ಉಡುಪಿ, ಆ. 13: ಮಹಿಳಾ ಸಬಲೀಕರಣದ ಮೂಲಕ ಕುಟುಂಬದ ಆರ್ಥಿಕ ಬೆಳವಣಿಗೆಯ ಉದ್ದೇಶದಿಂದ ಜಾರಿಗೆ ತಂದಿರುವ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಯೋಜನೆಯಡಿ ಜಿಲ್ಲೆಯ ಮಹಿಳೆಯರು ಆರ್ಥಿಕ ಲಾಭ ತರುವ ಹಲವು ಉದ್ಯಮಗಳಲ್ಲಿ ತೊಡಗಿದ್ದು, ಇದೇ ಮೊದಲ ಬಾರಿಗೆ ಎಲ್ಲಾ ಸೇವೆಗಳನ್ನು ಒದಗಿಸುವ ಸೂಪರ್ ಮಾರ್ಕೆಟ್ ಆರಂಭಿಸುತ್ತಿದ್ದು, ಆಗಸ್ಟ್ 14 ರಂದು ಈ ಸೂಪರ್ ಮಾರ್ಕೆಟ್ ಉಡುಪಿಯ ಹೃದಯಭಾಗದ ತಾಲೂಕು ಪಂಚಾಯತ್ ಕಟ್ಟಡದಲ್ಲಿ ಆರಂಭಗೊಳ್ಳಲಿದೆ.
ಈ ಸೂಪರ್ ಮಾರ್ಕೆಟ್ ನಲ್ಲಿ ಸಂಜೀವಿನಿ ಮಹಿಳಾ ಸ್ವ ಸಹಾಯ ಸಂಘದ ಉತ್ತಮ ಗುಣಮಟ್ಟದ ಅಲಂಕಾರಿಕ/ಒಳಾಂಗಣ ಗಿಡಗಳು, ಯಕ್ಷಗಾನ ಮುಖವಾಡಗಳು ಹ್ಯಾಂಡ್ ಮೇಡ್ ಬ್ಯಾಗ್ ಗಳು, ಕ್ಯಾಂಡಲ್ ಗಳು, ಬಿದಿರಿನ ಬುಟ್ಟಿ, ಗ್ರೋ ಬ್ಯಾಗ್, ವಾಲ್ ಪೈಂಟಿಂಗ್ಸ್, ಕೀ ಚೈನ್, ಜಿ.ಐ ಟ್ಯಾಗ್ ಹೊಂದಿರುವ ಕೈ ಮಗ್ಗದ ಸೀರೆಗಳು, ಮಣ್ಣಿನ ಮಡಕೆ ಇತ್ಯಾದಿ, ಡೋರ್ ಮ್ಯಾಟ್, ಪರಿಶುದ್ಧ ಜೇನುತುಪ್ಪ, ಕಜೆ ಅಕ್ಕಿ, ಸಾವಯವ ಬೆಲ್ಲ, ಫಿನೈಲ್, ಸೋಪ್ ಆಯಿಲ್, ಡಿಟರ್ಜೆಂಟ್, ದೇಸಿ ಗೋ ಉತ್ಪನ್ನಗಳು, ವಿವಿಧ ಬಗೆಯ ತಿಂಡಿ, ತಿನಿಸುಗಳು, ಪೂಜಾ ಸಾಮಗ್ರಿ, ಆರೋಗ್ಯಕರ ಪೇಯಗಳು, ಗುಣಮಟ್ಟದ, ಆರೋಗ್ಯಕರ, ಸಾವಯವ ಉತ್ಪನ್ನಗಳು ಲಭ್ಯವಿವೆ. ಹೋಮ್ ಮೇಡ್ ಚಾಕಲೇಟ್, ಕೇಕ್, ಚಿಕ್ಕಿ, ಆಕರ್ಷಕ ಕಲಾಕೃತಿಗಳು ಇತ್ಯಾದಿ ವಸ್ತುಗಳು ಒಂದೇ ಸೂರಿನಡಿ ದೊರೆಯಲಿವೆ.
