ಉಡುಪಿ, ಜು. 30: ಸದಸ್ಯರು ನಿರಂತರವಾಗಿ ಸಂಘಟನೆಯಲ್ಲಿ ತೊಡಗಿಸಿಕೊಂಡಾಗ ಸಂಘಟನೆಯು ಬಲಿಷ್ಠವಾಗುವುದು. ಅದರಿಂದ ಸರಕಾರ ಮಟ್ಟದಲ್ಲಿ ಅಥವಾ ಸ್ಥಳೀಯ ಮಟ್ಟದಲ್ಲಿ ಸಂಘಟನೆಗೆ ಬೇಕಾದ ಸವಲತ್ತುಗಳನ್ನು ಪಡೆಯಲು ಅನುಕೂಲವಾಗುವುದು ಎಂದು ಜಿಲ್ಲಾಧ್ಯಕ್ಷ ಆನಂದ ಎನ್ ಕುಂಪಲ ಹೇಳಿದರು. ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ದ.ಕ ಮತ್ತು ಉಡುಪಿ ಜಿಲ್ಲೆ ಇದರ ಉಡುಪಿ ವಲಯದ ವಾರ್ಷಿಕ ಸಭೆಯನ್ನು ಜ್ಯೋತಿ ಬೆಳಗಿಸಿ, ಉದ್ಘಾಟಿಸಿ ಅವರು ಮಾತನಾಡಿದರು.
ತುಳು ಭಾಷೆಗೆ ಮಾನ್ಯತೆಯ ಹೋರಾಟದ ಈ ಸಂದರ್ಭದಲ್ಲಿ ಉಡುಪಿ ವಲಯವು ಸಭೆಯ ಇಡೀ ನಡಾವಳಿಯನ್ನು ತುಳುವಿನಲ್ಲಿ ನೆರವೇರಿಸಿದ್ದು ಶ್ಲಾಘನೀಯ ಎಂದರು. ಸದಸ್ಯರ ಮಕ್ಕಳಿಗೆ ಕಲಿಕಾ ಪ್ರೋತ್ಸಾಹ ನೀಡಲಾಯಿತು. ನೂತನ ಸದಸ್ಯರನ್ನು ಸಂಘಟನೆಗೆ ಸೇರಿಸಿಕೊಳ್ಳಲಾಯಿತು. ಜಿಲ್ಲಾ ಕೆಸರು ಗದ್ದೆ ಕ್ರೀಡಾಕೂಟದ ಪೋಸ್ಟರ್ ನ್ನು ಬಿಡುಗಡೆಗೊಳಿಸಲಾಯಿತು. ಸುರಭಿ ಸುಧೀರ್ ಶೆಟ್ಟಿ ನೇತೃತ್ವದ 2023-25ರ ನೂತನ ಸಾಲಿನ ತಂಡವನ್ನು ಆರಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿತಿನ್ ಬೆಳುವಾಯಿ, ಜಿಲ್ಲಾ ಕೋಶಾಧ್ಯಕ್ಷ ನವೀನ್ ರೈ ಪಂಜಳ, ಜಿಲ್ಲಾ ಉಪಾಧ್ಯಕ್ಷ ಪದ್ಮಪ್ರಸಾದ್ ಜೈನ್ , ಎಸ್ಕೆಪಿಎ ವಿವಿದೋದ್ದೇಶ ಸಹಕಾರಿ ಸಂಘದ ಅಧ್ಯಕ್ಷಕ್ಕೆ ವಾಸುದೇವ ರಾವ್, ಜಿಲ್ಲಾ ಜೊತೆ ಕಾರ್ಯದರ್ಶಿ ವಾಮನ ಪಡುಕೆರೆ, ಜಿಲ್ಲಾ ಕಟ್ಟಡ ಸಮಿತಿ ಸದಸ್ಯ ಸುಂದರ ಪೂಜಾರಿ ಕೊಳಲಗಿರಿ, ಅಶೋಕ್ ಪುತ್ರನ್ , ಪ್ರವೀಣ್ ಹರಿಖಂಡಿಗೆ, ಮಂಜು ಪರ್ಕಳ, ದಾಮೋದರ ಸುವರ್ಣ, ಸತೀಶ್ ಸೇರಿಗಾರ್, ಹರೀಶ್ ಅಲೆವೂರು, ಸಂದೀಪ್ ಕಾಮತ್ ಉಪಸ್ಥಿತರಿದ್ದರು. ವಲಯಾಧ್ಯಕ್ಷ ಜನಾರ್ದನ್ ಕೊಡವೂರು ಸ್ವಾಗತಿಸಿ, ಪ್ರಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಪ್ರವೀಣ್ ಕೊರೆಯ ವರದಿ ವಾಚಿಸಿದರು. ಕೋಶಾಧಿಕಾರಿ ದಿವಾಕರ್ ಹಿರಿಯಡ್ಕ ಲೆಕ್ಕಪತ್ರ ಮಂಡಿಸಿ, ವಂದಿಸಿದರು. ರಾಘವೇಂದ್ರ ಸೇರಿಗಾರ್ ನಿರೂಪಿಸಿದರು. ಸುಂದರ್ ನಿಟ್ಟೂರು ಪ್ರಾರ್ಥಿಸಿದರು.