ಉಡುಪಿ, ಸೆ. 7: ಜಿಲ್ಲಾ ಪಂಚಾಯತ್ ಉಡುಪಿ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ, ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ, ತಾಲೂಕು ಪಂಚಾಯತ್ ಬೈಂದೂರು, ಗ್ರಾಮ ಪಂಚಾಯತ್ ಹಳ್ಳಿಹೊಳೆ, ಸ್ಪೊರ್ತಿ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಹಳ್ಳಿಹೊಳೆ ಇವರ ಆಶ್ರಯ ದಲ್ಲಿ ಪರಿಶಿಷ್ಟ ಪಂಗಡದ ಮಹಿಳೆಯರು ಪ್ರಾರಂಭಿಸಿರುವ ಸಂಜೀವಿನಿ ಅಡಿಕೆ ಹಾಳೆ ತಯಾರಿಕಾ ಘಟಕವನ್ನು ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಗುರುವಾರ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ನಗರ ಪ್ರದೇಶದಲ್ಲಿ ಬೇರೆ ಬೇರೆ ಚಟುವಟಿಕೆ ನೆಡಸಲು ಪೂರಕವಾದ ವಾತಾವರಣ ಹಾಗೂ ಸೌಲಭ್ಯವಿದ್ದು ಆದರೆ ಗ್ರಾಮೀಣ ಭಾಗದ ಕಟ್ಟಕಡೆಯ ಪ್ರದೇಶದಲ್ಲಿ ಇಲ್ಲಿ ಲಭ್ಯವಿರುವ ವ್ಯವಸ್ಥೆಯನ್ನು ಬಳಸಿಕೊಂಡು ಇಂದು ಬೈಂದೂರು ತಾಲೂಕಿನ ಅತ್ಯಂತ ಗ್ರಾಮೀಣ ಪ್ರದೇಶವಾದ ಹಳ್ಳಿಹೊಳೆಯಲ್ಲಿ ಸಂಜೀವಿನಿ ಮಹಿಳೆಯರು ಸೇರಿಕೊಂಡು ನಡೆಸುವ ಅಡಿಕೆ ಹಾಳೆ ತಯಾರಿಕಾ ಘಟಕ ನಿರ್ಮಾಣಗೊಂಡಿದ್ದು ಆ ಮೂಲಕ ಗ್ರಾಮೀಣ ಭಾಗದ ಮಹಿಳೆಯರಿಗೂ ಸಂಜೀವಿನಿ ಯೋಜನೆಯ ಸೌಲಭ್ಯ ಇಂದು ತಲುಪುವುಂತಾಗಿದೆ ಎಂದರು.
ಈ ಚಟುವಟಿಕೆ ಒಂದು ಮಾದರಿ ಚಟುವಟಿಕೆ ಹಿಂದಿನ ಕಾಲದ ಗುಡಿ ಕೈಗಾರಿಕೆ ರೀತಿ ಪ್ರತಿ ಮನೆ ಮನೆಯಲ್ಲೂ ಅಲ್ಲಿ ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿಕೊಂಡು ಸ್ವ ಉದ್ಯೋಗ ಪ್ರಾರಂಭಿಸಿದರೆ ಸಮೃದ್ಧ ಬೈಂದೂರು ಪರಿಕಲ್ಪನೆಗೆ ಇದೊಂದು ಮೊದಲ ಹೆಜ್ಜೆ ಇಟ್ಟಂತಾಗುವುದು. ಈ ಭಾಗದಲ್ಲಿ ಮುಂದಿನ ದಿನಗಳಲ್ಲಿ ಇಕೋ ಪ್ರವಾಸಿ ತಾಣ, ಹೋಮ್ ಸ್ಟೇ ಗಳನ್ನು ಸಂಜೀವಿನಿ ಮಹಿಳೆಯರಿಂದ ಪ್ರಾರಂಭಿಸುವ ಆಲೋಚನೆ ಹೊಂದಲಾಗಿದೆ. ಬೈಂದೂರು ಗ್ರಾಮೀಣ ಭಾಗದ ಸಂಜೀವಿನಿ ಮಹಿಳೆಯರ ಸಬಲೀಕರಣಕ್ಕೆ ಬೇರೆ ಬೇರೆ ವಿಶಿಷ್ಟ ಯೋಜನೆ ಹಮ್ಮಿಕೊಳ್ಳುವ ಗುರಿ ಹೊಂದಲಾಗಿದೆ. ಮಹಿಳೆಯರ ಆಲೋಚನೆಗೆ ಶಕ್ತಿ ತುಂಬಿರೋದು ಸಂಜೀವಿನಿ, ಮಹಿಳೆಯರ ದುಡಿಮೆಗೆ ಶಕ್ತಿ ತುಂಬಿರೋದು ಸಂಜೀವಿನಿ ಆದ್ದರಿಂದ ಈ ಸಂಜೀವಿನಿ ಯೋಜನೆಯನ್ನು ಇನ್ನಷ್ಟು ಬೆಳೆಸುವುದು ನಮ್ಮೆಲ್ಲರ ಹೊಣೆ ಈ ಮೂಲಕ ಭಾರತ ಸರಕಾರದ ಮಹತ್ವಕಾಂಕ್ಷೆಯ ಈ ಯೋಜನೆಯನ್ನು ಮನೆ ಮನೆಯಲ್ಲೂ ಹೆಣ್ಣು ಮಗಳು ಸೇರುವುದರ ಮೂಲಕ ಯೋಜನೆ ಯಶಸ್ಸುಗೊಳ್ಳಲ್ಲಿ. ನೂತನವಾಗಿ ನಿರ್ಮಾಣಗೊಂಡ ಹಾಳೆ ತಟ್ಟೆ ಘಟಕವು ಸಂಜೀವಿನಿ ಮಹಿಳೆಯರ ಬದುಕು ಹಸನಾಗಿಸಲಿ ಎಂದು ಶಾಸಕ ಗಂಟಿಹೊಳೆ ಶುಭ ಹಾರೈಸಿದರು.
ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಭಾರತಿ ಎನ್ ಮಾತನಾಡಿ, ಇಂದು ಸಂಜೀವಿನಿ ಯೋಜನೆ ಮೂಲಕ ಬೈಂದೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಂಜೀವಿನಿ ಯೋಜನೆಯ ಮಹಿಳೆಯರ ಸಬಲೀಕರಣಕ್ಕೆ ಅನೇಕ ಕಾರ್ಯಕ್ರಮಗಳನ್ನು ಪ್ರಾರಂಭಿಸಲಾಗಿದೆ. ಇಂದು ಬೈಂದೂರು ವಿಧಾನ ಸಭಾ ಕ್ಷೇತ್ರದ ಶಾಸಕರು ಸಂಜೀವಿನಿ ಯೋಜನೆಯನ್ನು ಉತ್ತಮ ರೀತಿಯಲ್ಲಿ ಅಭಿವೃದ್ಧಿಪಡಿಸುವ ಗುರಿ ಹೊಂದಿದ್ದಾರೆ. ಇಂದು ಹಳ್ಳಿಹೊಳೆ ಗ್ರಾಮದಲ್ಲಿ ಮಹಿಳೆಯರು ಪ್ರಾರಂಭಿಸಿರುವ ಅಡಿಕೆ ಹಾಳೆ ತಯಾರಿಕ ಘಟಕ ಇದೊಂದು ಮಾದರಿ ಯೋಜನೆ ಹಾಗೂ ಪ್ರತಿಯೊಂದು ಮಹಿಳೆಯರು ಸರಕಾರದ ಯೋಜನೆಯ ಸೌಲಭ್ಯ ಪಡೆದು ಸಾಮಾಜಿಕವಾಗಿ ಆರ್ಥಿಕವಾಗಿ ಸಬಲೀಕರಣಗೊಳ್ಳಬೇಕು ಎಂದು ತಿಳಿಸಿದರು. ತಯಾರಿಕ ಘಟಕದಲ್ಲಿ ಮಹಿಳೆಯರು ಆಸಕ್ತಿಯಿಂದ ಕೆಲಸ ನಿರ್ವಹಿಸಿ ಮುಂದೆ ಈ ಘಟಕವನ್ನು ಇನ್ನಷ್ಟು ವಿಸ್ತರಿಸುವ ಉದ್ದೇಶ ಹೊಂದಬೇಕು ಎಂದು ತಿಳಿಸಿದರು.
ಗ್ರಾ. ಪಂ. ಅಧ್ಯಕ್ಷ ಮಂಜುನಾಥ ಶೆಟ್ಟಿ ಮಾತನಾಡಿ, ಮಹಿಳೆಯರು ಮತ್ತು ಗ್ರಾಮದ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುವುದಾಗಿ ತಿಳಿಸಿದರು. ಗ್ರಾ.ಪಂ ಮಾಜಿ ಅಧ್ಯಕ್ಷ ಪ್ರದೀಪ್ ಕೊಠಾರಿ, ಸ್ಪೂರ್ತಿ ಸಂಜೀವಿನಿ ಒಕ್ಕೂಟ ಅಧ್ಯಕ್ಷೆ ಸಾಧನ, ಜಿಲ್ಲಾ ವ್ಯವಸ್ಥಾಪಕ ಅವಿನಾಶ್, ಗ್ರಾ. ಪಂ ಅಭಿವೃದ್ಧಿ ಅಧಿಕಾರಿ ರುಕ್ಕನ್ ಗೌಡ, ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಯತೀಶ್, ಗ್ರಾಮ ಪಂಚಾಯತ್ ಸಿಬ್ಭಂದಿ ವರ್ಗ, ಸಂಜೀವಿನಿ ಒಕ್ಕೂಟ್ಟದ ಕಾರ್ಯದರ್ಶಿ ಅಶ್ವಿನಿ ಚಾತ್ರ, ಸ್ಪೂರ್ತಿ ಸಂಜೀವಿನಿ ಒಕ್ಕೂಟದ ಸರ್ವ ಪದಾಧಿಕಾರಿಗಳು ಉಪಸ್ಥಿತರಿದ್ದರು.