ಸದರಿ ಮಳಿಗೆಯನ್ನು ಉಡುಪಿ ತಾಲೂಕು ಪಂಚಾಯತ್ ಹಾಗೂ ನರ್ಬಾಡ್ ಸಂಸ್ಥೆಯ ಸಹಯೋಗದಲ್ಲಿ ಚೇರ್ಕಾಡಿ ಗ್ರಾಪಂ ನ ಪ್ರಗತಿ ಜಿ.ಪಿ.ಎಲ್.ಅಫ್ ನ ಸಮೃದ್ಧಿ ಸಂಜೀವಿನಿ ಸ್ವಸಹಾಯ ಗುಂಪಿನ ಸದಸ್ಯರು ನಡೆಸಲಿದ್ದು, ಜಿಲ್ಲೆಯ ವಿವಿಧ ಸಂಜೀವಿನಿ ಸಂಘದ ಸದಸ್ಯರು ಉತ್ಪಾದಿಸಿರುವ ವಸ್ತುಗಳನ್ನು ಈ ಕೇಂದ್ರದ ಮೂಲಕ ಮಾರಾಟ ಮಾಡಲಿದ್ದಾರೆ.
ಈ ಸೂಪರ್ ಮಾರ್ಕೆಟ್‌ನಲ್ಲಿ, ಸೇವಾ ಸಿಂಧು ಸೇವೆಗಳು, ಪಾಸ್ ಪೋರ್ಟ್, ಪಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಕಾರ್ಮಿಕರ ನೋಂದಣಿ ಇತ್ಯಾದಿ ಆನ್ ಲೈನ್ ಸೇವೆಗಳು, ಶಿಕ್ಷಣ, ಬ್ಯೂಟಿಷಿಯನ್, ಟೈಲರಿಂಗ್, ಎಂಬ್ರಾಯಿಡರಿ, ಕುಚ್ಚು ಮೆಹಂದಿ, ಚಂಡೆ, ಯಕ್ಷಗಾನ, ಕ್ಯಾಟರಿಂಗ್, ಕಾನೂನು ಮತ್ತು ಆಪ್ತ ಸಲಹೆ, ಕ್ಯಾಟರಿಂಗ್, ಪೋಟೋಗ್ರಾಫಿ ಮತ್ತು ವೀಡಿಯೋಗ್ರಾಫಿ, ಆರೋಗ್ಯ ಸಲಹೆ ಸೇವೆಗಳೂ ಸಹ ದೊರೆಯಲಿವೆ.
“ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಯೋಜನೆಯಡಿ ಜಿಲ್ಲೆಯಲ್ಲಿ 155 ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟಗಳ ಮೂಲಕ ಒಟ್ಟು 7623 ಸ್ವ ಸಹಾಯ ಗುಂಪುಗಳನ್ನು ರಚಿಸಲಾಗಿದ್ದು, ಈ ಗುಂಪುಗಳಲ್ಲಿ 85000 ಅಧಿಕ ಮಂದಿ ಸದಸ್ಯರಿದ್ದು, ಜಿಲ್ಲೆಯ ಗ್ರಾಮೀಣ ಭಾಗದ ಮಹಿಳೆಯರು ಸಮುದಾಯ ಬಂಡವಾಳ ನಿಧಿಯನ್ನು ಪಡೆದು ಅನೇಕ ರೀತಿಯ ಜೀವನೋಪಾಯ ಚಟುವಟಿಕೆಗಳನ್ನು ಮಾಡುತ್ತಿದ್ದಾರೆ. ಜಿಲ್ಲೆಯ ಸಂಜಿವಿನಿ ಸ್ವ ಸಹಾಯ ಸಂಘದ ಮಹಿಳೆಯರಿಗೆ, ಜಿಲ್ಲಾ ಪಂಚಾಯತ್ ಮೂಲಕ ಸ್ವ ಉದ್ಯೋಗ ಆರಂಭಿಸಲು ಅಗತ್ಯವಿರುವ ತರಬೇತಿ ಮತ್ತು ಸಮುದಾಯ ಬಂಡವಾಳವನ್ನು ನೀಡುತ್ತಿದ್ದು, ಇದರಿಂದ ಈಗಾಗಲೇ ಹಲವು ರೀತಿಯ ಆರ್ಥಿಕ ಚಟುವಟಿಕೆಗಳನ್ನು ಕೈಗೊಂಡಿದ್ದಾರೆ. ಅವರು