ಬ್ರಹ್ಮಾವರ, ಸೆ. 4: ಜಿಲ್ಲಾ ಪಂಚಾಯತ್ ಉಡುಪಿ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ, ಕೃಷಿ ವಿಜ್ಞಾನ ಕೇಂದ್ರ ಬ್ರಹ್ಮಾವರ ವತಿಯಿಂದ ಕಾರ್ಕಳ ಹಾಗೂ ಹೆಬ್ರಿ ತಾಲೂಕಿನ ಕೃಷಿ ಸಖಿಯರಿಗೆ ಪರಿಸರ ಕೃಷಿ ವಿಧಾನ ಕುರಿತು 6 ದಿನದ ತರಬೇತಿ ಕಾರ್ಯಕ್ರಮ ಕೃಷಿ ವಿಜ್ಞಾನ ಕೇಂದ್ರ ಬ್ರಹ್ಮಾವರದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಬ್ರಹ್ಮವಾರ ಸಹ ಸಂಶೋಧನಾ ನಿರ್ದೇಶಕರಾದ ಡಾ. ಲಕ್ಷ್ಮಣ ಉದ್ಘಾಟನೆ ನೆರವೇರಿಸಿ ಮಾತನಾಡುತ್ತಾ, ಭಾರತ ಕೃಷಿ ಪ್ರಧಾನ ದೇಶವಾಗಿದ್ದು ಗ್ರಾಮೀಣ ಪ್ರದೇಶದ ಹೆಚ್ಚಿನ ಮಹಿಳೆಯರು ಕೃಷಿ ಚಟುವಟಿಕೆ ನೆಡೆಸುತ್ತಿದ್ದಾರೆ. ಇಂದು ಕೃಷಿ ಇಲಾಖೆ ಹಾಗೂ ಬೇರೆ ಬೇರೆ ಇಲಾಖೆ ವತಿಯಿಂದ ಅನೇಕ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತಿದ್ದು ಈ ಎಲ್ಲಾ ಯೋಜನೆ ಹಾಗೂ ಕಾರ್ಯಕ್ರಮಗಳನ್ನು ಹಳ್ಳಿಯ ರೈತರಿಗೆ ತಲುಪಿಸಲು ಈ ಕೃಷಿ ಸಖಿಯರು ಸೇತುವೆಯಾಗಿ ಕರ್ತವ್ಯ ನಿರ್ವಹಿಸಬೇಕು. ಇಂದು ದೇಶದಲ್ಲಿ ಕೃಷಿ ಕ್ಷೇತ್ರದಲ್ಲಿ ತಾಂತ್ರಿಕತೆ ಮುಂದುವರಿದಿದ್ದು ಆ ತಾಂತ್ರಿಕತೆ ಹಳ್ಳಿ ಹಳ್ಳಿಗೂ ತಲುಪಿಸಲು ಸಂಬಂಧಪಟ್ಟ ಇಲಾಖೆ ಜೊತೆಯಲ್ಲಿ ಕೃಷಿ ಸಖಿಯರು ಕಾರ್ಯನಿರ್ವಹಿಸಬೇಕೆಂದು ತಿಳಿಸಿದರು.
ಮುಖ್ಯ ಅತಿಥಿಗಳಾದ ಡಾ. ಸುಧೀರ್ ಕಾಮತ್ ಇವರು ಮಾತನಾಡಿ, ಇಂದು ಗ್ರಾಮ ಪಂಚಾಯತ್ ಮಟ್ಟದಲ್ಲಿ ಕೃಷಿ ಸಖಿಯರ ಕೆಲಸ ಅತ್ಯಂತ ಮಹತ್ವದಾಗಿದೆ. ಈ ಕೃಷಿ ಸಖಿಯರು ತರಬೇತಿಯಲ್ಲಿ ಪರಿಸರ ಕೃಷಿ ವಿಧಾನಗಳ ಬಗ್ಗೆ ಮಾಹಿತಿ ಪಡೆದುಕೊಂಡು ಇದನ್ನು ಗ್ರಾಮ ಪಂಚಾಯತ್ ಹಂತದಲ್ಲಿ ಮಾಹಿತಿಯನ್ನು ನೀಡುವುದರ ಮೂಲಕ ಕೃಷಿ ಚಟುವಟಿಕೆ ನೆಡೆಸುತ್ತಿರುವ ರೈತರರನ್ನು ಇನ್ನಷ್ಟು ಸಬಲೀಕರಣಗೊಳಿಸಬೇಕೆಂದು ತಿಳಿಸಿದರು.
