ಕಾಪು, ಅ.8: ಕಾಪು ತಾಲೂಕಿನ ಪಿಲಾರು ಗ್ರಾಮದ ಕನ್ಯಾನ ಮೇಲ್ಮನೆ ಪ್ರೇಮನಾಥ ಶೆಟ್ಟಿಯವರ ಅಬೆಕಾರು ಗದ್ದೆಯಲ್ಲಿರುವ ಎರಡು ಶಾಸನೋಕ್ತ ವೀರಗಲ್ಲುಗಳನ್ನು ಎಂ.ಎಸ್.ಆರ್.ಎಸ್ ಕಾಲೇಜಿನ ಪ್ರಥಮ, ದ್ವಿತೀಯ ಮತ್ತು ಅಂತಿಮ ಬಿ.ಎ ವಿದ್ಯಾರ್ಥಿಗಳು ಇಲ್ಲಿನ ಇತಿಹಾಸ ಮತ್ತು ಪುರಾತತ್ವ ಉಪನ್ಯಾಸಕರಾದ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ಇವರ ಮಾರ್ಗದರ್ಶನದಲ್ಲಿ ಮರು ಅಧ್ಯಯನಕ್ಕೆ ಒಳಪಡಿಸಿದ್ದು, ಹೆಚ್ಚಿನ ಮಾಹಿತಿಯನ್ನು ಕಲೆಹಾಕಿರುತ್ತಾರೆ.
ಈ ಶಾಸನೋಕ್ತ ವೀರಗಲ್ಲನ್ನು ಕಣ ಶಿಲೆಯಲ್ಲಿ ಕೆತ್ತಲಾಗಿದ್ದು, 180 ಸೆಂ.ಮೀ ಉದ್ದ ಹಾಗೂ 58 ಸೆಂ.ಮೀ ಅಗಲವಿದೆ. ವೀರಗಲ್ಲಿನ ಮುಂಭಾಗದಲ್ಲಿ ಮೂರು ಪಟ್ಟಿಕೆಗಳಿದ್ದು, ಕೆಳಗಿನ ಪಟ್ಟಿಕೆಯಲ್ಲಿ ಗಜ ಮತ್ತು ಅಶ್ವದೊಂದಿಗೆ ವೀರರು ಹೋರಾಡುವ ದೃಶ್ಯ, ಎರಡನೆಯ ಪಟ್ಟಿಕೆಯಲ್ಲಿ ವೇಳಾವೇಳಿಯಾಗಿ ಕುಳಿತ ವೀರನ ಕೆತ್ತನೆಯಿದ್ದು, ಈತನ ಮುಂಭಾಗದಲ್ಲಿ ಸ್ತ್ರೀ ಹಾಗೂ ಹಿಂಭಾಗದಲ್ಲಿ ಸೇವಕರು ತತ್ರ (ಕೊಡೆ)ವನ್ನು ಹಿಡಿದಿರುವಂತೆ ಕೆತ್ತಲಾಗಿದೆ. ಕೊನೆಯ ಪಟ್ಟಿಕೆಯಲ್ಲಿ ಶಿವಲಿಂಗ, ನಂದಿ, ಕೈ ಮುಗಿದಿರುವ ವೀರ, ಸ್ತ್ರೀ – ಪುರುಷರ ಹಾಗೂ ಶಿವಲಿಂಗದ ಮೇಲ್ಭಾಗದಲ್ಲಿ ಇರ್ವರು ಗಂಧರ್ವರನ್ನು ಕೆತ್ತಲಾಗಿದೆ.
ವೀರಗಲ್ಲಿನ ಹಿಂಭಾಗದಲ್ಲಿ 9 ಸಾಲಿನ 11 ನೇ ಶತಮಾನದ ಕನ್ನಡ ಲಿಪಿ ಮತ್ತು ಭಾಷೆಯ ಶಾಸನವನ್ನು ಕೊರೆಯಲಾಗಿದೆ. ಈ ಮೊದಲು ಈ ಶಾಸನೋಕ್ತ ವೀರಗಲ್ಲನ್ನು ಅಧ್ಯಯನ ಮಾಡಿದ ವಿದ್ವಾಂಸರು ಇದನ್ನು ಹೊಯ್ಸಳ ವಿಷ್ಣುವರ್ಧನನ ಕಾಲದ್ದೆಂದು ಹೇಳಿದ್ದಾರೆ. ಶಾಸನದಲ್ಲಿರುವ “ಶ್ರೀ ಮನ್ಮಹಾ ಮನ್ಡಳೇಶ್ವರ” ಎಂಬುದನ್ನು ಶ್ರೀಮತು ಹೊಯಿಸಳೇಶ್ವರ ಎಂದು, “ತ್ರಿಭುವನಮಲ್ಲ ಭುಜಬಳ ಗಂಗ ಎರ್ಮಾಡಿ ದೇವರ್ಗ್ಗೆ” ಎಂಬುದನ್ನು ತ್ರಿಭುವನಮಲ್ಲ ಭುಜಬಳ ಗಂಡ ಮಾಚ ದೇವಗ್ಗೆ ಎಂದು, ವಿಕ್ರಾಯ್ತವೆಗ್ಗಡೆ ಇರುವುದನ್ನು ಶ್ರೀಯ ವೆಗ್ಗಡೆ ಎಂದು ಓದಿರುತ್ತಾರೆ.
