ಮಲ್ಪೆ, ನ.8: ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು, ಉಡುಪಿ ಇಲ್ಲಿನ ೨೦೨೩-೨೪ನೇ ಸಾಲಿನ ಪ್ರಥಮ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಅಭಿವಿನ್ಯಾಸ ಕಾರ್ಯಕ್ರಮ ನಡೆಯಿತು. ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಆಡಳಿತಾಧಿಕಾರಿ ಡಾ. ಜಗದೀಶ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ, ಶೈಕ್ಷಣಿಕವಾಗಿ ಉತ್ತಮ ಹೆಸರು ಗಳಿಸಿರುವ ಈ ಸಂಸ್ಥೆಯಲ್ಲಿ ಹೊಣೆಗಾರಿಕೆಯಿಂದ ಅಧ್ಯಯನ ಮಾಡುವಂತೆ ಕರೆಯಿತ್ತು ಶುಭ ಹಾರೈಸಿದರು. ರೆಡ್‌ಕ್ರಾಸ್ ಘಟಕ ಉಡುಪಿ ಗೌರವ ಕಾರ್ಯದರ್ಶಿ ಡಾ. ಗಣನಾಥ ಶೆಟ್ಟಿ ಎಕ್ಕಾರು ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡುತ್ತಾ, ಸ್ನಾತಕೋತ್ತರ ಅಧ್ಯಯನದಲ್ಲಿ ವೈಚಾರಿಕ ಪ್ರಜ್ಞೆಯೊಂದಿಗೆ ಕೌಶಲ, ಆರೋಗ್ಯ ಮತ್ತು ಮಾನವೀಯ ಮೌಲ್ಯಗಳನ್ನು ರೂಢಿಸಿಕೊಂಡು ಜ್ಞಾನಾರ್ಜನೆ ಮಾಡುವುದು ಇಂದಿನ ಅಗತ್ಯ ಎಂದರು.
ಪ್ರಾಂಶುಪಾಲರಾದ ಪ್ರೊ. ಸುರೇಶ್ ರೈ ಕೆ. ಅಧ್ಯಕ್ಷತೆ ವಹಿಸಿದ್ದರು. ಶೈಕ್ಷಣಿಕ ಸಂಚಾಲಕ ಡಾ. ಪ್ರಸಾದ್ ರಾವ್ ಎಂ., ಐ.ಕ್ಯೂ.ಎ.ಸಿ. ಸಂಚಾಲಕಿ ಡಾ. ಮೇವಿ ಮಿರಾಂದ ಹಾಗೂ ಎಲ್ಲಾ ವಿಭಾಗಗಳ ಮುಖ್ಯಸ್ಥರು ಮತ್ತು ಅಧ್ಯಾಪಕರು ಉಪಸ್ಥಿತರಿದ್ದರು. ಸಮಾಜಶಾಸ್ತ್ರ ವಿಭಾಗ ಮುಖ್ಯಸ್ಥರಾದ ಡಾ. ರಾಘವ ನಾಯ್ಕ ಸ್ವಾಗತಿಸಿ, ಕನ್ನಡ ವಿಭಾಗ ಮುಖ್ಯಸ್ಥ ಪ್ರೊ. ಜಯಪ್ರಕಾಶ್ ಶೆಟ್ಟಿ ಹೆಚ್. ವಂದಿಸಿದರು. ಅಮೃತ ಮತ್ತು ಬಳಗ ಪ್ರಥಮ ಎಂ.ಎ. ಇಂಗ್ಲಿಷ್ ಪ್ರಾರ್ಥಿಸಿದರು. ಕನ್ನಡ ಸಹಾಯಕ ಪ್ರಾಧ್ಯಾಪಕಿ ರತ್ನಮಾಲಾ ಕಾರ್ಯಕ್ರಮ ನಿರೂಪಿಸಿದರು.