Home ಅಂಕಣ ಸೋಮನಾಥಪುರದ ಚನ್ನಕೇಶವ ದೇವಸ್ಥಾನಕ್ಕೆ ನಮ್ಮ ಭೇಟಿ

ಸೋಮನಾಥಪುರದ ಚನ್ನಕೇಶವ ದೇವಸ್ಥಾನಕ್ಕೆ ನಮ್ಮ ಭೇಟಿ

521
0

ಮ್ಮ ಮನಸ್ಸು ಪ್ರತಿಕ್ಷಣ ಮುಂದಿನ ವಿಷಯದ ಬಗ್ಗೆ ಆಲೋಚನೆಯಲ್ಲಿ ಮಗ್ನವಾಗಿರುತ್ತದೆ. ನನ್ನ ಮನಸ್ಸಂತು ಮುಂದಿನ ಎರಡು ಮೂರು ವರ್ಷದ ಯೋಜನೆ ಸಿದ್ದವಾಗಿರುತ್ತದೆ. ಈ ವರ್ಷ ಅಂದರೆ 2023ರಲ್ಲಿ ಗೋವಾ ಹಾಗೂ ಒಡಿಶಾದಿಂದ ವಾಪಸ್ಸು ಬರುವಾಗ ನಾವು ಮುಂದಿನ ಟೂರ್ ಬಗ್ಗೆ ಮಾತನಾಡುತ್ತಿದ್ದೆವು. ನಾನು ದಸರಾ ಸಮಯದಲ್ಲಿ ಮೈಸೂರು ನೋಡಲು ಬಲು ಚಂದ ಮುಂದಿನ ವರ್ಷ ಹೋಗಬೇಕೆಂದು ಹೇಳಿದಾಗ ನನ್ನ ಯಜಮಾನರು ಈ ವರ್ಷವೇ ಹೋಗಿ ಬರುವ ಎಂದು ಹೇಳಿದರು. ಹೇಗೂ ಮಗಳ ಫಸ್ಟ್ ಇಯರ್ ಬಿಡಿಎಸ್ ಶುರುವಾಗಿದೆ ಅಷ್ಟೇ. ಮಗನ ಪಿಯುಸಿ ಫಸ್ಟ್ ಇಯರ್. ಮುಂದಿನ ವರ್ಷ ಕಷ್ಟವಾಗಬಹುದು, ಈ ವರ್ಷ ವಿಜಯದಶಮಿ ಹೇಗೂ ಮಂಗಳವಾರ ಬಂದಿದೆ. ಶನಿವಾರ ಮಗಳಿಗೆ ರಜೆ, ಹೀಗೆ ನಾಲ್ಕು ಐದು ದಿನಗಳು ನಮಗೆ ಸಿಗುತ್ತದೆ ಎಂದು ಈ ವರ್ಷವೇ ಮೈಸೂರಿಗೆ ಹೊರಟೆವು.

ನನಗೆ ಮೈಸೂರು ಹೇಳಿದ ತಕ್ಷಣ ನೆನಪು ಬರುವುದು ಮೈಸೂರ್ ದಸರಾ ಆ ವೈಭವ ಬೇರೆಲ್ಲೂ ನೋಡಲು ಸಿಗುವುದು ಕಮ್ಮಿ. ನಾನು ಆರನೇ ತರಗತಿಯಿಂದ ಹತ್ತನೆ ತರಗತಿಯವರೆಗೆ ಮೈಸೂರಿನಲ್ಲಿ ಕಲಿತ್ತದ್ದು. ಅಪ್ಪ ಬ್ಯಾಂಕ್ನಲ್ಲಿ ಕೆಲಸ ಮಾಡುತ್ತದ್ದರು. ಟ್ರಾನ್ಸ್‌ಫರ್‌ ಆಗುತ್ತಿತ್ತು. ಐದು ವರ್ಷ ಮೈಸೂರುನಲ್ಲಿದ್ದೆವು. ದಸರಾ ವೈಭವ ತಿಳಿದಿತ್ತು. ಇಡೀ ನಗರ ಜಗಮಗಿಸುತ್ತದೆ, ಕಣ್ಣಿಗೆ ಹಬ್ಬವೆಂದು… ನನ್ನ ನೆನಪು ಮರುಕಳಿಸಿತು.

