Monday, November 25, 2024
Monday, November 25, 2024

ಜನರ ಆಶೋತ್ತರಗಳಿಗೆ ಸ್ಪಂದಿಸುವುದು ಜನಪ್ರತಿನಿಧಿಗಳ ಹಾಗೂ ಸರಕಾರಿ ಸೇವಕರ ಆದ್ಯ ಕರ್ತವ್ಯ: ಮುಖ್ಯಮಂತ್ರಿ ಸಿದ್ದರಾಮಯ್ಯ

ಜನರ ಆಶೋತ್ತರಗಳಿಗೆ ಸ್ಪಂದಿಸುವುದು ಜನಪ್ರತಿನಿಧಿಗಳ ಹಾಗೂ ಸರಕಾರಿ ಸೇವಕರ ಆದ್ಯ ಕರ್ತವ್ಯ: ಮುಖ್ಯಮಂತ್ರಿ ಸಿದ್ದರಾಮಯ್ಯ

Date:

ಉಡುಪಿ, ಆ.1: ಜನ ಸಾಮಾನ್ಯರೊಂದಿಗೆ ಅಧಿಕಾರಿಗಳು ಸಂಪರ್ಕದಲ್ಲಿದ್ದಾಗ ಮಾತ್ರ ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಸಾಧ್ಯ. ಸರಕಾರದ ಕಾರ್ಯಕ್ರಮಗಳು ಜನರಿಗೆ ತಲುಪುವುದರ ಬಗ್ಗೆ ಅಧಿಕಾರಿಗಳು ಮುತುವರ್ಜಿ ವಹಿಸುವುದರೊಂದಿಗೆ ತಮ್ಮ ಕರ್ತವ್ಯವನ್ನು ನಿರ್ವಹಿಸಬೇಕೆಂದು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಅವರು ಮಂಗಳವಾರ ಮಣಿಪಾಲ ರಜತಾದ್ರಿಯ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಉಡುಪಿ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆ ಹಾಗೂ ಪ್ರಾಕೃತಿಕ ವಿಕೋಪ ನಿರ್ವಹಣಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಾರ್ವಜನಿಕರ ತೆರಿಗೆ ಹಣದಿಂದ ಸರಕಾರವನ್ನು ನಡೆಸಲಾಗುತ್ತದೆ. ಅವರ ಆಶಯಕ್ಕೆ ತಕ್ಕಂತೆ ಸೇವೆಗಳನ್ನು ಒದಗಿಸುವುದು ಜನಪ್ರತಿನಿಧಿಗಳಾದ ನಾವು ಹಾಗೂ ಅಧಿಕಾರಿಗಳ ಆದ್ಯ ಕರ್ತವ್ಯ. ಅದರಲ್ಲೂ ಜನರಲ್ಲಿ ನೇರ ಸಂಪರ್ಕವನ್ನು ಹೊಂದಿ ಸರಕಾರ ಮತ್ತು ಜನರ ಮಧ್ಯೆ ಸೇತುವೆಯಾಗಿ ಸರಕಾರಿ ನೌಕರರು ಕಾರ್ಯನಿರ್ವಹಿಸಬೇಕು. ಇದನ್ನು ಮರೆತರೆ ಜನ ವಿರೋಧಿಯಾಗುತ್ತಾರೆ ಎಂದರು.

