ಉಡುಪಿ, ಜುಲೈ 19: ಉಡುಪಿ ನಗರಸಭಾ ವ್ಯಾಪ್ತಿಯ ಸಂತೆಕಟ್ಟೆಯಲ್ಲಿ ಬುಧವಾರ ನಿಷೇದಿತ ಪ್ಲಾಸ್ಟಿಕ್‌ಗಳನ್ನು ಮಾರಾಟ ಮಾಡುತ್ತಿದ್ದ ಅಂಗಡಿಗಳಿಗೆ ದಾಳಿ ನಡೆಸಿ 52 ಕೆ.ಜಿ ನಿಷೇಧಿತ ಪ್ಲಾಸ್ಟಿಕ್‌ಗಳನ್ನು ವಶಪಡಿಸಿಕೊಂಡು, 18,000 ರೂ. ದಂಡ ವಿಧಿಸಲಾಯಿತು ಹಾಗೂ ಉದ್ದಿಮೆಗಳಲ್ಲಿ ಏಕಬಳಕೆಯ ಪ್ಲಾಸ್ಟಿಕ್‌ಗಳನ್ನು ಉಪಯೋಗಿಸದ ಉದ್ದಿಮೆಯನ್ನು ಹಸಿರು ಸಂಸ್ಥೆ ಎಂದು ಘೋಷಿಸಲಾಯಿತು. ಈ ಸಂದರ್ಭದಲ್ಲಿ ನಗರಸಭೆಯ ಪರಿಸರ ಅಭಿಯಂತರರು, ಹಿರಿಯ ಆರೋಗ್ಯ ನಿರೀಕ್ಷಕರು, ಕಿರಿಯ ಆರೋಗ್ಯ ನಿರೀಕ್ಷಕರು, ಸ್ಯಾನಿಟರಿ ಸೂಪರ್‌ವೈಸರ್ ಹಾಗೂ ಪೌರಕಾರ್ಮಿಕರು ಭಾಗವಹಿಸಿದ್ದರು. ಸಾರ್ವಜನಿಕರು, ಉದ್ದಿಮೆದಾರರು, ವ್ಯಾಪಾರಿಗಳು ನಿಷೇಧಿತ ಪ್ಲಾಸ್ಟಿಕ್‌ಗಳನ್ನು ಉಪಯೋಗಿಸುವುದು ಕಂಡುಬಂದಲ್ಲಿ ಉದ್ದಿಮೆ ಪರವಾನಿಗೆಯನ್ನು ರದ್ದುಪಡಿಸಿ, ದಂಡ ವಿಧಿಸಲಾಗುವುದು.
ಎಲ್ಲಾ ಉದ್ದಿಮೆದಾರರು ಏಕಬಳಕೆಯ ಪ್ಲಾಸ್ಟಿಕ್‌ಗಳನ್ನು ಉಪಯೋಗಿಸುವುದನ್ನು ತ್ಯಜಿಸಿ ಹಸಿರು ಸಂಸ್ಥೆ ಎಂದು ಘೋಷಿಸಿಕೊಳ್ಳುವಂತೆ ಹಾಗೂ ಸಾರ್ವಜನಿಕರು ಮನೆ, ಮದುವೆ ಹಾಲ್, ಹೊಟೇಲ್‌ಗಳಲ್ಲಿ ಸಮಾರಂಭ ಮಾಡುವಾಗ ಪ್ಲಾಸ್ಟಿಕ್ ವಸ್ತುಗಳನ್ನು ಉಪಯೋಗಿಸದೇ ಮರುಬಳಕೆಯ ವಸ್ತುಗಳನ್ನು ಉಪಯೋಗಿಸಿ ಪ್ಲಾಸ್ಟಿಕ್ ಉತ್ಪಾದನೆಯನ್ನು ಕಡಿಮೆ ಮಾಡಿ ಪರಿಸರ ಸಂರಕ್ಷಣೆಗೆ ನಗರಸಭೆಯೊಂದಿಗೆ ಕೈಜೋಡಿಸುವಂತೆ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.