ಉಡುಪಿ, ಜೂನ್ 27: ನಗರ ನಿರ್ಮಾಣದಲ್ಲಿ ವಿಶೇಷ ಆಸಕ್ತಿ ವಹಿಸಿ, ನಗರ ನಿರ್ಮಾಣದ ಪರಿಕಲ್ಪನೆಯನ್ನು ಸಾಕಾರಗೊಳಿಸಿ, ದೇಶ- ವಿದೇಶಿಗರಿಗೆ ಚಿರಪರಿಚಿತವಾದ ಬೆಂಗಳೂರು ನಗರವನ್ನು ನಿರ್ಮಾಣ ಮಾಡಿದ ಕೀರ್ತಿ ಸಾಮಂತ ರಾಜನಾದ ಕೆಂಪೇಗೌಡರಿಗೆ ಸಲ್ಲುತ್ತದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್ ಹೇಳಿದರು. ಅವರು ಮಂಗಳವಾರ ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಕೆಂಪೇಗೌಡರ ಜಯಂತಿ ಕಾರ್ಯಕ್ರಮದಲ್ಲಿ, ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ಮಾತನಾಡಿದರು.
ಕೆಂಪೇಗೌಡರು ನಗರ ನಿರ್ಮಾಣದ ಜೊತೆ ಜೊತೆಗೆ ಕೃಷಿಗೆ ಸಹ ಆದ್ಯತೆಯನ್ನು ನೀಡಿದ್ದು. ಹಲವಾರು ಕೆರೆ, ಕೋಟೆ-ಕೊತ್ತಲೆಗಳು, ದೇವಾಲಯಗಳನ್ನು, ಪ್ರಮುಖ ನಾಲ್ಕು ದ್ವಾರಗಳನ್ನು ನಿರ್ಮಾಣ ಮಾಡಿದ್ದಾರೆ. ನಾಡಿನ ಭವಿಷ್ಯದ ದೂರದೃಷ್ಠಿಯಿಂದ ಹಾಗೂ ಮುಂದಿನ ಪೀಳಿಗೆಯ ಏಳಿಗೆಗಾಗಿ ಹಲವು ಜನಪ್ರಿಯ ಯೋಜನೆಗಳನ್ನು ಜಾರಿಗೆ ತಂದ ಕೀರ್ತಿ ಕೆಂಪೇಗೌಡರಿಗೆ ಸಲ್ಲುತ್ತದೆ. ಪ್ರಸ್ತುತ ಬೆಂಗಳೂರು ನಗರವು ಜನಸಾಮಾನ್ಯರಿಗೆ ಬದುಕು ಕಟ್ಟಿಕೊಳ್ಳಲು ಹಾಗೂ ನಿರುದ್ಯೋಗಿಗಳಿಗೆ ಉದ್ಯೋಗ ನೀಡುವ ಪ್ರಮುಖ ನಗರವಾಗಿದೆ ಎಂದರು. ಒಂದು ಕಾಲದಲ್ಲಿ ಕಾಡಿನಿಂದ ಕೂಡಿದ್ದ ಪ್ರದೇಶಕ್ಕೆ ಕೋಟೆ ನಿರ್ಮಿಸಿ, ಅದನ್ನು ಬೆಂಗಳೂರು ನಗರವನ್ನಾಗಿ ಮಾಡಿ, ಅದರ ಅಭಿವೃದ್ಧಿಗೆ ಕಾರಣರಾದ ನಾಡಪ್ರಭು ಕೆಂಪೇಗೌಡರಿಗೆ ಗೌರವ ಸಲ್ಲಿಸುವ ಕಾರ್ಯವನ್ನು ಸರಕಾರ ಮಾಡುತ್ತಿದೆ ಎಂದರು.
ಸಾಹಿತಿ ಹಾಗೂ ನಿವೃತ್ತ ಪ್ರಾಧ್ಯಾಪಕ ಶ್ರೀಕಾಂತ ಸಿದ್ಧಾಪುರ ಉಪನ್ಯಾಸ ನೀಡಿ, ಕೆಂಪೇಗೌಡರು ಕೃಷಿಗೆ ಆದ್ಯತೆ ನೀಡುವ ಉದ್ದೇಶದಿಂದ ನಗರದಲ್ಲಿ ಹಲವಾರು ಕೆರೆಗಳನ್ನು ಸ್ಥಾಪಿಸಿದ್ದಾರೆ. ತನ್ನನ್ನು ಬೇಟೆಯಾಡಲು ಬಂದ ನಾಯಿಯನ್ನು ಮೊಲವೊಂದು ಧೈರ್ಯದಿಂದ ಅಟ್ಟಿಸಿಕೊಂಡು ಹೋಗುತ್ತಿರುವ ಪ್ರದೇಶದಲ್ಲಿ ಬೆಂಗಳೂರು ನಗರ ನಿರ್ಮಾಣ ಮಾಡಲು ಕೆಂಪೇಗೌಡರು ನಿರ್ಧರಿಸಿದರು ಎಂದು ಇತಿಹಾಸ ತಿಳಿಸುತ್ತದೆ. ನಾಲ್ಕೂ ದಿಕ್ಕಿನಲ್ಲೂ ಗಡಿ ರೇಖೆಯನ್ನು ಗುರುತಿಸಲು ಎತ್ತುಗಳಿಗೆ ನೇಗಿಲನ್ನು ಕಟ್ಟಿ ಎತ್ತುಗಳು ನಿಲ್ಲುವ ಪ್ರದೇಶವನ್ನು ಗಡಿ ಪ್ರದೇಶ ಎಂದು ನಿರ್ಧರಿಸಿ, ಅದರ ಒಳಗೆ ಬೆಂಗಳೂರು ನಗರವನ್ನು ನಿರ್ಮಿಸಿದರು ಎಂಬ ದಂತಕಥೆಗಳೂ ಇವೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಚುನಾವಣಾ ಶಾಖೆಯ ತಹಶೀಲ್ದಾರ್ ಪರಶುರಾಮ್, ಉಡುಪಿ ಜಿಲ್ಲಾ ಒಕ್ಕಲಿಗ ಸಮಾಜದ ಅಧ್ಯಕ್ಷ ತುಕಾರಾಂ, ಉಪಾಧ್ಯಕ್ಷ ಹಾಗೂ ಪದಾಧಿಕಾರಿಗಳು, ಕ.ಸಾ.ಪ ಕಾರ್ಯದರ್ಶಿ ನರಸಿಂಹಮೂರ್ತಿ, ಜಿಲ್ಲಾ ಮಟ್ಟದ ಅನುಷ್ಠಾನಾಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿ, ರಾಮಾಂಜಿ ನಿರೂಪಿಸಿದರು. ಕ.ಸಾ.ಪ ಉಡುಪಿ ತಾಲೂಕು ಅಧ್ಯಕ್ಷ ರವಿರಾಜ್ ಹೆಚ್.ಪಿ ವಂದಿಸಿದರು.