ಕೋಟ, ಅ. 8: ಕಾರಂತರದ್ದು ಪದಗಳಲ್ಲಿ ಕಟ್ಟಿಕೊಡದಂತಹ್ ವ್ಯಕ್ತಿತ್ವ. ಸಾಹಿತ್ಯಿಕ-ಸಾಂಸ್ಕೃತಿಕ, ಹೋರಾಟ, ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಎಲ್ಲರಿಗೂ ಮಾದರಿಯಾದವರು, ನುಡಿದಂತೆ ನಡೆದು ಯುವಜನರಿಗೆ ಪ್ರೇರಣೆಯಾದವರು. ಇಂತಹ ಮೇರು ವ್ಯಕ್ತಿತ್ವದ ಕಾರಂತರ ಬದುಕು ಬರಹ ಮುಂದಿನ ಜನಾಂಗಕ್ಕೆ ತಲುಪಬೇಕು. ಈ ನಿಟ್ಟಿನಲ್ಲಿ ಥೀಮ್ ಪಾರ್ಕ್ನ ಚಟುವಟಿಕೆ ಶ್ಲಾಘನೀಯ ಎಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹರೀಶ್ ಕುಮಾರ್ ಶೆಟ್ಟಿ ಹೇಳಿದರು. ಅವರು ಕೋಟದ ಡಾ. ಶಿವರಾಮ ಕಾರಂತ ಥೀಮ್ ಪಾರ್ಕ್ ನಲ್ಲಿ ಕೋಟತಟ್ಟು ಗ್ರಾಮ ಪಂಚಾಯತ್, ಡಾ. ಶಿವರಾಮ ಕಾರಂತ ಟ್ರಸ್ಟ್ (ರಿ) ಉಡುಪಿ, ಡಾ. ಶಿವರಾಮ ಕಾರಂತ ಹುಟ್ಟೂರ ಪ್ರತಿಷ್ಠಾನ (ರಿ)ಕೋಟ ಆಶ್ರಯದಲ್ಲಿ ಡಾ. ಶಿವರಾಮ ಕಾರಂತ ಜನ್ಮದಿನೋತ್ಸವ ಮತ್ತು ಹುಟ್ಟೂರ ಪ್ರಶಸ್ತಿಗೆ 19 ನೇ ವರುಷದ ಸಂಭ್ರಮ ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಇಂಪನ- 2023 (ಸಂಗೀತ ಸಂಪುಟದ ಸಂಚಲನ) ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ ಚಲನಚಿತ್ರ ಉತ್ಸವ, ಸಂವಾದ ಮಾತುಕತೆ ಹಾಗೂ ಕಾರಂತ ದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.
ಚಲನಚಿತ್ರ ನಟ ಪ್ರದೀಪ್ ಕುಮಾರ್ ಶೆಟ್ಟಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಿವೇಕ್ ಅಮೀನ್, ಕೋಟತಟ್ಟು ಗ್ರಾಮ ಪಂಚಾಯತ್ ಸದಸ್ಯರಾದ ಪ್ರಕಾಶ್ ಹಂದಟ್ಟು, ಪೂಜಾ ಹಂದಟ್ಟು ಉಪಸ್ಥಿತರಿದ್ದರು. ಮಂಜುನಾಥ್ ಗುಂಡ್ಮಿ ಕಾರ್ಯಕ್ರಮ ನಿರೂಪಿಸಿದರು. ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಭಾ ಕಾರ್ಯಕ್ರಮದ ನಂತರ ಕೋಟ ವಿವೇಕ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳಿಂದ ಕಾರಂತ ದರ್ಶನ ಹಾಗೂ ಕಾಂತಾರ ಸಿನಿಮಾ ಪ್ರದರ್ಶನ ನಡೆಯಿತು.