ಅಧಿಕಾರಿಗಳು ನಾವು ಉನ್ನತ ಮಟ್ಟದ ಅಧಿಕಾರಿಗಳು ಎಂಬ ಭ್ರಮೆಯನ್ನು ಬಿಟ್ಟು ಹಾಗೂ ಜನಪ್ರತಿನಿಧಿಗಳು ಕೂಡಾ ತಮ್ಮ ಅಧಿಕಾರದ ಅಹಂ ಅನ್ನು ಬಿಟ್ಟು ಜನರನ್ನು ಗೌರವದಿಂದ ಕಾಣಬೇಕು. ಜನರು ಸಮಸ್ಯೆಗಳನ್ನು ತಂದು ಕಚೇರಿಗೆ ಬಂದಾಗ ಅವರುಗಳಿಗೆ ಅಲೆದಾಡಿಸದೇ ಸರಕಾರದ ನಿಯಮಾನುಸಾರ ಕೆಲಸವನ್ನು ಮಾಡಿಕೊಡಬೇಕೆಂದು ತಿಳಿಸಿದರು. ನೆರೆಯಿಂದಾಗಿ ಪೂರ್ಣ ಪ್ರಮಾಣದಲ್ಲಿ ಮನೆಯನ್ನು ಕಳೆದುಕೊಂಡವರಿಗೆ 5 ಲಕ್ಷ ರೂ. ವೆಚ್ಚದಲ್ಲಿ ಮನೆ ನಿರ್ಮಾಣಕ್ಕೆ ಅನುದಾನ ಒದಗಿಸುವುದರ ಜೊತೆಗೆ ಅವರ ಮನೆ ಪೂರ್ಣಗೊಳ್ಳುವವರೆಗೆ ಅಧಿಕಾರಿಗಳೇ ಮೇಲುಸ್ತುವಾರಿಯನ್ನು ವಹಿಸಬೇಕು. ಮಳೆ ನೀರಿನಿಂದ ಹಾನಿಗೊಳಗಾದಾಗ ಬೆಳೆಹಾನಿಯನ್ನು ಶೀಘ್ರದಲ್ಲಿಯೇ ಸರ್ವೇ ಮಾಡಿಸಿ, ಪರಿಹಾರ ನೀಡುವುದರ ಜೊತೆಗೆ ಎರಡನೇ ಬಾರಿ ಬಿತ್ತನೆಗೆ ಭತ್ತದ ಬೀಜದ ವ್ಯವಸ್ಥೆಯನ್ನು ಸಹ ಮಾಡಬೇಕು. ಜಿಲ್ಲೆಯಲ್ಲಿ ಈ ಬಾರಿಯ ಮಳೆಯಿಂದ 6296.25 ಲಕ್ಷ ರೂ. ದಷ್ಟು ಮೂಲ ಸೌಕರ್ಯಗಳನ್ನು ಕಲ್ಪಿಸುವ ರಸ್ತೆ, ವಿದ್ಯುತ್, ಸಂಪರ್ಕ ಸಾಧನಗಳು, ಸರಕಾರಿ ಕಟ್ಟಡಗಳು ಹಾನಿಯಾಗಿವೆ. ಇವುಗಳನ್ನು ಸರ್ವೇ ಮಾಡಿಸಿ ಸರಕಾರಕ್ಕೆ ಕೂಡಲೇ ವರದಿ ಮಾಡಿ, ಪುನರ್ ನಿರ್ಮಾಣ ಮಾಡಲು ಮುಂದಾಗಬೇಕು ಎಂದರು.

