ಪರ್ಕಳ, ಸೆ. 5: ಶ್ರೀ ದುರ್ಗಾಪರಮೇಶ್ವರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ (ಲಿ.) ಪರ್ಕಳ ಇದರ 2022-23 ನೇ ಸಾಲಿನ ವಾರ್ಷಿಕ ಮಹಾಸಭೆಯು ಶ್ರೀ ನರಸಿಂಹ ಸಭಾಭವನ ನರಸಿಂಗೆಯಲ್ಲಿ ಸೊಸೈಟಿಯ ಅಧ್ಯಕ್ಷರಾದ ಅಶೋಕ್ ಕಾಮತ್‌ರವರ ಅಧ್ಯಕ್ಷತೆಯಲ್ಲಿ ಜರಗಿತು. 2022-23ರ ಅಂತ್ಯಕ್ಕೆ ಸಂಘದ ಪಾಲು ಬಂಡವಾಳ ರೂ 1.64 ಕೋಟಿ, ನಿಧಿಗಳು ರೂ 9.82 ಕೋಟಿ, ಠೇವಣಿ ರೂ 102.35 ಕೋಟಿ, ಸಾಲಗಳು ರೂ 67.48 ಕೋಟಿ, ನಿವ್ವಳ ಲಾಭ ರೂ 2.25 ಕೋಟಿ ಗಳಿಸಿ ಶೇ 13% ಪಾಲು ಮುನಾಫೆ ಘೋಷಿಸಿ ವಾರ್ಷಿಕ ರೂ 395 ಕೋಟಿ ವ್ಯವಹಾರ ನಡೆಸಿದಲ್ಲದೇ ಉಡುಪಿಯಲ್ಲಿ 100 ಕೋಟಿಗೂ ಮಿಕ್ಕ ಠೇವಣಿ ಹೊಂದಿರುವ ಸಹಕಾರಿ ಸಂಘಗಳ ಸಾಲಿನಲ್ಲಿ ಸೇರ್ಪಡೆಗೊಂಡಿತು.
ಎಸ್.ಎಸ್.ಎಲ್.ಸಿ ಯಲ್ಲಿ ಶೇ. 90 ಯಾ ಅಧಿಕ ಅಂಕ ಗಳಿಸಿದ 28 ವಿದ್ಯಾರ್ಥಿಗಳಿಗೆ, ಪಿ.ಯು.ಸಿಯಲ್ಲಿ ಶೇ. 80 ಯಾ ಅಧಿಕ ಅಂಕಗಳಿಸಿದ 33 ‘ಎ’ ವರ್ಗದ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿ ಪ್ರೋತ್ಸಾಹ ಬಹುಮಾನ ವಿತರಿಸಲಾಯಿತು. ನಿಧಿ ಪ್ರಭು ಕ್ರೀಡಾ ಕ್ಷೇತ್ರದ ಸಾಧನೆಗೆ, ರತನ್ ಪಾಟ್ಕರ್ ಚಿನ್ನದ ಪದಕ ಇಂಜೀನಿಯರಿಂಗ್‌ನ ಸಾಧನೆಗೆ ಮಹಾಸಭೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಸೊಸೈಟಿಯ ನಿರ್ದೇಶಕಿ ರೂಪಾ ನಾಯಕ್ ದೇವಿನಗರ ಇವರು 80 ಬಡಗಬೆಟ್ಟು ಗ್ರಾಮ ಪಂಚಾಯತ್‌ನಲ್ಲಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವುದಕ್ಕೆ ಅಭಿನಂದಿಸಲಾಯಿತು.
ಸೊಸೈಟಿಯು ಪ್ರಸಕ್ತ ಸಾಲಿನಲ್ಲಿ ಪ್ರಧಾನ ಕಛೇರಿ ಪರ್ಕಳದಲ್ಲಿ ನೂತನ ಸ್ವಂತ ಕಟ್ಟಡ ನಿರ್ಮಾಣ, ಎಲ್ಲಾ ಶಾಖೆಗಳಲ್ಲಿ ಇ-ಸ್ಟಾಂಪಿಂಗ್ ವ್ಯವಸ್ಥೆ ನೀಡುವ ಯೋಜನೆ ರೂಪಿಸಿದ್ದು, ಈಗಾಗಲೇ ಸಂಸ್ಥೆಯು ಸೋಲಾರ್ ಅಳವಡಿಸಲು ಬಡ್ಡಿ ರಹಿತ ಸಾಲ, ಸೇವಾ ಶುಲ್ಕವಿಲ್ಲದೇ ಸದಸ್ಯರಿಗೆ ಸಾಲ ವಿತರಣೆ ಮಾಡುತ್ತಿದ್ದು ಸದಸ್ಯರ ಮೆಚ್ಚುಗೆಗೆ ಪಾತ್ರವಾಗಿದೆ. ವೇದಿಕೆಯಲ್ಲಿ ಉಪಾಧ್ಯಕ್ಷರಾದ ಪಾಂಡುರಂಗ ಕಾಮತ್, ನಿರ್ದೇಶಕರುಗಳಾದ ಬಿ.ರಾಮಕೃಷ್ಣ ನಾಯಕ್, ನರಸಿಂಹ ನಾಯಕ್, ಮಹೇಶ್ ನಾಯಕ್, ಸದಾನಂದ ಎನ್ ನಾಯಕ್, ರವೀಂದ್ರ ಪಾಟ್ಕರ್, ವಿಜೇತ ಕುಮಾರ್, ಗಣಪತಿ ನಾಯಕ್ ಕೆ., ಗಣಪತಿ ಪ್ರಭು, ಮಹಿಳಾ ನಿರ್ದೇಶಕರುಗಳಾದ ಜಯಂತಿ ನಾಯಕ್ ಮತ್ತು ರೂಪಾ ನಾಯಕ್ ಉಪಸ್ಥಿತರಿದ್ದರು.
ಉಪಾಧ್ಯಕ್ಷರಾದ ಪಾಂಡುರಂಗ ಕಾಮತ್ ಎಸ್ ಸ್ವಾಗತಿಸಿ, ನಿರ್ದೇಶಕರಾದ ಗಣಪತಿ ನಾಯಕ್ ಕೆ ಸೂಚನಾಪತ್ರ ವಾಚಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಿತ್ಯಾನಂದ ನಾಯಕ್ ವರದಿ, ಲೆಕ್ಕಪತ್ರ, ನಿವ್ವಳ ಲಾಭ ಹಂಚಿಕೆ, ಮುಂದಿನ ವರ್ಷದ ಬಜೆಟ್, ಲೆಕ್ಕಪರಿಶೋಧಕರ ಆಯ್ಕೆಯ ಕಾರ್ಯಸೂಚಿ ಮುನ್ನಡೆಸಿದರು. ಅಧ್ಯಕ್ಷರು ಮುಂದಿನ ವರ್ಷದ ಯೋಜನೆ, ನೂತನ ಕಟ್ಟಡ ನಿರ್ಮಾಣ ಪ್ರಗತಿ ನೂತನ ಯೋಜನೆಗಳನ್ನು ಸಭೆಯಲ್ಲಿ ಮಂಡಿಸಿದರು. ಶಾಖಾ ವ್ಯವಸ್ಥಾಪಕರಾದ ನಾಗರಾಜ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕರಾದ ಗಣಪತಿ ಪ್ರಭು ವಂದಿಸಿದರು.