ಮಲ್ಪೆ, ನ.6: ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರಿನಲ್ಲಿ ಕಂಪ್ಯೂಟರ್ ಸಾಕ್ಷರತಾ ಕಾರ್ಯಕ್ರಮದ ಅಂಗವಾಗಿ ಇನ್ಪೋಟೆಕ್ ಕೊಡವೂರು ಸಂಸ್ಥೆಯಿಂದ ಕಾಲೇಜಿಗೆ ಐದು ಕಂಪ್ಯೂಟರ್‌ಗಳನ್ನು ದೇಣಿಗೆಯಾಗಿ ಹಸ್ತಾಂತರಿಸಲಾಯಿತು. ಜೊತೆಗೆ ಇನ್ನೂ ಐದು ಕಂಪ್ಯೂಟರ್‌ಗಳನ್ನು ದೇಣಿಗೆಯಾಗಿ ನೀಡುವ ಭರವಸೆಯನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಸುರೇಶ್ ರೈ ಕೆ. ಇಂದಿನ ಡಿಜಿಟಲ್ ಯುಗದಲ್ಲಿ ನಮ್ಮ ಬಹುತೇಕ ದೈನಂದಿನ ವ್ಯವಹಾರಗಳ ಜೊತೆಗೆ ಕಛೇರಿ ವ್ಯವಹಾರಗಳೂ ಡಿಜಿಟಲ್ ಆಗಿರುವುದರಿಂದ ಕಂಪ್ಯೂಟರ್ ಸಾಕ್ಷರತೆ ಅನಿವಾರ್ಯವಾಗಿವುದರ ಜೊತೆಗೆ ವಿದ್ಯಾರ್ಥಿಗಳ ವೃತ್ತಿ ಭವಿಷ್ಯದ ದೃಷ್ಟಿಯಿಂದ ಕೇವಲ ಸಾಕ್ಷರತೆಯಷ್ಟೇ ಅಲ್ಲದೆ ವಿಶೇಷ ಕೌಶಲಗಳನ್ನು ಹೊಂದಿರಬೇಕಾದ ಅನಿವಾರ್ಯತೆಯಿದ್ದು ಈ ನಿಟ್ಟಿನಲ್ಲಿ ಕಾಲೇಜು ಮತ್ತು ಇನ್ಪೋಟೆಕ್ ಸಂಸ್ಥೆಯ ನಡುವಿನ ಎಂ.ಒ.ಯು ಕಾಲೇಜಿನ ವಿದ್ಯಾರ್ಥಿಗಳಿಗೆ ಸಾಕಷ್ಟು ಸಹಕಾರಿ ಎಂದರು.
ಇನ್ಪೋಟೆಕ್ ಸಂಸ್ಥೆಯ ಮುಖ್ಯಸ್ಥರಾದ ಸುರೇಶ್ ಎಸ್. ಸನಿಲ್ ಸಂಸ್ಥೆಯಲ್ಲಿ ಲಭ್ಯವಿರುವ ವಿವಿಧ ಕೋರ್ಸುಗಳ ಮಾಹಿತಿಯನ್ನು ನೀಡಿದರು. ಕಾಲೇಜಿನ ಐಕ್ಯೂಎಸಿ ಸಂಚಾಲಕರಾದ ಡಾ. ಮೇವಿ ಮಿರಾಂದ, ಗ್ರಂಥಪಾಲಕರಾದ ಕೃಷ್ಣ ಸಾಸ್ತಾನ ಉಪಸ್ಥಿತರಿದ್ದರು. ಇನ್ಪೋಟೆಕ್‌ನಲ್ಲಿ ವಿವಿಧ ಸರ್ಟಿಫಿಕೇಟ್ ಕೋರ್ಸುಗಳನ್ನು ಮಾಡಿದ ಕಾಲೇಜಿನ ವಿದ್ಯಾರ್ಥಿಗಳಿಗೆ ಸರ್ಟಿಫಿಕೇಟ್‌ಗಳನ್ನು ವಿತರಿಸಲಾಯಿತು. ರಾಜ್ಯಶಾಸ್ತ್ರ ವಿಭಾಗ ಮುಖ್ಯಸ್ಥ ಪ್ರಶಾಂತ್ ನೀಲಾವರ ಕಾರ್ಯಕ್ರಮ ನಿರೂಪಿಸಿದರು.