ಮಳೆಗಾಲದಲ್ಲಿ ಅಪಾಯಕಾರಿಯಾಗುವ ಕಾಲುಸಂಕಗಳ ಮೇಲೆ ಸಂಚರಿಸುವುದು ಅಪಘಾತಗಳಿಗೆ ಅನುವು ಮಾಡಿಕೊಟ್ಟ ಹಾಗೆ ಆಗಿರುತ್ತದೆ. ಈ ಕೂಡಲೇ ಆರ್.ಡಿ.ಪಿ.ಆರ್ ಹಾಗೂ ಪಿಡ್ಲೂö್ಯಡಿ ರವರು ಅಂತಹ ಕಾಲು ಸಂಕಗಳ ಸರ್ವೆ ಮಾಡಿಸಿ 2 ವರ್ಷದೊಳಗೆ ನರೇಗಾ ಹಾಗೂ ಇತರೇ ಅನುದಾನದೊಂದಿಗೆ ಶಾಶ್ವತ ಕಾಮಗಾರಿ ಕೈಗೊಳ್ಳಬೇಕು ಎಂದರು. ರೈತರಿಗೆ ಗೊಬ್ಬರ, ಬಿತ್ತನೆ ಬೀಜ ಔಷಧಿಗಳ ವಿತರಣೆಯಲ್ಲಿ ಯವುದೇ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಹೆಚ್ಚಿನ ಮಳೆಯಿಂದಾಗಿ ಜಿಲ್ಲೆಯಲ್ಲಿ ಅಡಿಕೆಗೆ ಚುಕ್ಕೆ ರೋಗ ಕಂಡುಬಂದಿದೆ. ಇದಕ್ಕೆ ಕಾರಣವೇನು? ಇದನ್ನು ಶಾಶ್ವತವಾಗಿ ನಿರ್ಮೂಲನೆ ಮಾಡಲು ಏನು ಕ್ರಮ ಅನುಸರಿಸಬೇಕು, ಎಂಬುದರ ಬಗ್ಗೆ ವಿಜ್ಞಾನಿಗಳ ಸ್ಥಳ ಭೇಟಿಗಳೊಂದಿಗೆ ವರದಿಯನ್ನು ಸರಕಾರಕ್ಕೆ ನೀಡಬೇಕೆಂದು ಸೂಚನೆ ನೀಡಿದರು. ಪ್ರಸ್ತುತ ಜಿಲ್ಲೆಯು ಆರೋಗ್ಯ ಸೇವೆ ಸೂಚ್ಯಂಕದಲ್ಲಿ 18 ನೇ ಸ್ಥಾನದಲ್ಲಿದೆ. ಆದರೆ ಹಿಂದೆ ನಮ್ಮ ಸರ್ಕಾರದ ಅವಧಿಯ 2015 ನೇ ಸಾಲಿನಲ್ಲಿ ಜಿಲ್ಲೆಯು ಮೊದಲನೇ ಸ್ಥಾನದಲ್ಲಿತ್ತು. ಇದು ನಿಮ್ಮ ಉದಾಸೀನತೆಯನ್ನು ತೋರುತ್ತದೆ ಎಂದು ವಿಷಾದ ವ್ಯಕ್ತಪಡಿಸಿದ ಅವರು, ಮತ್ತೆ ಜಿಲ್ಲೆಯನ್ನು 1 ನೇ ಸ್ಥಾನಕ್ಕೆ ತರಲು ಆರೋಗ್ಯ ಇಲಾಖೆ ಸಿಬ್ಬಂದಿಗಳು ಶ್ರಮವಹಿಸಿ, ಕೆಲಸ ಮಾಡಬೇಕು ಎಂದರು.

