ಉಡುಪಿ, ಜುಲೈ 7: ತೋಟಗಾರಿಕೆ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಮರು ವಿನ್ಯಾಸಗೊಳಿಸಿದ ಹವಾಮಾನಾಧಾರಿತ ಬೆಳೆ ವಿಮೆ ಯೋಜನೆಯಡಿ ಜಿಲ್ಲೆಯಲ್ಲಿ ಅಡಿಕೆ ಮತ್ತು ಕಾಳುಮೆಣಸು ಬೆಳೆಗಳಿಗೆ ಹವಾಮಾನ ವೈಪರಿತ್ಯದಿಂದ ಉಂಟಾಗುವ ಬೆಳೆ ನಷ್ಟಕ್ಕೆ ಮುಂಗಾರು ಹಂಗಾಮಿಗೆ ಈ ಯೋಜನೆಯಡಿ ನೋಂದಣಿ ಮಾಡಿಕೊಳ್ಳಲು ರೈತರಿಗೆ ಅವಕಾಶ ಕಲ್ಪಿಸಲಾಗಿದೆ. ರೈತರು ಅಡಿಕೆ ಬೆಳೆ ಪ್ರತಿ ಹೆ. ಗೆ ವಿಮಾ ಮೊತ್ತ 1,28,000 ರೂ. ಗಳಿಗೆ ವಿಮಾಕಂತು (ಶೇ.5) 6,400 ರೂ. ಹಾಗೂ ಕರಿಮೆಣಸು ಪ್ರತಿ ಹೆ.ಗೆ ವಿಮಾ ಮೊತ್ತ 47,000 ರೂ. ಗಳಿಗೆ ವಿಮಾಕಂತು (ಶೇ.5) 2,350 ರೂ. ಪಾವತಿಸಿ, ಯೋಜನೆಯಲ್ಲಿ ನೊಂದಣಿ ಮಾಡಿಕೊಳ್ಳಲು ಜುಲೈ 15 ಕೊನೆಯ ದಿನವಾಗಿದ್ದು, ರೈತರು ವಿಮಾ ಕಂತುಗಳನ್ನು ಪಾವತಿಸಲು ನಿಗದಿತ ದಾಖಲೆಗಳೊಂದಿಗೆ ಹತ್ತಿರದ ಬ್ಯಾಂಕ್ ಮತ್ತು ಡಿಜಿಟಲ್ ಇ-ಸೇವಾ ಕೇಂದ್ರಗಳನ್ನು ಸಂಪರ್ಕಿಸಬಹುದಾಗಿದೆ.
ಬೆಳೆ ವಿಮಾ ಯೋಜನೆಯಲ್ಲಿ ಗ್ರಾಮ ಪಂಚಾಯತ್‌ಗಳನ್ನು ವಿಮಾ ಘಟಕಗಳಾಗಿ ಅಧಿಸೂಚಿಸಲಾಗಿದ್ದು, ಅಡಿಕೆ ಹಾಗೂ ಕಾಳುಮೆಣಸು ಬೆಳೆ ಸಾಲ ಪಡೆದ ಹಾಗೂ ಪಡೆಯದ ರೈತರು ಪಾಲ್ಗೊಳ್ಳಬಹುದಾಗಿದೆ. ಬೆಳೆ ಸಾಲ ಪಡೆಯದ ರೈತರಿಗೆ ಈ ಯೋಜನೆಯು ಐಚ್ಛಿಕವಾಗಿದ್ದು, ಬೆಳೆ ಸಾಲ ಪಡೆದ ರೈತರು ಯೋಜನೆಯಲ್ಲಿ ಪಾಲ್ಗೊಳ್ಳದೇ ಇರಲು ಇಚ್ಚಿಸಿದಲ್ಲಿ ನೋಂದಣಿಯ ಅಂತಿಮ ದಿನಾಂಕದ ಒಂದು ವಾರದೊಳಗೆ ಮುಚ್ಚಳಿಕೆ ಪತ್ರವನ್ನು ಬೆಳೆ ಸಾಲ ಪಡೆದ ಹಣಕಾಸು ಸಂಸ್ಥೆಗೆ ಸಲ್ಲಿಸಬೇಕು. ವಿಮೆ ಮಾಡಿಸುವ ರೈತರು ಫ್ರೂಟ್ ತಂತ್ರಾಂಶದ ನೊಂದಣಿ ಸಂಖ್ಯೆಯನ್ನು ಹೊಂದಿರುವುದು ಕಡ್ಡಾಯವಾಗಿದ್ದು, ಸದರಿ ನೊಂದಣಿ ಸಂಖ್ಯೆಗೆ ಪಹಣಿ ವಿವರವನ್ನು ಜೋಡಿಸಿಕೊಳ್ಳಬೇಕು. ನೋಂದಣಿ ಸಂಖ್ಯೆ ಹೊಂದಿಲ್ಲದ ರೈತರು ನೋಂದಣಿ ಸಂಖ್ಯೆಯನ್ನು ಮಾಡಿಕೊಂಡು ವಿಮೆಯಲ್ಲಿ ಪಾಲ್ಗೊಳ್ಳಬೇಕು.
