ಮಣಿಪಾಲ, ನ. 15: ಮಧುಮೇಹದ ಬಗ್ಗೆ ಜಾಗೃತಿಯನ್ನು ಹೆಚ್ಚಿಸಲು ಮತ್ತು ಮಧುಮೇಹ ತಡೆಗಟ್ಟಲು ಹಾಗೂ ನಿರ್ವಹಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ಪ್ರಪಂಚದಾದ್ಯಂತ ನವೆಂಬರ್ 14 ರಂದು ವಿಶ್ವ ಮಧುಮೇಹ ದಿನವನ್ನಾಗಿ ಆಚರಿಸಲಾಗುತ್ತದೆ. ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ಎಂಡೋಕ್ರಿನೊಲೊಜಿ (ಅಂತಃಸ್ರಾವಶಾಸ್ತ್ರ) ವಿಭಾಗದಿಂದ ವಿಶ್ವ ಮಧುಮೇಹ ದಿನದ ಅಂಗವಾಗಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ನವೆಂಬರ್ 14 ರಂದು ರಾತ್ರಿ ಮಲ್ಪೆ ಬೀಚ್ ನಲ್ಲಿರುವ ಗಾಂಧಿ ಸ್ಮಾರಕವನ್ನು ನೀಲಿ ದೀಪಗಳಿಂದ ಬೆಳಗಲಾಯಿತು.
ಮಧುಮೇಹದ ಬಗ್ಗೆ ಜಾಗೃತಿ ಮೂಡಿಸಲು ನೀಲಿ ಬಣ್ಣವನ್ನು ನೀಲಿ ವೃತ್ತದ ಚಿಹ್ನೆಯಿಂದ ತೆಗೆದುಕೊಳ್ಳಲಾಗಿದೆ. ಈ ಚಿಹ್ನೆಯನ್ನು ಇಂಟರ್ನ್ಯಾಷನಲ್ ಡಯಾಬಿಟಿಸ್ ಫೆಡರೇಶನ್ (ಐಡಿಎಫ್) ಮಧುಮೇಹಕ್ಕೆ ಪರಿಹಾರವನ್ನು ಕಂಡುಹಿಡಿಯಲು ಅಗತ್ಯವಾದ ಏಕತೆಯನ್ನು ಪ್ರತಿನಿಧಿಸುತ್ತದೆ.
ಎಂಡೋಕ್ರೈನಾಲಜಿ ವಿಭಾಗದ ಪ್ರಾಧ್ಯಾಪಕಿ ಹಾಗೂ ಮುಖ್ಯಸ್ಥೆ ಡಾ. ಸಹನಾ ಶೆಟ್ಟಿ ಮಾತನಾಡಿ, ಭಾರತದಲ್ಲಿ ಪ್ರತಿ ಹನ್ನೊಂದು ಜನರಲ್ಲಿ ಒಬ್ಬರು ಟೈಪ್ 2 ಡಯಾಬೆಟಿಸ್ ನಿಂದ ಬಳಲುತ್ತಿದ್ದು, ಈ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮಧುಮೇಹವು ಹೃದ್ರೋಗ, ಮೂತ್ರಪಿಂಡದ ಸಮಸ್ಯೆಗಳು, ವಯಸ್ಕರಲ್ಲಿ ಕಣ್ಣಿನ ಸಮಸ್ಯೆಗಳು, ನರಗಳ ಸಮಸ್ಯೆಗಳು ಮತ್ತು ಅಪಘಾತಕಾರಿಯಲ್ಲದ ಪಾದದ ಅಂಗಚ್ಛೇದನಗಳಿಗೆ ಪ್ರಮುಖ ಕಾರಣವಾಗಿದೆ. ಟೈಪ್ 2 ಡಯಾಬಿಟಿಸ್ ಅನ್ನು ಆರೋಗ್ಯಕರ ಆಹಾರ ಪದ್ಧತಿಗಳನ್ನು ಅಳವಡಿಸಿಕೊಳ್ಳುವ ಮೂಲಕ ಮತ್ತು ಚಿಕ್ಕ ವಯಸ್ಸಿನಿಂದಲೇ ದೈಹಿಕ ಚಟುವಟಿಕೆ ಮತ್ತು ನಿತ್ಯ ವ್ಯಾಯಾಮದ ಮೂಲಕ ತಡೆಗಟ್ಟಬಹುದು. ವೈದ್ಯರು ಸೂಚಿಸಿದ ಸೂಕ್ತವಾದ ಔಷಧಿಗಳನ್ನು ತೆಗೆದುಕೊಳ್ಳುವುದು ಮತ್ತು ನಿಯಮಿತವಾಗಿ ತಪಾಸಣೆ ಅತ್ಯಗತ್ಯ ಎಂದರು.
ಕೆಎಂಸಿ ಮಣಿಪಾಲದ ಡೀನ್ ಡಾ. ಪದ್ಮರಾಜ್ ಹೆಗ್ಡೆ ಮಾತನಾಡಿ, ಈ ವರ್ಷದ ಘೋಷ ವಾಕ್ಯ ‘ನಾಳೆಯ ಆರೋಗ್ಯಕ್ಕಾಗಿ ಮಧುಮೇಹದ ಜಾಗೃತಿ’. ಮಧುಮೇಹ ಇರುವವರು ಮುಖ್ಯವಾಗಿ ಹಣ್ಣುಗಳು, ತರಕಾರಿಗಳು, ಧಾನ್ಯಗಳು, ಕಾಳುಗಳು, ರಾಗಿ, ಬೀಜಗಳು, ತೆಳ್ಳಗಿನ ಮಾಂಸ ಮತ್ತು ಕಡಿಮೆ ಕೊಬ್ಬಿನ ಆಹಾರವನ್ನು ಒಳಗೊಂಡಂತೆ ಆರೋಗ್ಯಕರ ಪೋಷಕಾಂಶಯುಕ್ತ ಆಹಾರವನ್ನು ತಿನ್ನುವ ಮೂಲಕ ಇದರಿಂದಾಗುವ ತೊಂದರೆಗಳನ್ನು ತಡೆಯಬಹುದು ಮತ್ತು ಗ್ಲುಕೋಸ್ ಅನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು.
ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ಮಾತನಾಡಿ, ಮಧುಮೇಹ ದಿನದ ಅಂಗವಾಗಿ ಆಟೋ ಚಾಲಕರು, ಟ್ಯಾಕ್ಸಿ ಚಾಲಕರು, ಬಸ್ ಚಾಲಕರು ಹಾಗೂ ನಿರ್ವಹಕರು ಮತ್ತು ಇತರರಿಗೆ ಉಚಿತ ಮಧುಮೇಹ ತಪಾಸಣೆ ಕಾರ್ಯಕ್ರಮವನ್ನು ಗುರುವಾರ ನವೆಂಬರ್ 16 ರಂದು ಮಣಿಪಾಲದ ಟೈಗರ್ ಸರ್ಕಲ್ ನಲ್ಲಿರುವ ಟ್ಯಾಕ್ಸಿ ನಿಲ್ದಾಣದ ಬಳಿ ಬೆಳಿಗ್ಗೆ ಗಂಟೆ 8:00 ರಿಂದ ಮದ್ಯಾಹ್ನ ಗಂಟೆ 1:00 ರವರೆಗೆ ಆಯೋಜಿಸುತ್ತಿದ್ದೇವೆ ಎಂದರು.