ಜಿಲ್ಲೆಯ ಸಾರ್ವಜನಿಕರಿಗೆ ಉತ್ತಮ ಆರೋಗ್ಯ ಸೇವೆಯನ್ನು ಒದಗಿಸುವುದು ಆರೋಗ್ಯ ಇಲಾಖೆಯ ಆದ್ಯ ಕರ್ತವ್ಯಗಳಲ್ಲಿ ಒಂದಾಗಿದೆ.ಆರೋಗ್ಯ ಸಿಬ್ಬಂದಿಗಳು ಜನರಿಗೆ ಉತ್ತಮ ಸೇವೆಗಳನ್ನು ಒದಗಿಸದಿದ್ದಲ್ಲಿ ಮರಣ ಹೊಂದುವವರ ಸಂಖ್ಯೆ ಹೆಚ್ಚುತ್ತದೆ. ಜಿಲ್ಲೆಯಲ್ಲಿ ಇತ್ತೀಚೆಗೆ ತಾಯಿ ಮಕ್ಕಳ ಮರಣ ಸಂಖ್ಯೆಯೂ ಸಹ ಹೆಚ್ಚಾಗಿದೆ. ಇದೇ ರೀತಿ ಮುಂದುವರೆದಲ್ಲಿ ಜಿಲ್ಲಾ ಆರೋಗ್ಯ ಅಧಿಕಾರಿಗಳನ್ನೇ ನೇರ ಹೊಣೆಯನ್ನಾಗಿಸಿ ಶಿಸ್ತು ಕ್ರಮ ಅಥವಾ ಸೇವೆಯಿಂದ ವಜಾಗೊಳಿಸುವುದಾಗಿ ಎಚ್ಚರ ನೀಡಿದರು. ಶೈಕ್ಷಣಿಕ ಸೂಚ್ಯಂಕದಲ್ಲಿ 2017 ರಿಂದ 2019 ರ ವರೆಗೆ ಮೊದಲ ಹಾಗೂ ಎರಡನೇ ಸ್ಥಾನ ಹೊಂದಿದ ಜಿಲ್ಲೆಯು 13 ನೇ ಸ್ಥಾನಕ್ಕೆ ಕುಸಿತಗೊಂಡಿರುವ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ ಸಿಎಂ, ಮುಂದಿನ ಅವಧಿಯೊಳಗೆ ಜಿಲ್ಲೆಯ ಸೂಚ್ಯಂಕದಲ್ಲಿ ಪ್ರಗತಿ ಕಾಣದೇ ಇದ್ದಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನೇ ನೇರ ಹೊಣೆ ಮಾಡಲಾಗುವುದು. 10 ಕ್ಕಿಂತ ಕಡಿಮೆ ಮಕ್ಕಳ ಸಂಖ್ಯೆ ಹೊಂದಿರುವ ಶಾಲೆಯನ್ನು ಸಮೀಪದ ಶಾಲೆಗಳಿಗೆ ಒಂದುಗೂಡಿಸಿ, ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳುವುದರೊಂದಿಗೆ ರಾಜ್ಯಕ್ಕೆ ಮಾದರಿ ಆಗುವ ರೀತಿಯಲ್ಲಿ ಮಾಡಬೇಕು ಎಂದರು.

ಜಿಲ್ಲೆಯಲ್ಲಿ ಕಳೆದ 2 ವರ್ಷಗಳಿಂದ 2808 ರಸ್ತೆ ಅಪಘಾತವಾಗಿ, 543 ಜನ ಮರಣ ಹೊಂದಿರುತ್ತಾರೆ. ಇದಕ್ಕೆಲ್ಲ ಏನು ಕಾರಣ ಎಂದು ಪ್ರಶ್ನಿಸಿದ ಅವರು, ಲೊಕೋಪಯೋಗಿ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಈ ಬಗ್ಗೆ ಎಚ್ಚರ ವಹಿಸಬೇಕು. ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯ ಸೈಬರ್ ಕ್ರೈಮ್ ಪ್ರಕರಣಗಳು ಕಂಡುಬರುತ್ತಿವೆ. ಇದರಿಂದ ಕಾನೂನು ಸುವ್ಯವಸ್ಥೆ ಸರಿಯಿಲ್ಲದಂತಾಗಿದೆ. ಪೊಲೀಸ್ ಇಲಾಖೆಯು ದಿನದ 24 ಗಂಟೆಯೂ ಕೆಲಸ ನಿರ್ವಹಿಸಿ, ಈ ರೀತಿ ಆಗುವುದು ಸರಿಯಲ್ಲ. ಇಂತಹ ಪ್ರಕರಣಗಳು ಕಂಡು ಬಂದಲ್ಲಿ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಬೇಕು ಎಂದರು. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಹಾಗೂ ಜಿಲ್ಲಾಧಿಕಾರಿಗಳು ಆಗಿಂದಾಗ್ಗೆ ಎಲ್ಲಾ ಇಲಾಖೆಗಳ ಪ್ರಗತಿ ಪರಿಶೀಲನೆಗಳನ್ನು ಕೈಗೊಳ್ಳುವ ಜೊತೆಗೆ ಹಾಸ್ಟೆಲ್, ಆಸ್ಪತ್ರೆ, ಶಾಲೆಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು ಎಂದು ಸೂಚನೆ ನೀಡಿದರು.