ತಯಾರಿಸುವ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ದೊರೆತಲ್ಲಿ ಇನ್ನೂ ಹೆಚ್ಚಿನ ಆರ್ಥಿಕ ಲಾಭ ಗಳಿಸಬಹುದಾಗಿದ್ದು, ಈ ನಿಟ್ಟಿನಲ್ಲಿ ಮಹಿಳೆಯರೇ ತಮ್ಮ ಉತ್ಪನ್ನಗಳ ಮಾರಾಟಕ್ಕೆ ಸೂಪರ್ ಮಾರ್ಕೆಟ್ ತೆರೆಯುತ್ತಿರುವುದು ಅವರ ಆರ್ಥಿಕ ಬೆಳವಣಗೆಗೆ ಮತ್ತಷ್ಟು ಸಹಕಾರವಾಗಲಿದೆ” –ಪ್ರಸನ್ನ ಹೆಚ್., ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಜಿಲ್ಲಾ ಪಂಚಾಯತ್ ಉಡುಪಿ
ಆಗಸ್ಟ್ 14 ರಂದು ಉದ್ಘಾಟನೆ: ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ-ಸಂಜೀವಿನಿ ಜಿಲ್ಲಾ ಪಂಚಾಯತ್ ಉಡುಪಿ ತಾಲೂಕು ಪಂಚಾಯತ್ ಉಡುಪಿ ನಬಾರ್ಡ್ ಕರ್ನಾಟಕ, ಉಡುಪಿ ತಾಲೂಕು ಸಂಜೀವಿನಿ ಒಕ್ಕೂಟ, ಪ್ರಗತಿ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ, ಚೇರ್ಕಾಡಿ ಸಮೃದ್ಧಿ ಸಂಜೀವಿನಿ ಸ್ವ-ಸಹಾಯ ಗುಂಪಿನ ಸದಸ್ಯರು ರವರ ಸಹಯೋಗದಲ್ಲಿ, ಸಂಜೀವಿನಿ ಸೂಪರ್ ಮಾರ್ಕೆಟ್‌ನ ಉದ್ಘಾಟನಾ ಸಮಾರಂಭವು ಆಗಸ್ಟ್ 14 ರಂದು ಮಧ್ಯಾಹ್ನ 12 ಗಂಟೆಗೆ ಉಡುಪಿ ತಾಲೂಕು ಪಂಚಾಯತ್ ಕಟ್ಟಡದಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಉದ್ಘಾಟಿಸಲಿದ್ದಾರೆ.
ಸಂಜೀವಿನಿ ಆಹಾರೋತ್ಸವ: ಸಂಜೀವಿನಿ ಆಹಾರೋತ್ಸವ ಕಾರ್ಯಕ್ರಮವು ಆಗಸ್ಟ್ 14 ರಂದು ಉಡುಪಿ ತಾಲೂಕು ಪಂಚಾಯತ್ ಕಟ್ಟಡದಲ್ಲಿ ನಡೆಯಲಿದೆ. ಆಹಾರ ಮೇಳದಲ್ಲಿ ವಿವಿಧ ಬಗೆಯ ಆಹಾರ ತಿನಿಸುಗಳ ಜೊತೆಗೆ ಆಷಾಡ ಮಾಸದ (ಆಟಿ) ತಿಂಡಿಗಳೂ ಸಹ ದೊರೆಯಲಿದ್ದು, ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಆಹಾರ ಮೇಳದ ಪ್ರಯೋಜನ ಪಡೆಯುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ತಿಳಿಸಿದ್ದಾರೆ.