ನಾವು ಮೈಸೂರಿಗೆ ಹೊರಟಿದ್ದೇವೆ ಎಂದು ಅಮ್ಮನಿಗೆ ತಿಳಿಸಿದಾಗ ಅವರು ಕೂಡ ಹೋಗಿ ಬರುವ ಪ್ಲಾನ್ ಮಾಡಿದ್ದೇವೆ ಎಂದು ಹೇಳಿದರು. ಆಗ ಅಮ್ಮ ಅಲ್ಲಿ ಹತ್ತಿರದಲ್ಲಿ ಸೋಮನಾಥಪುರಕ್ಕೆ ಹೋಗಬೇಕು. ಬೇಲೂರು ಹಳೆಬೀಡಿನ ತರಹ ಶಿಲ್ಪ ಕಲೆಗಳು ಇವೆಯಂತೆ ಎಂದು ಹೇಳಿದಾಗ ನನ್ನ ಮನಸ್ಸು ಅಲ್ಲಿ ಹೋಗಲೇಬೇಕೆಂದು ಇವರ ಹತ್ತಿರ ಹೇಳಿದೆ. ನಾವು ಕಾರ್ಕಳದಿಂದ ಮಡಿಕೇರಿ, ಮಡಿಕೇರಿಯಲ್ಲಿ ಒಂದು ದಿನದ ಪ್ರವಾಸ ಮಾಡಿ ಮೈಸೂರಿಗೆ ತಲುಪಿದೆವು. ಮೈಸೂರಿನಿಂದ ಸೋಮನಾಥಪುರ 35 ಕಿ.ಮೀ ದೂರದಲ್ಲಿದೆ. ಒಂದು ಗಂಟೆಯ ಪ್ರಯಾಣ. ಶಿಲ್ಪಕಲೆ ನೋಡುವುದೆಂದರೆ ನನಗೆ ತುಂಬಾ ಇಷ್ಟ. ಕೈಯಿಂದ ಮಾಡಿದ ಆ ಕೆತ್ತನೆ ಎಷ್ಟು ಸುಂದರ. ಎಷ್ಟು ಶಿಲ್ಪಿಗಳು ಕಷ್ಟಪಟ್ಟು ಅಷ್ಟೊಂದು ಮಾಡಿರಬಹುದು. ನಮಗೆ ಅದರ ಚಿತ್ರ ಬಿಡಿಸಲು ಸಾಧ್ಯವಾಗುವುದಿಲ್ಲ. ಅವರು ಕಲ್ಲಿನ ಮೇಲೆ ಅಷ್ಟು ಚೆಂದ ಕೆತ್ತನೆ ಮಾಡಿದ್ದಾರಲ್ಲ! ಅದ್ಭುತ ಟ್ಯಾಲೆಂಟ್ ಎಂದು ಅನಿಸುತ್ತಿತ್ತು. ಆದರೆ ಕಲಾವಿದರ ಹೆಸರೇ ಅಷ್ಟು ಪ್ರಸಿದ್ಧವಾಗಲಿಲ್ಲ. ರಾಜರ ಹೆಸರು ಮಾತ್ರ ಹೇಳುತ್ತೇವೆ ವಿನಹ ಕಲೆಗಾರರ ಹೆಸರು ಪ್ರಸಿದ್ಧಿ ಪಡೆದಿಲ್ಲವೆಂದು ಬೇಸರವಾಯಿತು.

ಆಗಿನ ಕಾಲದ ಕಲಾವಿದರಿಗೆ ಇಂದಿನ ಕಾಲದ ಹಾಗೆ ಪ್ರಸಿದ್ಧಿ ಬೇಕಾಗಿರಲಿಲ್ಲ ಬಿಡಿ. ಅವರ ಕಾಯಕವೇ ಅದಾಗಿತ್ತು. ಅದು ವಿಶೇಷವಾಗಿರಲಿಲ್ಲವೇನೊ?..ಆದರೆ ಈಗ ನಮಗೆ ಅದು ವಿಶೇಷ.