ಉಡುಪಿ, ಮಂಗಳೂರು ಜಿಲ್ಲೆಗಳು ಅಕ್ಷರಸ್ಥ ಜಿಲ್ಲೆಯಾಗಿದ್ದು, ರಾಜ್ಯಕ್ಕೆ ಮಾದರಿಯಾಗಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ಅದು ಕಂಡುಬರುತ್ತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಈ ಬಗ್ಗೆ ತ್ರೈಮಾಸಿಕ ಜಿಲ್ಲಾ ಪ್ರಗತಿ ಪರಿಶೀಲನೆ ತೆಗೆದುಕೊಳ್ಳವ ಜೊತೆಗೆ ಅಯ್ದ ಇಲಾಖೆಗಳ ಪರಿಶೀಲನೆಯನ್ನು ತಿಂಗಳಿಗೊಮ್ಮೆ ಕೈಗೊಳ್ಳಬೇಕು ಎಂದರು. ಸಾರ್ವಜನಿಕ ಕುಂದುಕೊರತೆಗಳು ಪತ್ರಿಕೆಗಳಲ್ಲಿ ಪ್ರಕಟವಾದಾಗ ಅಧಿಕಾರಿಗಳು ಕೂಡಲೇ ಸ್ಪಂದಿಸಬೇಕು. ಈ ಬಗ್ಗೆ ನಿರ್ಲಕ್ಷ್ಯ ವಹಿಸುವುದು ಸರಿಯಲ್ಲ ಎಂದರು.

ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಆರ್ ಹೆಬ್ಬಾಳ್ಕರ್, ಬಂದರು ಮತ್ತು ಮೀನುಗಾರಿಕಾ ಸಚಿವ ಮಾಂಕಾಳು ವೈದ್ಯ, ಶಾಸಕ ವಿ.ಸುನೀಲ್ ಕುಮಾರ್, ಯಶ್ಪಾಲ್ ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ಗುರುರಾಜ ಗಂಟಿಹೊಳೆ, ಕಿರಣ್ ಕೊಡ್ಗಿ, ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಮಂಜುನಾಥ ಭಂಡಾರಿ, ಒಳಾಡಳಿತ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಡಾ. ರಜನೀಶ್ ಗೋಯಲ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ಎಂ.ಟಿ.ರೇಜು ಹಾಗೂ ವಿವಿಧ ಇಲಾಖೆಗಳ ಅನುಷ್ಠಾನಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಪಂಚವರ್ಣ: 231ನೇ ಪರಿಸರಸ್ನೇಹಿ ಅಭಿಯಾನ

ಕೋಟ. ನ.25: ಪಂಚವರ್ಣ ಸಂಸ್ಥೆ ಪರಿಸರ ಜಾಗೃತಿ ಸ್ವಚ್ಛತಾ ಆಂದೋಲನ ಅವಿಭಜಿತ...

ಸಿಒಡಿಪಿ: ವಿಚಾರ ಸಂಕಿರಣ

ಮಂಗಳೂರು, ನ.25: ಮಾನವ ಕಳ್ಳಸಾಗಣೆ ಮತ್ತು ಸೈಬರ್ ಅಪರಾಧ ಕುರಿತ ವಿಚಾರ...

ಜನಾರ್ದ​ನ್ ಕೊಡವೂರು​ ದಂಪತಿಗಳಿಗೆ ಅಭಿನಂದನೆ ​

ಉಡುಪಿ, ನ.24: ಭಾರ​ತ್ ಸ್ಕೌಟ್ಸ್ ಅಂಡ್ ಗೈಡ್ಸ್ ​ಉಡುಪಿ ಸಂಸ್ಥೆಯ ಜಿಲ್ಲಾ​...

ಶಿಸ್ತು, ಛಲ, ಆತ್ಮಸ್ಥೈರ್ಯ ಬೆಳೆಸಿಕೊಳ್ಳಿ: ಉಡುಪಿ ಜಿಲ್ಲಾಧಿಕಾರಿ

ಉಡುಪಿ, ನ.24: ಸ್ಕೌಟ್ಸ್ ಮತ್ತು ಗೈಡ್ಸ್ ನಲ್ಲಿ ಭಾಗವಹಿಸುವುದರಿಂದ ಜೀವನದಲ್ಲಿ ಶಿಸ್ತು,...
error: Content is protected !!