ಮಣಿಪಾಲ, ಆ. 1: 90 ವರ್ಷಗಳನ್ನು ಪೂರ್ಣಗೊಳಿಸುತ್ತಿರುವ ಜ್ಞಾನಪೀಠ ಪ್ರಶಸ್ತಿ ವಿಜೇತ ಮಲಯಾಳಂ ಲೇಖಕ ಎಂ ಟಿ ವಾಸುದೇವನ್ ನಾಯರ್ ಇವರು ತಮ್ಮ ಅಪೂರ್ವ ಒಳ ನೋಟಗಳಿಂದ ಮನುಷ್ಯನ ಮನಸ್ಸಿನ ಪದರುಗಳನ್ನು ಬಿಚ್ಚಿಟ್ಟು ಜನಾಂಗದ ಕಣ್ಣು ತೆರೆಸಿದ್ದಾರೆ. ತಮ್ಮ ನಡೆ-ನುಡಿ, ಆಚಾರ-ವಿಚಾರಗಳಿಂದ ಕೇರಳ ಸಂಸ್ಕೃತಿಯ, ಹೀಗಾಗಿ ಭಾರತೀಯ ಸಂಸ್ಕೃತಿಯ ಅಪ್ಪಟ ಪ್ರತೀಕವಾಗಿದ್ದಾರೆ ಎಂದು ಖ್ಯಾತ ಲೇಖಕಿ ವೈದೇಹಿ ಹೇಳಿದರು. ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಆಂಡ್ ಸೈನ್ಸಸ್ (ಜಿಸಿಪಿಎಎಸ್) ಮತ್ತು ಸಹೃದಯ ಸಂಗಮಮ್, ಕೇರಳ ಕಲ್ಚರಲ್ ಆಂಡ್ ಸೋಶಿಯಲ್ ಸೆಂಟರ್ ಇವರು ಆಯೋಜಿಸಿದ ‘ಎಂ ಟಿ ಸಾಯಂ’ ಕಾರ್ಯಕ್ರಮವನ್ನು ತಮ್ಮ ವಿಡಿಯೋ ಮಾತಿನ ಮೂಲಕ ಉದ್ಘಾಟಿಸಿ ವೈದೇಹಿಯವರು ಮಾತನಾಡುತ್ತಿದ್ದರು. ತುಂಜನ್ ಉತ್ಸವ, ಜೈಪುರ್ ಉತ್ಸವ, ಹೆಗ್ಗೋಡು, ಡೆಲ್ಲಿ, ನ್ಯೂಯಾರ್ಕ್ ಹೀಗೆ ಎಂ ಟಿ ಯವರನ್ನು ಭೇಟಿಯಾದ ಹಲವು ಸಂದರ್ಭ ಹಾಗೂ ಪ್ರದೇಶಗಳನ್ನು ನೆನಪಿಸಿಕೊಂಡ ವೈದೇಹಿಯವರು ಎಲ್ಲಾ ಸಂದರ್ಭಗಳಲ್ಲಿ ಎಂ ಟಿ ಒಬ್ಬ ಸದಾ ಚಿಂತನಶೀಲ ವ್ಯಕ್ತಿಯಾಗಿ ಕಂಡುಬಂದಿದ್ದನ್ನು ನೆನಪಿಸಿಕೊಂಡರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಭಾಷಾ ತಜ್ಞ ಪ್ರೊ.ಕೆ ಪಿ ರಾವ್ ರವರು, ಎಂ ಟಿ ಇವರು ಪರಂಪರೆಯನ್ನು ಆಧುನಿಕ ಪ್ರಜ್ಞೆಯಿಂದ ಎದುರಿಸಿದ ಮುಕ್ತ ಮನಸ್ಸಿನ ಲೇಖಕರಾಗಿದ್ದಾರೆ ಎಂದು ಹೇಳಿದರು. ಭಾಷಾಂತರ ತಜ್ಞ ಪ್ರೊ. ಎನ್ ಟಿ ಭಟ್ ಅನುವಾದದಲ್ಲಿನ ತೊಡಕುಗಳನ್ನು ವಿವರಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಮತ್ತು ಕೆಸಿಎಸ್ಸಿ ಯಾ ಸೆಕ್ರೆಟರಿ ಬಿ ಸಿ ಬಿನೇಶ್ ಇವರು ಭಾಷೆಗಳ ನಡುವಿನ ಬಾಂಧವ್ಯವನ್ನು ಒತ್ತಿ ಹೇಳಿದರು. ಡಾ. ಪಾರ್ವತಿ ಐತಾಳ್, ಡಾ. ಅಶೋಕನ್ ನಂಬಿಯಾರ್, ಡಾ. ರವೀಂದ್ರನಾಥನ್ ಮತ್ತು ಡಾ. ರೆಸ್ಮಿ ಭಾಸ್ಕರನ್ ಎಂ ಟಿ ಕುರಿತು ಮಾತನಾಡಿದರು. ಪ್ರೊ. ವರದೇಶ್ ಹಿರೇಗಂಗೆ ಚರ್ಚೆಯನ್ನು ಸಂಯೋಜಿಸಿದರು. ನಂತರ ಎಂ ಟಿ ಬರೆದು ನಿರ್ದೇಶಿಸಿದ ನೈರ್ಮಲ್ಯಮ್ ಚಲನಚಿತ್ರವನ್ನು ಪ್ರೊ. ಫಣಿರಾಜ್ ವಿವರಿಸಿ ಪ್ರದರ್ಶಿಸಿದರು. ರಾಜಿಮಾನ್ ಕಾರ್ಯಕ್ರಮ ನಿರ್ವಹಿಸಿದರು.