ಮಣಿಪಾಲ, ನ.4: ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲವು ಆರೋಗ್ಯ ಸೇವಾ ಪೂರೈಕೆದಾರರ ರಾಷ್ಟ್ರೀಯ ಮಾನ್ಯತಾ ಮಂಡಳಿ ಕ್ವಾಲಿಟಿ ಕೌನ್ಸಿಲ್ ಆಫ್ ಇಂಡಿಯಾದಿಂದ ನರ್ಸಿಂಗ್ ಶ್ರೇಷ್ಠತೆಗಾಗಿ ತನ್ನ ಮರು ಪ್ರಮಾಣೀಕರಣವನ್ನು ಪ್ರಕಟಿಸಿದೆ. ಕಾರ್ಯಕ್ರಮದಲ್ಲಿ ಮಣಿಪಾಲ ಉನ್ನತ ಶಿಕ್ಷಣ ಅಕಾಡೆಮಿ (ಮಾಹೆ) ಮಣಿಪಾಲದ ಸಹಕುಲಾಧಿಪತಿ ಡಾ. ಎಚ್. ಎಸ್. ಬಲ್ಲಾಳ್ ಮತ್ತು ಉಪಕುಲಪತಿ ಲೆಫ್ಟಿನೆಂಟ್ ಜನರಲ್ (ಡಾ) ಎಂ ಡಿ ವೆಂಕಟೇಶ್ ಅವರು ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ನರ್ಸಿಂಗ್ ಸೇವೆಗಳ ಮುಖ್ಯಸ್ಥರಾದ ಡಾ. ಶುಭ ಸೂರಿಯ ಮತ್ತು ನರ್ಸಿಂಗ್ ತಂಡಕ್ಕೆ ಪ್ರಮಾಣಪತ್ರವನ್ನು ಹಸ್ತಾಂತರಿಸಿದರು.
ಸಮಾರಂಭದಲ್ಲಿ ಪ್ರಮುಖರಾದ ಮಾಹೆ ಮಣಿಪಾಲದ ಸಹ ಉಪಕುಲಪತಿಗಳಾದ ಡಾ. ಶರತ್ ಕುಮಾರ್ ರಾವ್, ಕೆಎಂಸಿ ಡೀನ್ ಡಾ. ಪದ್ಮರಾಜ್ ಹೆಗ್ಡೆ, ಮಾಹೆ ಮಣಿಪಾಲದ ಬೋಧನಾ ಆಸ್ಪತ್ರೆಗಳ ಮುಖ್ಯ ನಿರ್ವಹಣಾಧಿಕಾರಿ ಡಾ.ಆನಂದ್ ವೇಣುಗೋಪಾಲ್, ವೈದ್ಯಕೀಯ ಅಧೀಕ್ಷಕ ಅವಿನಾಶ್ ಶೆಟ್ಟಿ, ಮತ್ತು ಗುಣಮಟ್ಟ ಅನುಷ್ಠಾನದ ಸಲಹೆಗಾರ ಡಾ. ಸುನೀಲ್ ಸಿ. ಮುಂಡ್ಕೂರ್ ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಎನ್ಎಬಿಎಚ್ ನಿಂದ ಕಸ್ತೂರ್ಬಾ ಆಸ್ಪತ್ರೆಗೆ ನೀಡಿದ ಮರು ಪ್ರಮಾಣೀಕರಣವು ಶುಶ್ರೂಷಾ ಆರೈಕೆಗಳ ಎಲ್ಲಾ ಅಂಶಗಳಲ್ಲಿ ಅಂತರರಾಷ್ಟ್ರೀಯ ಗುಣಮಟ್ಟವನ್ನು ನಿರ್ವಹಿಸುವಲ್ಲಿ ಗಮನಾರ್ಹ ಸಾಧನೆಯನ್ನು ಪ್ರತಿನಿಧಿಸುತ್ತದೆ. ಇದು ರೋಗಿಗಳ ಆರೈಕೆ, ರೋಗಿಗಳ ಶಿಕ್ಷಣ ಮತ್ತು ಜಾಗೃತಿ, ಶುಶ್ರೂಷಾ ಸಂಪನ್ಮೂಲ ನಿರ್ವಹಣೆ, ಶುಶ್ರೂಷಾ ಆರೈಕೆಯ ಗುಣಮಟ್ಟ, ಪರಿಣಾಮಕಾರಿ ಸಂವಹನ ಮತ್ತು ಮಾರ್ಗದರ್ಶನ, ಹಾಗೆಯೇ ಕಠಿಣ ಸೋಂಕು ನಿಯಂತ್ರಣ ಕ್ರಮಗಳನ್ನು ಒಳಗೊಂಡಿದೆ.
