ಉಡುಪಿ, ಆ. 16: ಉಡುಪಿಯ ಯಕ್ಷಗಾನ ಕಲಾರಂಗವು ಪ್ರತೀ ವರ್ಷ ವಿದ್ವಾಂಸರಿಗೆ ನೀಡುವ 40,000 ರೂಪಾಯಿ ನಿಧಿಯನ್ನೊಳಗೊಂಡಿರುವ ತಲ್ಲೂರು ಕನಕಾ- ಅಣ್ಣಯ್ಯ ಶೆಟ್ಟಿ ಸಂಸ್ಮರಣ ‘ಯಕ್ಷಗಾನ ಕಲಾರಂಗ ಪ್ರಶಸ್ತಿ’ಯನ್ನು ಹಿರಿಯ ಮೃದಂಗ ವಾದಕ ವಿದ್ವಾನ್ ಕೆ. ಬಾಬು ರೈ ಅವರಿಗೆ ಮಂಗಳವಾರ ಎಡನೀರು ಮಠದಲ್ಲಿ ಕೆ. ಬಾಬು ರೈಯವರ ಶತಮಾನೋತ್ಸವ ಆಚರಣೆಯ ಸಂದರ್ಭ ಪ್ರದಾನ ಮಾಡಲಾಯಿತು. ಪ್ರಶಸ್ತಿ ಪ್ರದಾನ ಮಾಡಿ ಶ್ರೀಗಳು ತಮ್ಮ ಅನುಗ್ರಹ ಸಂದೇಶದಲ್ಲಿ, ಬಾಬು ರೈಗಳು ಶತಾಯುಷಿ ಕಲಾವಿದರಷ್ಟೇ ಅಲ್ಲ ಶತಮಾನದ ಶ್ರೇಷ್ಠ ಕಲಾವಿದರು. ಅವರ ವಿನಯಗುಣ, ಸರಳತೆ, ಜೀವನೋತ್ಸಾಹ ಕಿರಿಯರಿಗೆ ಮಾದರಿಯಾಗಿದೆ. ಸಾಮಾಜಿಕ, ಸಾಂಸ್ಕೃತಿಕ ಕಾಳಜಿಯಿಂದ ಕೆಲಸ ಮಾಡುತ್ತಿರುವ ಉಡುಪಿಯ ಯಕ್ಷಗಾನ ಕಲಾರಂಗ ಅಭಿನಂದನಾರ್ಹ ಸಂಸ್ಥೆ ಎಂದು ನುಡಿದರು.
ತಲ್ಲೂರು ಫ್ಯಾಮಿಲಿ ಟ್ರಸ್ಟ್ ನ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ, ಗಿರಿಜಾ ಶಿವರಾಮ ಶೆಟ್ಟಿ, ಪ್ರದೀಪ ಕುಮಾರ್ ಕಲ್ಕೂರ, ಕೆ. ಬಾಬು ರೈ ಶತಮಾನೋತ್ಸವ ಸಮೀತಿಯ ಅಧ್ಯಕ್ಷ ರಾಮಪ್ರಸಾದ ಕಾಸರಗೋಡು, ಕಾರ್ಯದರ್ಶಿ ಶಿವರಾಮ ಕಾಸರಗೋಡು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಮೀಜೀಯವರಿಗೆ ಫಲವಸ್ತು ಸಮರ್ಪಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಅಭಿನಂದನೆಯ ಮಾತುಗಳನ್ನಾಡಿದರು. ಸಂಸ್ಥೆಯ ದಾನಿಗಳಾದ ಡಾ. ಜೆ. ಎನ್. ಭಟ್, ಯು. ಎಸ್. ರಾಜಗೋಪಾಲ ಆಚಾರ್ಯ ಹಾಗೂ ಉಪಾಧ್ಯಕ್ಷ ಎಸ್. ವಿ. ಭಟ್, ಜತೆ ಕಾರ್ಯದರ್ಶಿಗಳಾದ ನಾರಾಯಣ ಎಂ. ಹೆಗಡೆ, ಎಚ್. ಎನ್. ಶೃಂಗೇಶ್ವರ ಮತ್ತು ಸದಸ್ಯರುಗಳಾದ ಎಂ. ಎಲ್. ಸಾಮಗ, ಪ್ರತಿಭಾ ಎಂ. ಎಲ್. ಸಾಮಗ, ವಿದ್ಯಾಪ್ರಸಾದ್, ರಾಜೀವಿ, ಸುದರ್ಶನ್ ಬಾಯರಿ ಉಪಸ್ಥಿತರಿದ್ದರು.