ರೈತರು ವಿಮೆ ಮಾಡಲ್ಪಟ್ಟ ಬೆಳೆಗಳಿಗೆ 2023 ರ ಜುಲೈ 01 ರಿಂದ 2024 ರ ಜೂನ್ 30 ರ ವರೆಗೆ ವಿಮೆ ರಕ್ಷಣೆಯ ಅವಧಿ ಇದ್ದು, ನಿಗದಿತ ಟರ್ಮ್ ಶೀಟ್ ಹಾಗೂ ನಷ್ಟ ಲೆಕ್ಕಾಚಾರದ ಕಾಲಮಿತಿಯೊಳಗೆ ಹವಾಮಾನ ವೈಪರಿತ್ಯಗಳಿಂದಾಗಿ ಬೆಳೆ ನಷ್ಟ ಉಂಟಾದಲ್ಲಿ, ವಿಮೆ ರಕ್ಷಣೆಯ ಅವಧಿ ಮುಗಿದ 45 ದಿನಗಳ ಒಳಗೆ ವಿಮಾ ಕಂಪೆನಿಯು ನಷ್ಟ ಪರಿಹಾರವನ್ನು ಪಾವತಿಸುತ್ತದೆ. ವಿಮಾ ನಷ್ಟ ಪರಿಹಾರವು Adhaar enabled payment system(AEPS) ಮೂಲಕ ಆಗುವುದರಿಂದ ವಿಮಾ ಅರ್ಜಿಯಲ್ಲಿ ಸಕ್ರಿಯ ಆಧಾರ್ ಮಾಹಿತಿಯನ್ನು ನೀಡಬೇಕು. ಬೆಳೆ ಸಾಲ ಹೊಂದಿಲ್ಲದ ರೈತರು ಆಧಾರ್ ಮಾಹಿತಿಯೊಂದಿಗೆ ಜಮೀನಿನ ಪಹಣಿ ಪ್ರತಿ, ಉಳಿತಾಯ ಖಾತೆ ಮಾಹಿತಿ ದಾಖಲೆಗಳು, ಸ್ವಯಂಘೋಷಣೆ ನಮೂನೆಗಳನ್ನು ಪ್ರೀಮಿಯಂ ಮೊತ್ತದೊಂದಿಗೆ ಹಣಕಾಸು ಸಂಸ್ಥೆಗಳಿಗೆ ಸಲ್ಲಿಸಿ ನೊಂದಣಿ ಮಾಡಿಸಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಸ್ಥಳೀಯ ವಾಣಿಜ್ಯ, ಗ್ರಾಮೀಣ ಸಹಕಾರಿ ಬ್ಯಾಂಕ್, ಹೋಬಳಿ ರೈತ ಸಂಪರ್ಕ ಕೇಂದ್ರ, ತಾಲೂಕು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಅಥವಾ ಜಿಲ್ಲಾ ತೋಟಗಾರಿಕೆ ಉಪನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.