ಜಿಲ್ಲಾ ಪಂಚಾಯತ್ ನ ಜಿಲ್ಲಾ ವ್ಯವಸ್ಥಾಪಕರಾದ ಅವಿನಾಶ್ ಮಾತನಾಡಿ, ಇಂದು ಜಿಲ್ಲೆಯಲ್ಲಿ ಸಂಜೀವಿನಿ ಯೋಜನೆ ಮೂಲಕ ಬೇರೆ ಬೇರೆ ಕ್ಷೇತ್ರಕ್ಕೆ ಸಂಬಂಧಪಟ್ಟ ಸೇವೆಗಳನ್ನು ತಲುಪಿಸಲು ಬೇರೆ ಬೇರೆ ಸಖಿಯರನ್ನು ಆಯ್ಕೆ ಮಾಡಲಾಗಿದೆ. ಅದರಂತೆ ಕೃಷಿ ಕ್ಷೇತ್ರದ ಸೌಲಭ್ಯಗಳನ್ನ ತಲುಪಿಸಲು ಪ್ರತಿ ಗ್ರಾಮ ಪಂಚಾಯತ್ ಗೆ ಒಂದರಂತೆ 155 ಕೃಷಿ ಸಖಿಯರನ್ನು ಆಯ್ಕೆ ಮಾಡಲಾಗಿದೆ. ಈಗಾಗಲೇ ಆಯ್ಕೆಯಾದ ಕೃಷಿ ಸಖಿಯರು ತಮ್ಮ ಗ್ರಾಮದಲ್ಲಿ ಸಂಬಂಧಪಟ್ಟ ಇಲಾಖೆಯ ಜೊತೆಯಲ್ಲಿ ಹಡಿಲು ಭೂಮಿ ಕೃಷಿ, ಕೃಷಿ ಪೌಷ್ಟಿಕ ತೋಟ, ಸಸ್ಯ ನರ್ಸರಿ, ರೈತ ಪಾಠ ಶಾಲೆ, ಮಣ್ಣು ಪರೀಕ್ಷೆ, ಇಕೆವೈಸಿ, ರೈತ ಉತ್ಪಾದಕ ಗುಂಪು ರಚನೆ ಇತ್ಯಾದಿ ಕೃಷಿ ಸಂಬಂಧಪಟ್ಟ ಕರ್ತವ್ಯ ಉತ್ತಮ ರೀತಿಯಲ್ಲಿ ನಿರ್ವಹಿಸುತ್ತಿದ್ದಾರೆ. ಈ ಆರು ದಿನದ ತರಬೇತಿ ಪಡೆದ ಕೃಷಿ ಸಖಿಯರು ತಮ್ಮ ಗ್ರಾಮ ಪಂಚಾಯತ್ ಒಕ್ಕೂಟ ದ ವ್ಯಾಪ್ತಿಯಲ್ಲಿ ಎಲ್ಲಾ ರೈತ ಮಹಿಳೆಯರನ್ನು ಸಂಜೀವಿನಿ ಆಶಯದಂತೆ ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಸಬಲೀಕರಣಗೊಳಿಸಲು ಸಂಬಂಧಪಟ್ಟ ಇಲಾಖೆಯ ಜೊತೆ ಕೈ ಜೋಡಿಸಬೇಕು ಎಂದರು.
ಅಧ್ಯಕ್ಷತೆಯನ್ನು ಕೃಷಿ ವಿಜ್ಞಾನ ಕೇಂದ್ರ ಬ್ರಹ್ಮಾವರ ಹಿರಿಯ ವಿಜ್ಞಾನಿಗಳು ಮತ್ತು ಮುಖ್ಯಸ್ಥರಾದ ಡಾ. ಬಿ ಧನಂಜಯ್ ವಹಿಸಿದ್ದರು. ವಿಜ್ಞಾನಿ ಡಾ ರವಿರಾಜ್ ಶೆಟ್ಟಿ ಜಿ ಸ್ವಾಗತಿಸಿ, ವಿಜ್ಞಾನಿ ಡಾ ನವೀನ್ ಎನ್. ಈ ವಂದಿಸಿದರು. ವಿಜ್ಞಾನಿ ಡಾ ಸದಾನಂದ ಆಚಾರ್ಯ ಬಿ ಕಾರ್ಯಕ್ರಮ ನಿರೂಪಿಸಿದರು.