ಉಡುಪಿ, ನ.11: ಸರ್ವೊಚ್ಚ ನ್ಯಾಯಾಲಯದ ಆದೇಶದಂತೆ ಪಟಾಕಿಗಳ ಮಾರಾಟ ಮತ್ತು ಬಳಕೆ ನಿಯಂತ್ರಿಸುವ ಸಲುವಾಗಿ ನಗರಸಭಾ ವ್ಯಾಪ್ತಿಯಲ್ಲಿ ಪರಿಸರ ಸ್ನೇಹಿ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಹಸಿರು ಪಟಾಕಿಗಳನ್ನು ಹೊರತುಪಡಿಸಿ, ಇತರೆ ಪಟಾಕಿಗಳ ಮಾರಾಟ ಮಾಡುವುದನ್ನು ಮತ್ತು ಸ್ಪೋಟಿಸುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿರುತ್ತದೆ. ಸ್ಪೋಟಕ ಕಾಯ್ದೆ ಅಡಿಯಲ್ಲಿ ಪಟಾಕಿ ಮಾರಾಟ ಮಾಡಲು ಪರವಾನಿಗೆಯನ್ನು ಪಡೆಯದೆ ಮಾರಾಟ ಮಾಡಿದಲ್ಲಿ, ನಿಷೇಧಿತ ಪಟಾಕಿಗಳ ಮಾರಾಟ, ಗಿಫ್ಟ್ ಬಾಕ್ಸ್ ಹಂಚಿಕೆ ಹಾಗೂ ಪಟಾಕಿ ಚೀಟಿ ನಡೆಸುವುದು (ಪಟಾಕಿ ಹಂಚುವುದು) ಕಂಡುಬಂದಲ್ಲಿ ಅಂತಹವರ ಮಾಹಿತಿಯನ್ನು ನಗರಸಭೆಗೆ ನೀಡಿದಲ್ಲಿ ಸದರಿರವರ ವಿರುದ್ದ ಕ್ರಿಮಿನಲ್ ಮೊಕದ್ಧಮೆಯನ್ನು ಹೂಡಿ, ಕ್ರಮಕೈಗೊಳ್ಳಲಾಗುವುದು.
ಹಸಿರು ಪಟಾಕಿಗಳನ್ನು ಹೊರತುಪಡಿಸಿ, ಬೇರೆ ಯಾವುದೇ ರೀತಿಯ ಪಟಾಕಿಗಳ ಮಾರಾಟ ಮತ್ತು ಬಳಕೆಯನ್ನು ನಿಷೇಧಿಸಲಾಗಿರುತ್ತದೆ. ಹಸಿರು ಪಟಾಕಿ ಬಾಕ್ಸ್ಗಳ ಮೇಲೆ ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ ಮತ್ತು ನ್ಯಾಷನಲ್ ಎನ್ವಿರಾನ್ಮೆಂಟಲ್ ಇಂಜಿನಿಯರಿಂಗ್ ರಿಸರ್ಚ್ ಇನ್ಸಿಟಿಟ್ಯೂಟ್ ಇವರ ಲೋಗೋ ಹಾಗೂ ನೊಂದಿತ ಸಂಖ್ಯೆಯೊಂದಿಗೆ ಮುದ್ರಿತವಾಗಿರಬೇಕು. ನಿಷೇಧಿತ ಪಟಾಕಿಗಳ ಮಾರಾಟ ಕಂಡುಬಂದಲ್ಲಿ ಅಂತಹ ಪಟಾಕಿಗಳನ್ನು ವಶಪಡಿಸಿಕೊಳ್ಳಲಾಗುವುದು ಮತ್ತು ನಿಯಮಗಳನ್ವಯ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಹಬ್ಬದ ಸಮಯದಲ್ಲಿ ರಾತ್ರಿ 8 ಗಂಟೆಯಿಂದ 10 ಗಂಟೆವರೆಗೆ ಮಾತ್ರ ಪಟಾಕಿಗಳನ್ನು ಸ್ಪೋಟಿಸಲು ಅವಕಾಶ ನೀಡಿದ್ದು, ರಾತ್ರಿ 10 ಗಂಟೆಯಿಂದ 6 ಗಂಟೆವರೆಗೆ ಪಟಾಕಿ ಸ್ಪೋಟವನ್ನು ನಿಷೇಧಿಸಲಾಗಿದೆ. 125 ಡೆಸಿಬಲ್‌ಗಳಿಗಿಂತಲೂ ಹೆಚ್ಚಿನ ಶಬ್ದ ಮಾಡುವ ಪಟಾಕಿಗಳನ್ನು ಬಳಸುವಂತಿಲ್ಲ. ಸಾಧ್ಯವಾದಷ್ಟು ಹಣತೆ ದೀಪ ಬಳಸುವುದರೊಂದಿಗೆ, ಬೆಳಕಿನ ಹಬ್ಬ ದೀಪಾವಳಿಯನ್ನು ಪರಿಸರ ಸ್ನೇಹಿ ದೀಪಾವಳಿ ಹಬ್ಬ ಆಚರಿಸುವ ಮೂಲಕ ಪರಿಸರ ಮಾಲಿನ್ಯ ಮತ್ತು ಮಾನವ ಪ್ರಾಣಹಾನಿ ತಡೆಗಟ್ಟಲು ನಗರಸಭೆಯೊಂದಿಗೆ ಕೈ ಜೋಡಿಸುವಂತೆ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.