀ ಶ್ರೀ ಸುಗುಣೇಂದ್ರ ತೀರ್ಥರು ಅನುಗ್ರಹ ಸಂದೇಶ ನೀಡಿದರು. ಕೃಷ್ಣ ಭಕ್ತರೆಲ್ಲರೂ ಈ ಪರ್ಯಾಯೋತ್ಸವದಲ್ಲಿ ಶ್ರದ್ದಾ ಭಕ್ತಿಯಿಂದ ಪಾಲ್ಗೊಂಡು ಕೃಷ್ಣನ ಅನುಗ್ರಹಕ್ಕೆ ಪಾತ್ರರಾಗಿ ಎಂದರು.
ಕಾಪು ಶಾಸಕ ಹಾಗೂ ಸಮಿತಿಯ ಮಹಾಪೋಷಕರಾದ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಪಾರ್ಯಾಯೋತ್ಸವಕ್ಕೆ ದಿನಗಣನೆ ಆರಂಭವಾಗಿದ್ದು ನಾವೆಲ್ಲರೂ ಒಗ್ಗಟ್ಟಾಗಿ ಪುತ್ತಿಗೆ ಶ್ರೀಗಳ ಪರ್ಯಾಯವನ್ನು ವೈಭವದಿಂದ ನಡೆಸೋಣ ಎಂದರು. ಎಂ.ಎಲ್ ಸಾಮಗ, ಬೈಕಾಡಿ ಸುಪ್ರಸಾದ್ ಶೆಟ್ಟಿ, ಜಯಕರ ಶೆಟ್ಟಿ ಇಂದ್ರಾಳಿ, ನಾಗೇಶ ಹೆಗ್ದೆ, ರಂಜನ್ ಕಲ್ಕೂರ ತಮ್ಮ ತಮ್ಮ ಸಮಿತಿಗಳ ಕರ್ತವ್ಯಗಳ ಸಿದ್ದತೆಗಳ ಬಗ್ಗೆ ವರದಿ ವಾಚಿಸಿದರು. ಶ್ರೀ ಮಠದ ದಿವಾನರಾದ ನಾಗರಾಜ್ ಆಚಾರ್ಯ ಪ್ರಾಸ್ತಾವಿಕವಾಗಿ ಮಾತಾಡಿದರು. ಪ್ರಸನ್ನ ಆಚಾರ್ಯ, ಮಟ್ಟಿ ಲಕ್ಷ್ಮೀನಾರಾಯಣ್ ರಾವ್, ಹರಿಯಪ್ಪ ಕೋಟ್ಯಾನ್, ಬಾಲಾಜಿ ಯೋಗೀಶ್ ಶೆಟ್ಟಿ, ಸಂತೋಷ್ ಶೆಟ್ಟಿ ತೆಂಕರಾಗುತ್ತು, ದಿನೇಶ್ ಪುತ್ರನ್ ಮುಂತಾದವರು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಬೆಳಪು ದೇವಿಪ್ರಸಾದ್ ಶೆಟ್ಟಿ ವಂದಿಸಿದರು. ರಮೇಶ್ ಭಟ್ ಕೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.