ಉಡುಪಿ, ಆ.5: ಮೀನುಗಾರಿಕೆ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಜಿಲ್ಲಾ ಮತ್ತು ರಾಜ್ಯ ವಲಯ ಯೋಜನೆಯಡಿ ಸಾಮಾನ್ಯ ವರ್ಗ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ, ಮಹಿಳೆಯರಿಗೆ, ಅಲ್ಪಸಂಖ್ಯಾತರಿಗೆ ಮತ್ತು ಅಂಗವಿಕಲರಿಗೆ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, ಜಿಲ್ಲೆಯ ಅರ್ಹ ಮೀನುಗಾರರಿಂದ ಅರ್ಜಿ ಆಹ್ವಾನಿಸಲಾಗಿದೆ. ಮೀನುಗಾರಿಕೆಯಲ್ಲಿ ಅನುಭವ ಹೊಂದಿರುವ ಅರ್ಹ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಉಚಿತವಾಗಿ ಮೀನುಗಾರಿಕಾ ಸಲಕರಣೆ ಕಿಟ್ಟುಗಳನ್ನು, ಸಾಮಾನ್ಯ ವರ್ಗದವರಿಗೆ ಮೀನು ಮಾರಾಟ ವಾಹನ ಖರೀದಿಗೆ ಸಹಾಯ, ಕರಾವಳಿ ತಾಲೂಕುಗಳ ಅರ್ಹ ಫಲಾನುಭವಿಗಳಿಗೆ ಜೀವರಕ್ಷಕ ಸಾಧನಗಳನ್ನು, ಹೆಬ್ರಿ ಮತ್ತು ಕಾರ್ಕಳ ತಾಲೂಕುಗಳ ಫಲಾನುಭವಿಗಳಿಗೆ ಮೀನುಗಾರಿಕೆ ಸಾಮಗ್ರಿಗಳನ್ನು ಹಾಗೂ ಮೀನು ಕೃಷಿ ಕೊಳಗಳ ನಿರ್ಮಾಣಕ್ಕೆ ಸಹಾಯ ಸೌಲಭ್ಯ ಪಡೆಯಲು ಆಗಸ್ಟ್ 30 ರ ಒಳಗೆ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಉಡುಪಿ, ಕುಂದಾಪುರ ಹಾಗೂ ಕಾರ್ಕಳ ಮೀನುಗಾರಿಕೆ ಸಹಾಯಕ ನಿರ್ದೇಶಕರುಗಳ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕರು, ಪ್ರಕಟಣೆಯಲ್ಲಿ ತಿಳಿಸಿದ್ದಾರೆ.