ಬೆಳಿಗ್ಗೆ ಎದ್ದು ದಾರಿಯಲ್ಲಿ ಮೈಸೂರ್ ಮಸಾಲೆ ಸವಿದು ಕಾಫಿ ಕುಡಿದು ಸೋಮನಾಥಪುರಗೆ ಹೊರಟೆವು. ಟಿಕೆಟ್ ಪಡೆದು ಸ್ಕ್ಯಾನ್ ಮಾಡಿ ಒಳಗೆ ನಡೆದೆವು. ಬೇಲೂರು ಹಳೇಬೀಡಿನಷ್ಟು ದೊಡ್ಡದಿರಲಿಲ್ಲದಿದ್ದರೂ ಸುಂದರವಾಗಿತ್ತು ಸೋಮನಾಥಪುರದ ಚನ್ನಕೇಶವ ದೇವಸ್ಥಾನದ. ಒಳಗೆ ನಡೆಯುತ್ತಿದ್ದಂತೆ ಲೇಡಿ ಗೈಡ್ ಒಬ್ಬರು ನಮಗೆ ಗೈಡ್‌ ಬೇಕೆ ಎಂದು ಕೇಳಿದ ತಕ್ಷಣ ನಾನು ಹೌದು ಎಂದೆ. ಶೋಭಾ ಎಂದು ಅವರು ತಮ್ಮ ಪರಿಚಯ ಮಾಡಿದರು. ದೇವಸ್ಥಾನದ ಇತಿಹಾಸವನ್ನು ಹಾಗೂ ಶಿಲ್ಪ ಕಲೆಗಳ ಬಗ್ಗೆ ವಿವರವನ್ನು ಹೇಳತೊಡಗಿದರು.

ಸೋಮನಾಥಪುರವೆಂದು ಹೆಸರು ಬರಲು ಕಾರಣ ಸೋಮನಾಥನೆಂಬ ಅಲ್ಲಿನ ದಂಡನಾಯಕನಿಂದ. 13ನೇ ಶತಮಾನದಲ್ಲಿ ಸೋಮನಾಥ ಎಂಬ ದಂಡನಾಯಕನು ಹೊಯ್ಸಳ ರಾಜರಿಗೋಸ್ಕರ ಕೆಲಸ ಮಾಡುತ್ತಿದ್ದನು. ಅವನು ಕಟ್ಟಿದ ದೇವಾಲಯವಿದು. ದೇವಸ್ಥಾನವನ್ನು ಮುಸಲ್ಮಾನ ಸುಲ್ತಾನರು 1311ರಲ್ಲಿ ಧ್ವಂಸಗೊಳಿಸಿದರು. ಎಲ್ಲಾ ಪ್ರಮುಖ ಶಿಲ್ಪಗಳ ಹಾಗೂ ದೇವರ ಮೂರ್ತಿಯ ಮೂಗನ್ನು ಭಗ್ನ ಮಾಡಿದರು. ಭಗ್ನವಾದ ಮೂರ್ತಿಯನ್ನು ಪೂಜೆ ಮಾಡಲಾಗದು ಎನ್ನುವ ಉದ್ದೇಶದಿಂದ. ಆಗ ನನ್ನ ಮನಸ್ಸಿನಲ್ಲಿ ಒಂದೇ ಆಲೋಚನೆ.. ಈ ಜಾತಿ ಧರ್ಮವೆಂದು ಸುಂದರ ಮೂರ್ತಿಯನ್ನು ನಾಶ ಮಾಡುವುದೆಷ್ಟು ಹೀನ ಕೃತ್ಯವೆಂದು. ಧರ್ಮ ದ್ವೇಷವು ಈ ಜಗತ್ತಿನಿಂದ ಹೊರದೂಡಲು ಸಾಧ್ಯವೇ ಇಲ್ಲವೇ ಅನಿಸಿತು.

