ಉಡುಪಿ, ಆ.1: ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹಕ್ಕೆ ಇಂದು ಸರಕಾರಿ ತಾಯಿ ಮಕ್ಕಳ ಆಸ್ಪತ್ರೆಯಲ್ಲಿ ಜಿಲ್ಲಾಮಟ್ಟದಲ್ಲಿ ಚಾಲನೆ ನೀಡಲಾಯಿತು. ತಾಲೂಕು ಆರೋಗ್ಯ ಅಧಿಕಾರಿ ಡಾ.ವಾಸುದೇವ ಉಪಾಧ್ಯಾಯ ಕಾರ್ಯಕ್ರಮ ಉದ್ಘಾಟಿಸಿ, ದುಡಿಮೆಯಲ್ಲಿರುವ ಪಾಲಕರಿಗೆ ಸ್ತನ್ಯಪಾನದಲ್ಲಿ ಸಕ್ರಿಯಗೊಳಿಸಲು ಬದಲಾವಣೆಯನ್ನುಂಟು ಮಾಡುವುದು ಎಂಬ ಧ್ಯೇಯವಾಕ್ಯದೊಂದಿಗೆ ಈ ಸಪ್ತಾಹವನ್ನು ಆಚರಿಸಲಾಗುತ್ತಿದೆ. ಸ್ತನ್ಯಪಾನ ಮಾಡುವುದು ತಾಯಿ ಹಾಗೂ ಮಗುವಿನ ಆರೋಗ್ಯದ ದೃಷ್ಠಿಯಿಂದ ಬಹುಮುಖ್ಯ. ಸ್ತನ್ಯಪಾನದಿಂದ ಪ್ರತೀವರ್ಷ ವಿಶ್ವದಾದ್ಯಂತ 8 ಲಕ್ಷ ಮಕ್ಕಳ ಜೀವ ಉಳಿಸಲು ಸಾಧ್ಯ. ಮಕ್ಕಳಲ್ಲಿ ರೋಗನಿರೊಧಕ ಶಕ್ತಿ ಹೆಚ್ಚಿಸಲು ಸ್ತನ್ಯಪಾನ ಅವಶ್ಯಕ ಎಂದರು.
ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ರಾಜ್ ಗೋಪಾಲ್ ಭಂಡಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಆಸ್ಪತ್ರೆಯ ಶುಶ್ರೂಷನಾಧಿಕಾರಿ ಜ್ಯೋತಿ ಪ್ರತಿಕ್ಞಾವಿಧಿ ಬೋಧಿಸಿದರು. ಮಕ್ಕಳ ತಜ್ಞ ಡಾ. ವೇಣುಗೋಪಾಲ್, ಡಾ.ಅಮರನಾಥ್ ಶಾಸ್ತ್ರಿ, ಪ್ರಸೂತಿ ತಜ್ಞೆ ಡಾ.ಉಷಾ ಭಟ್, ಡಾ.ಮಹಾದೇವ್ ಭಟ್, ಡಾ.ಸಂದೀಪ್, ಆಸ್ಪತ್ರೆಯ ಸಿಬ್ಬಂದಿಗಳು, ಗರ್ಭಿಣಿಯರು, ಬಾಣಂತಿಯರು, ಮಕ್ಕಳ ತಾಯಂದಿರು ಮತ್ತು ಇತರರು ಉಪಸ್ಥಿತರಿದ್ದರು. ಪ್ರಭಾರ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಶಿಧರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಕಾರ್ಯಕ್ರಮ ಸಂಯೋಜಕ ಸುಧೀಂದ್ರ ಸ್ವಾಗತಿಸಿ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಚಂದ್ರಕಲಾ ನಿರೂಪಿಸಿ, ಆರೋಗ್ಯ ನಿರೀಕ್ಷಣಾಧಿಕಾರಿ ಪ್ರಖ್ಯಾತ್ ವಂದಿಸಿದರು.