ಉಡುಪಿ, ಸೆ.30: ಕರ್ನಾಟಕ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಕಾಯ್ದೆ ಮತ್ತು ಕರ್ನಾಟಕ ನಿಯಮಗಳ ಅಡಿಯಲ್ಲಿ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳನ್ನು ನೋಂದಣಿ ಮಾಡುವ ಕುರಿತು ಜಿಲ್ಲೆಯ ವ್ಯಾಪಾರ ಸಂಘ ಸಂಸ್ಥೆಗಳ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳೊಂದಿಗೆ ಸಭೆಯು ಮಣಿಪಾಲ ರಜತಾದ್ರಿಯ ಕಾರ್ಮಿಕ ಅಧಿಕಾರಿಗಳ ಕಚೇರಿಯಲ್ಲಿ, ಜಿಲ್ಲಾ ಕಾರ್ಮಿಕ ಅಧಿಕಾರಿ ಕುಮಾರ್ ಬಿ.ಆರ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಜಿಲ್ಲಾ ವ್ಯಾಪ್ತಿಯ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಯ ಮಾಲೀಕರು ಮತ್ತು ಉದ್ಯಮದಾರರು ಕರ್ನಾಟಕ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆ ಕಾಯ್ದೆಯಡಿ ಉದ್ದಿಮೆ, ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳನ್ನು ನಿಯಮಾನುಸಾರ ನೋಂದಣಿ ಮಾಡಿಸುವುದು ಕಡ್ಡಾಯವಾಗಿದ್ದು, ಈಗಾಗಲೇ ನೋಂದಾಯಿತ ಸಂಸ್ಥೆಗಳನ್ನು ಹೊರತುಪಡಿಸಿ, ಉಳಿದ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಮಾಲೀಕರು ಹಾಗೂ ಉದ್ದಿಮೆದಾರರು ತಮ್ಮ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳನ್ನು ಸಂಬಂಧಿಸಿದ ತಾಲೂಕು ನಿರೀಕ್ಷಕರ ಕಛೇರಿ ವ್ಯಾಪ್ತಿಯಲ್ಲಿ ವೆಬ್‌ಸೈಟ್ https://www.ekarmika. karnataka.gov.in/ekarmika/Static/Home.aspx ನಲ್ಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ ನೋಂದಾಯಿಸಬಹುದಾಗಿದೆ. ತಪ್ಪಿದ್ದಲ್ಲಿ ನಿಯಮಾನುಸಾರ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು. ಈ ಕುರಿತು ಮಾಹಿತಿಗಾಗಿ ತಮ್ಮ ವ್ಯಾಪ್ತಿಯ ತಾಲೂಕು ನಿರೀಕ್ಷಕರ ಕಛೇರಿ 1 ಮತ್ತು 2 ನೇ ವೃತ್ತ ಉಡುಪಿ, ಕುಂದಾಪುರ ವೃತ್ತ ಹಾಗೂ ಕಾರ್ಕಳ ವೃತ್ತ ಕಛೇರಿಗಳನ್ನು ಸಂಪರ್ಕಿಸಬಹುದು ಎಂದರು.
ಸಭೆಯಲ್ಲಿ ಚೇಂಬರ್ ಆಫ್ ಕಾಮರ್ಸ್ (ರಿ) ಉಡುಪಿಯ ಅಧ್ಯಕ್ಷ ಅಂಡಾರು ದೇವಿ ಪ್ರಸಾದ್ ಶೆಟ್ಟಿ, ಕಾರ್ಯದರ್ಶಿ ಬಿ.ಜಿ ಲಕ್ಷ್ಮಿಕಾಂತ ಬೆಸ್ಕೂರು, ಜಿಲ್ಲಾ ಖಾದ್ಯ ತಿನಿಸುಗಳ ತಯಾರಿಕ ಮತ್ತು ಮಾರಾಟಗಾರ ಸಂಘದ ಅಧ್ಯಕ್ಷ ವಿಶ್ವನಾಥ ಕುಲಾಲ್, ವರ್ತಕರ ಸಂಘದ ಅಧ್ಯಕ್ಷೆ ಸಹನಶೀಲ ಪೈ, ಅಖಿಲ ಭಾರತ ಮಹಿಳಾ ಸೌಂದರ್ಯ ತಜ್ಞೆಯರ ಸಂಘದ ಜಿಲ್ಲಾ ಅಧ್ಯಕ್ಷೆ ಮರಿಯಾ, ಕಾರ್ಯದರ್ಶಿ ವೇದಾ, ಟೈಲರ್ ಅಸೋಸಿಯೇಷನ್‌ನ ಜಿಲ್ಲೆಯ ಅಧ್ಯಕ್ಷ ಗುರುರಾಜ ಎಮ್ ಶೆಟ್ಟಿ, ಕಾರ್ಯದರ್ಶಿ ದಯಾನಂದ ಕೋಟ್ಯಾನ್, ಜಿಲ್ಲಾ ವರ್ತಕರ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಆನಂದ ಕಾರ್ನಡ ಉಪಾಧ್ಯಕ್ಷ ಮ್ಯಾಕ್ಸಿಮ್ ಸಲ್ದಾನ್, ಕಾರ್ಯದರ್ಶಿ ಡೊನಾಲ್ಡ್ ಸಲ್ದಾನ್ ಮತ್ತು ಉಡುಪಿ ಒಂದನೇ ವೃತ್ತ ಕಾರ್ಮಿಕ ನಿರೀಕ್ಷಕ ಸಂಜಯ್ ಎನ್.ಪಿ.ಎಲ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.