ಈ ದೇವಾಲಯವು ಹೊಯ್ಸಳ ವಾಸ್ತುಶಿಲ್ಪದ ಪ್ರಕಾರದಲ್ಲಿ (ನಕ್ಷತ್ರಾಕಾರ) ಕಟ್ಟಲಾಗಿದೆ. ದೇವಾಲಯದ ಸುತ್ತು ಕಾರಿಡಾರ್ ಗಳಿವೆ. ದೇವಾಲಯದ ಒಳಗೆ ಗರ್ಭಗುಡಿಯಲ್ಲಿ ಮೂರು ದೇವರನ್ನು ಸ್ಥಾಪಿಸಲಾಗಿದೆ. ಒಂದರಲ್ಲಿ ಕೇಶವ ಒಂದರಲ್ಲಿ ಜನಾರ್ಧನ ಇನ್ನೊಂದರಲ್ಲಿ ವೇಣುಗೋಪಾಲರ ಮೂರ್ತಿಯನ್ನು ಕಾಣಬಹುದು. ಇದು ವೈಷ್ಣವ ಸಂಪ್ರದಾಯ ದೇವಾಲಯವಾಗಿದೆ. ದೇವಾಲಯದ ದ್ವಾರದ ಮುಂದೆ ಸ್ತಂಭವಿದೆ. ಪ್ರತಿಯೊಂದು ಗರ್ಭಗುಡಿಯ ಮೇಲೆ ಉತ್ತರ ಭಾರತೀಯ ಶೈಲಿಯ ಗೋಪುರ ಇದೆ. ಕೆಡವಿದ ಕೆಲವು ಭಾಗಗಳನ್ನು ವಿಜಯನಗರ ಅರಸರ ಕಾಲದಲ್ಲಿ ದುರಸ್ತಿ ಮಾಡಲಾಯಿತು. ಮುಂದೆ 19 ನೇ ಶತಮಾನದಲ್ಲಿ ಕೂಡ ರಿಪೇರಿ ಆಗಿದೆ ಎಂದು ಗೈಡ್ ಶೋಭಾ ಅವರು ಹೇಳಿದರು. ರಿಪೇರಿಯಾದ ಕಡೆ ಮೂರ್ತಿಯ ಕೆತ್ತನೆಯು ಅಷ್ಟು ಚೆಂದ ಹಾಗೂ ಸೂಕ್ಷ್ಮತೆವಿರಲಿಲ್ಲ. ಕಲ್ಲಿನ ಬಣ್ಣ ಕೂಡ ಬೇರೆಯಿದೆ.

ದೇವಾಲಯದ ಹೊರಗಿನ ಗೋಡೆಯಲ್ಲಿ ಕೃಷ್ಣನ ಕಥೆ,‌ ರಾಮಾಯಣ, ಭಾಗವತ, ಮಹಾಭಾರತ ಕಥೆಗಳ ವಿವಿಧ ಶಿಲ್ಪ ಕಲೆಗಳಿವೆ. ವಿವಿಧ ರೀತಿಯ ಆನೆಗಳು, ಪ್ರತಿಯೊಂದು ಒಂದಕ್ಕಿಂತ ಇನ್ನೊಂದು ಭಿನ್ನ ರೀತಿಯಲ್ಲಿದೆ. ಎಲ್ಲವೂ ಬೆಣಚು ಕಲ್ಲಿನಿಂದ ಮಾಡಿರುವ ಶಿಲ್ಪಗಳು. ಬೆಣಚು ಕಲ್ಲು ಮೃದುವಾಗಿರುವುದರಿಂದ ಕೆತ್ತುವಾಗ ಸುಲಭವಾಗುತ್ತದೆ. ನಂತರ ಗಾಳಿಯ ಪ್ರಭಾವದಿಂದ ಕ್ರಮೇಣ ಗಟ್ಟಿಯಾಗುತ್ತಾ ಹೊಗುತ್ತದೆ.

