ಕಾಪು, ಜು. 12: ಯಕ್ಷಶಿಕ್ಷಣ ಟ್ರಸ್ಟ್ ಇವರ ಸಹಯೋಗದಲ್ಲಿ ಯಕ್ಷಗಾನದ ತರಗತಿಯು ಪಡುಬಿದ್ರಿ ಗಣಪತಿ ಪ್ರೌಢಶಾಲೆಯಲ್ಲಿ ಬುಧವಾರ ಆರಂಭವಾಯಿತು. ಉಡುಪಿ ಯಕ್ಷಗಾನ ಕಲಾರಂಗದ ಅಧ್ಯಕ್ಷರಾದ ಎಂ. ಗಂಗಾಧರ ರಾವ್ ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಮಕ್ಕಳಿಗೆ ಪುರಾಣ ಜ್ಞಾನ, ಭಾರತೀಯ ಸಂಸ್ಕೃತಿಯ ಅರಿವನ್ನು ಹೆಚ್ಚಿಸಿಕೊಳ್ಳಲು ಯಕ್ಷಗಾನ ಸಹಕಾರಿಯಾಗಿದೆ ಎಂದರು. ಕಲಾರಂಗದ ಉಪಾಧ್ಯಕ್ಷರಾದ ವಿ. ಜಿ. ಶೆಟ್ಟಿ ಶುಭ ಹಾರೈಸಿದರು.
ಯಕ್ಷಶಿಕ್ಷಣ ಟ್ರಸ್ಟ್ ನ ಕಾರ್ಯದರ್ಶಿ ಮುರಳಿ ಕಡೆಕಾರ್ ಮಾತನಾಡಿ, ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಯಕ್ಷಶಿಕ್ಷಣ ಸಹಕಾರಿ ಎಂಬುದನ್ನು ಅರಿತ ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರ ವಿಶೇಷ ಆಸಕ್ತಿಯಿಂದಾಗಿ ಈ ಬಾರಿ ಕಾಪು ವಿಧಾನಸಭಾ ವ್ಯಾಪ್ತಿಯ 15 ಪ್ರೌಢಶಾಲೆಗಳಲ್ಲಿ ಯಕ್ಷಗಾನ ತರಗತಿ ಆರಂಭಿಸಲಾಗಿದೆ ಎಂದರು. ಪ್ರೌಢಶಾಲಾ ಮುಖ್ಯ ಶಿಕ್ಷಕರಾದ ಅನುರಾಧಾ ಪಿ. ಎಸ್. ಸ್ವಾಗತಿಸಿದರು.
ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರಾದ ಅಶೋಕ ಕೆ ವಂದಿಸಿದರು. ಸಂಸ್ಕೃತ ಭಾಷಾ ಶಿಕ್ಷಕರಾದ ಡಾ. ರಾಘವೇಂದ್ರ ರಾವ್ ಕಾರ್ಯಕ್ರಮ ನಿರೂಪಿಸಿದರು. ಯಕ್ಷಗಾನ ಗುರುಗಳಾದ ನಿತಿನ್ ಪಡುಬಿದ್ರಿ ಗಣಪತಿ ಸ್ತುತಿಯೊಂದಿಗೆ ಯಕ್ಷಗಾನ ತರಬೇತಿಯನ್ನು ಆರಂಭಿಸಿದರು.