ನರ್ಸಿಂಗ್ ಎಕ್ಸಲೆನ್ಸ್ ಪ್ರಮಾಣೀಕರಣವು ಪ್ರತಿಷ್ಠಿತ ಕಾರ್ಯಕ್ರಮವಾಗಿದ್ದು, ಇದನ್ನು ಆರೋಗ್ಯ ಸೇವಾ ಪೂರೈಕೆದಾರರ ರಾಷ್ಟ್ರೀಯ ಮಾನ್ಯತಾ ಮಂಡಳಿ ಕ್ವಾಲಿಟಿ ಕೌನ್ಸಿಲ್ ಆಫ್ ಇಂಡಿಯಾದ ಅಭಿವೃದ್ಧಿಪಡಿಸಿದೆ. ಆರೋಗ್ಯ ಜಾಗೃತಿ, ರೋಗ ತಡೆಗಟ್ಟುವಿಕೆ ಮತ್ತು ಚಿಕಿತ್ಸಕ ಶುಶ್ರೂಷಾ ಆರೈಕೆಯನ್ನು ಒಳಗೊಂಡಿರುವ ಸಮಗ್ರ ಶುಶ್ರೂಷಾ ಆರೈಕೆಯನ್ನು ಒದಗಿಸುವುದು ಇದರ ಪ್ರಾಥಮಿಕ ಗುರಿಯಾಗಿದೆ. ಆಸ್ಪತ್ರೆಯೊಳಗಿನ ಎಲ್ಲಾ ರೋಗಿಗಳಿಗೆ ಮತ್ತು ವಿಶಾಲ ಸಮುದಾಯಕ್ಕೆ ಸಹಾನುಭೂತಿ ಮತ್ತು ಸೌಕರ್ಯದೊಂದಿಗೆ ಸುರಕ್ಷಿತ, ಸಮರ್ಥ ಮತ್ತು ನೈತಿಕ ಶುಶ್ರೂಷಾ ಆರೈಕೆಯ ವಿತರಣೆಯನ್ನು ಇದು ಖಾತ್ರಿಗೊಳಿಸುತ್ತದೆ.
ಡಾ.ಎಚ್.ಎಸ್ ಬಲ್ಲಾಳ್ ಮತ್ತು ಲೇ. ಜ. (ಡಾ)ಎಂ.ಡಿ. ವೆಂಕಟೇಶ್ ಅವರು ಮಾತನಾಡಿ, ಯಾವುದೇ ಆಸ್ಪತ್ರೆಯಲ್ಲಿ ರೋಗಿಗಳ ಚಿಕಿತ್ಸೆ ಮತ್ತು ಆರೈಕೆಯಲ್ಲಿ ಶುಶ್ರೂಷಾ ಸೇವೆಯು ಬಹು ಮುಖ್ಯವಾಗಿದ್ದು, ಈ ನಿಟ್ಟಿನಲ್ಲಿ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯು ಆರೋಗ್ಯ ಮತ್ತು ಶುಶ್ರೂಷೆ ಸೇವೆಗಳಲ್ಲಿ ಉತ್ಕೃಷ್ಟತೆಗೆ ತನ್ನ ಬದ್ಧತೆಯನ್ನು ಎತ್ತಿಹಿಡಿಯುವುದನ್ನು ಮುಂದುವರೆಸಿದೆ. ಈ ಮರು ಪ್ರಮಾಣೀಕರಣವು ರೋಗಿಗಳ ಆರೋಗ್ಯ, ಆರೈಕೆ ಮತ್ತು ಸಂಬಂಧಿತ ಸೇವಗಳ ಗುಣಮಟ್ಟವನ್ನು ಉನ್ನತ ಗುಣಮಟ್ಟಕ್ಕೆ ತಲುಪಿಸಲು ಆಸ್ಪತ್ರೆಯ ಸಮರ್ಪಣಾಭಾವವನ್ನು ಒತ್ತಿ ಹೇಳುತ್ತದೆ ಎಂದು ಹೇಳಿದರು.