ಇಲ್ಲಿನ ವಿಶೇಷತೆ ಏನೆಂದರೆ ನಾಲ್ಕು ಶಿಲ್ಪಗಳ ಮೇಲೆ ಶಿಲ್ಪಿಯ ಹೆಸರನ್ನು ಕೂಡ ಕೆತ್ತಿದ್ದಾರೆ. ಅದು ಹಳೆಗನ್ನಡ ಲಿಪಿಯಲ್ಲಿದೆ ಅದನ್ನು ಗೈಡ್ ನಮಗೆ ತೋರಿಸಿದರು. ನಮ್ಮ ಗೈಡ್ ಶೋಭಾರವರ ಬಗ್ಗೆ ಕೇಳಿದಾಗ ಅವರು ತನ್ನ ವೃತ್ತಿಯ ಬಗ್ಗೆ ಅವರ ಉತ್ಸಾಹ ಪ್ರೀತಿಯನ್ನು ಹೇಳಿಕೊಂಡರು. ಚಿಕ್ಕ ಮಗುವನ್ನು ಹಿಡಿದುಕೊಂಡು ಇಲ್ಲಿ ಕಲಿಯಲಿಕ್ಕೆ ಬರುತ್ತಿದ್ದರಂತೆ. ಅವರಿಗೆ ಗೈಡ್ ವೃತ್ತಿ ತುಂಬಾ ನೆಚ್ಚಿನ ಕೆಲಸವೆಂದು ಹೇಳಿದರು. ಅವರಿಗೆ ಬ್ಲೂ ಬ್ಯಾಚ್(blue badge) ಅಂದರೆ ಅವರು ಲೋಕಲ್ ಗೈಡ್ ಆಗಿ ಕೆಲಸ ಮಾಡುತ್ತಾರೆ. ಅವರ ಗಂಡನಿಗೆ ಎಲ್ಲೋ ಬ್ಯಾಡ್ಜ್ ಸಿಕ್ಕಿದೆ ಎಂದು ಹೇಳಿದರು. ಎಲ್ಲೋ ಬ್ಯಾಡ್ಜ್ (yellow badge) ಇದ್ದರೆ ಫಾರಿನ್ ಹೋಗಿ ಅಲ್ಲಿ ಕೆಲಸ ಮಾಡುವ ಅವಕಾಶ ಸಿಗುತ್ತದೆ ಎಂದು ಹೇಳಿದರು. ಈ ಹೊಸ ವಿಷಯ ತಿಳಿದುಕೊಂಡಿದ್ದಕ್ಕೆ ನನಗೆ ಖುಷಿಯಾಯಿತು. ಗೈಡ್ಗಳಲ್ಲೂ ಕೂಡ ಬೇರೆ ಬೇರೆ ರೀತಿಯ ಗೈಡ್ಗಳಿವೆ ಎಂದು ತಿಳಿದದ್ದು ಆ ದಿನ.

ದೇವಸ್ಥಾನದ ಒಳಗಡೆ ಛಾವಣಿ ಕಮಲ ಅರಳುವ ದೃಶ್ಯವನ್ನು ತೋರಿಸುತ್ತದೆ. ಮೊದಲು ಮೊಗ್ಗು, ನಂತರ ಸ್ವಲ್ಪ ಅರಳಿದ ಕಮಲ ಕೊನೆಯಲ್ಲಿ ಪೂರ್ತಿ ಅರಳಿದ ಕಮಲದ ಹೂವು. ಒಳಗೆ ಅನೇಕ ಕಂಬಗಳಿದ್ದವು. ಕಂಬಗಳಲ್ಲಿ ಅನೇಕ ಸುತ್ತುಗಳಿದ್ದವು. ಅವುಗಳನ್ನು ಆನೆಗಳಿಂದ ಮಾಡಲಾಗಿತ್ತು ಎಂದು ಗೈಡ್ ಹೇಳಿದರು. ದೇವಾಲಯದ ಬಗ್ಗೆ ಹೇಳುತ್ತಾ ಹೋದರೆ ಪುಟಗಟ್ಟಲೆ ಬರೆಯಬಹುದು. ಅದನ್ನು ಅಲ್ಲಿ ಹೋಗಿ ನೋಡಿ ಅನುಭವಿಸಿದರೇನೇ ಚೆನ್ನ ಅಲ್ಲವೇ?
ನಂತರ ನಾವು ಕೆಲವು ಫೋಟೋ ತೆಗೆದು ಅಲ್ಲಿಂದ ಒಳ್ಳೆಯ ಅನುಭವದ ಜೊತೆ ಹೊರಟೆವು.

-ಡಾ. ಹರ್ಷಾ ಕಾಮತ್

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.