ಉಡುಪಿ, ಸೆ.1: ಜೀವರಸಾಯನ ಶಾಸ್ತ್ರ ವಿಭಾಗ, ಕೆ.ಎಂ.ಸಿ. ಮಣಿಪಾಲ ಹಾಗೂ ಡಯಾಸಿಸ್ ಇಂಡಿಯಾ ಸಂಸ್ಥೆಯ ಸಹಯೋಗದೊಂದಿಗೆ ಸಮಕಾಲೀನ ವೈದ್ಯಕೀಯದಲ್ಲಿ ಲಿಪಿಡ್ (ಕೊಬ್ಬು) ಮತ್ತು ಲಿಪಿಡೋಮಿಕ್ಸ್ (ಕೊಬ್ಬಿನ ನಿರ್ವಹಣೆ) ನ ಕುರಿತು ಡಾ. ಟಿ.ಎಂ.ಎ. ಪೈ ಸಭಾಂಗಣದಲ್ಲಿ ಒಂದು ದಿನದ ಕಾರ್ಯಗಾರ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕೆ.ಎಂ.ಸಿ. ಮಣಿಪಾಲದ ಸಹ ಡೀನ್ ಹಾಗೂ ಜೀವರಸಾಯನ ಶಾಸ್ತ್ರ ವಿಭಾಗದ ಪ್ರೊಫೇಸರ್ ಆದ ಡಾ. ಕೃಷ್ಣಾನಂದ ಪ್ರಭು ಆರ್.ವಿ. ಆಹಾರ ಸೇವನೆಯಲ್ಲಿ ಲಿಪಿಡ್ ಅಂಶಗಳ ನಿಯಂತ್ರಣದ ಅಗತ್ಯದ ಬಗ್ಗೆ ವಿವರಿಸಿದರು.
ಮುಖ್ಯ ಅತಿಥಿಗಳಾದ ಡಾ.ಟಿ.ಎಂ.ಎ. ಪೈ ಆಸ್ಪತ್ರೆ ಉಡುಪಿ ಇದರ ವೈದ್ಯಕೀಯ ಅಧೀಕ್ಷಕರಾದ ಡಾ. ಶಶಿಕಿರಣ ಉಮಾಕಾಂತ್ ಮಾತನಾಡಿ ನಮ್ಮ ದೇಹದಲ್ಲಿ ಲಿಪಿಡ್ ಬಹಳ ಕೆಲಸಗಳನ್ನು ನಿರ್ವಹಿಸುತ್ತದೆ. ದೇಹದಲ್ಲಿ, ರಕ್ತದಲ್ಲಿ ಕೊಬ್ಬಿನ ಅಂಶ ಹೆಚ್ಚಾದರೆ ಹೃದಯ ಸಂಬಂಧಿ, ರಕ್ತನಾಳ ಸಂಬಂಧಿಸಿದ ರೋಗಗಳು ಉಲ್ಬಣಗೊಳ್ಳುತ್ತದೆ, ಅಲ್ಲದೇ ಹಠಾತ್ ಮರಣ ಹೊಂದಬಹುದು ಎಂದರು. ಜೀವರಸಾಯನಶಾಸ್ತ್ರ ವಿಭಾಗದ ಪ್ರೊಫೆಸರ್ ಮತ್ತು ಮುಖ್ಯಸ್ಥರಾದ ಡಾ. ವರಶ್ರೀ ಬಿ. ಎಸ್. ಸ್ವಾಗತಿಸಿ, ಡಾ. ವಿಜೇತಾ ಶೆಣೈ ಬೆಳ್ಳೆ ವಂದಿಸಿದರು. ಡಾ. ಜ್ಯೋತಿಕಾ ಮತ್ತು ಡಾ. ಅರ್ಜುನ್ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಡಾ. ಮುಖ್ಯಪ್ರಾಣ ಪ್ರಭು, ಡಾ. ಮೈತ್ರೆಯಿ, ಡಾ. ಅಶ್ವಿನಿ ಕುಮಾರ್, ಡಾ. ಅನ್ನಪೂರ್ಣ ಮತ್ತು ಪಲ್ಲವಿ, ಡಾ. ಶುಭಾ ಜಯರಾಮ್, ಡಾ. ರಾಘವೇಂದ್ರ ಯು., ಪಲ್ಲವಿ ಶಟ್ಟಿಗಾರ್ ಹಾಗೂ ಡಾ. ದಿನೇಶ್ ಉಪಾಧ್ಯಾಯ ಅವರು ನಿಯಮಬದ್ದ ಆಹಾರ ಸೇವನೆ, ಮದ್ಯಪಾನ ನಿಯಂತ್ರಣ, ಸಿಗರೇಟ್ ಸೇವನೆ ನಿಲ್ಲಿಸುವುದು, ಒತ್ತಡ ನಿಯಂತ್ರಣ, ಬೊಜ್ಜು ನಿಯಂತ್ರಣ, ಸಾಮಾನ್ಯ ಮಟ್ಟದ ದೈಹಿಕ ಚಟುವಟಿಕೆಗಳ ಅಗತ್ಯದ ಕುರಿತು ಚರ್ಚಿಸಿದರು. ಡಾ. ರವೀಂದ್ರ ಮಾರಾಡಿ ಗುಂಪು ಚರ್ಚೆಯನ್ನು ನಿರ್ವಹಿಸಿದರು.