ಈ ಶಾಸನೋಕ್ತ ವೀರಗಲ್ಲು ಕಲ್ಯಾಣ ಚಾಲುಕ್ಯ 6 ನೇ ವಿಕ್ರಮಾದಿತ್ಯನ ಬಿರುದನ್ನು ನೇರವಾಗಿ ಉಲ್ಲೇಖಿಸುವುದಲ್ಲದೆ ತನಕ ಎಂಬ ವ್ಯಕ್ತಿಯು ವೇಳೆವಾಳಿಯಾಗಿದರ ಬಗ್ಗೆ ತಿಳಿಸುತ್ತದೆ. ತನಕ ಎಂಬ ವ್ಯಕ್ತಿಯು ರಾಜನ ಆಪ್ತನಾಗಿದ್ದು, ಯುದ್ಧದಲ್ಲಿ ವೀರಾವೇಶದಿಂದ ಹೋರಾಡಿ ವೀರಸ್ವರ್ಗವನ್ನು ಹೊಂದಿದ ನೆನಪಿಗಾಗಿ ಈ ವೇಳೆವಾಳಿ ಶಾಸನವನ್ನು ಕುನೆಹೊತ್ರೆಯ ಬಳಿಯ ಮಾಕು ಎವತನ ಮಗ ನಾಂಕನು ನಿಲ್ಲಿಸಿದ ಎಂಬುದನ್ನು ಶಾಸನವು ಉಲ್ಲೇಖಿಸುತ್ತದೆ. ಇಲ್ಲಿಯೇ ತುಂಡಾಗಿರುವ ಇನ್ನೊಂದು ಶಾಸನೋಕ್ತ ವೀರಗಲ್ಲು ಇದ್ದು, ಕಣ (ಗ್ರಾನೈಟ್) ಶಿಲೆಯಲ್ಲಿ ಕೆತ್ತಲಾಗಿದೆ. ಈ ವೀರಗಲ್ಲಿನ ಮುಂಭಾಗದಲ್ಲಿ ಉಬ್ಬುಚಿತ್ರಗಳಿದ್ದು, ಎರಡು ಪಟ್ಟಿಕೆಯಲ್ಲಿ ಶಾಸನವನ್ನು ಕೊರೆಯಲಾಗಿದೆ. ಹಿಂಭಾಗದಲ್ಲಿಯೂ ಕಲ್ಯಾಣ ಚಾಲುಕ್ಯ ದೊರೆ 6 ನೇ ವಿಕ್ರಮಾದಿತ್ಯನ ಬಿರುದನ್ನು ಹೊಂದಿರುವ ನಾಲ್ಕು ಸಾಲಿನ ಶಾಸನವನ್ನು ಕೊರೆಯಲಾಗಿದೆ.
ಈ ಎರಡು ಶಾಸನೋಕ್ತ ವೀರಗಲ್ಲುಗಳು ಹೊಯ್ಸಳ ವಿಷ್ಣುವರ್ಧನನ ಆಳ್ವಿಕೆಗೆ ಸೇರಿರದೆ ಕಲ್ಯಾಣ ಚಾಲುಕ್ಯ ದೊರೆ 6ನೇ ವಿಕ್ರಮಾದಿತ್ಯನ ಕಾಲ ಮತ್ತು ಆಳ್ವಿಕೆಗೆ ಸೇರುತ್ತದೆ ಎಂಬುದು ಮರು ಅಧ್ಯಯನದಿಂದ ದೃಢಪಟ್ಟಿದೆ. ಈ ಕ್ಷೇತ್ರಕಾರ್ಯ ಶೋಧನೆಯಲ್ಲಿ ಪ್ರೇಮನಾಥ ಶೆಟ್ಟಿ ಮತ್ತು ಸೋಮನಾಥ್ ಕುತ್ಯಾರು ಅವರು ಸಹಕಾರ ನೀಡಿರುತ್ತಾರೆ.