ಉಡುಪಿ, ಜೂ. 24: ಪಡಿ ಮಂಗಳೂರು, 80 ಬಡಗಬೆಟ್ಟು ಗ್ರಾಮ ಪಂಚಾಯತ್, ಜಿಲ್ಲಾ ಶಿಕ್ಷಣ ಸಂಪನ್ಮೂಲ ಕೇಂದ್ರ ರಿ. ಉಡುಪಿ ಇವರ ಸಹಭಾಗಿತ್ವದಲ್ಲಿ ಶಿಕ್ಷಣ ಹಕ್ಕು ಮತ್ತು ಮಕ್ಕಳ ರಕ್ಷಣೆಗಾಗಿ ಮಕ್ಕಳ ಧ್ವನಿಗೆ ಧ್ವನಿಯಾಗೋಣ ಅಭಿಯಾನ- 2023 ಉದ್ಘಾಟನಾ ಸಮಾರಂಭ 80 ಬಡಗಬೆಟ್ಟು ಗ್ರಾಮ ಪಂಚಾಯತ್ ನಲ್ಲಿ ನಡೆಯಿತು.
ಪಡಿ ಮಂಗಳೂರು ತರಬೇತಿ ಸಂಯೋಜಕ ವಿವೇಕ್ ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದು ನಮ್ಮೆಲ್ಲರ ಕರ್ತವ್ಯ. ಶಾಲಾ ಹಂತದಲ್ಲಿ ಮಗುವಿನ ಶಿಕ್ಷಣ ಹಾಗೂ ಕಲಿಕೆಯು ಮಕ್ಕಳ ಸರ್ವಾಂಗೀಣ ಅಭಿವೃದ್ಧಿಯ ಚಟುವಟಿಕೆಗಳಾಗಿ ನಡೆಯುವುದರಿಂದ ಮಕ್ಕಳಲ್ಲಿ ಕ್ರಿಯಾಶೀಲತೆಯನ್ನು ಹೆಚ್ಚಿಸಲು ಅನುಕೂಲಕರ ವಾತವರಣದ ಅಗತ್ಯತೆ ಇದೆ. ಶಿಕ್ಷಣದ ಜೊತೆ ಮಕ್ಕಳ ರಕ್ಷಣೆ, ಆರೋಗ್ಯ, ಪೋಷಣೆಗೆ ಸಂಬಂಧಪಟ್ಟಂತೆ ಹೆಚ್ಚಿನ ಗಮನಹರಿಸಬೇಕು ಮತ್ತು ಇದು ಸ್ಥಳೀಯ ಸರಕಾರದ ಜವಾಬ್ದಾರಿ ಎಂದರು.
ಶಿಕ್ಷಣ ಹಕ್ಕು ಮತ್ತು ಮಕ್ಕಳ ರಕ್ಷಣೆಗಾಗಿ ಮಕ್ಕಳ ಧ್ವನಿಗೆ ಧ್ವನಿಯಾಗೋಣ ಕರಪತ್ರ ಬಿಡುಗಡೆ ಮಾಡುವ ಮೂಲಕ ಉದ್ಘಾಟನೆಯನ್ನು ನೆರವೇರಿಸಿದ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಾಧವಿ ಎಸ್ ಆಚಾರ್ಯ ಮಾತನಾಡಿ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವುದು ಗ್ರಾಮ ಪಂಚಾಯತ್ ಜವಾಬ್ದಾರಿಯಾಗಿದೆ. ಇದನ್ನು ನೀಡುವಲ್ಲಿ ನಮ್ಮ 80 ಬಡಗಬೆಟ್ಟು ಗ್ರಾಮ ಪಂಚಾಯತ್ ಯಶಸ್ವಿಯಾಗಿದೆ. ಪಡಿ ಸಂಸ್ಥೆಯ ಸಹಕಾರದೊಂದಿಗೆ ಶಿಕ್ಷಣ ಹಕ್ಕು ಕಾಯಿದೆ- 2009ರ ಸಮರ್ಪಕ ಅನುಷ್ಠಾನ ಮಾಡುವ ನಿಟ್ಟಿನಲ್ಲಿ ನಾವು ಯಶಸ್ವಿಯಾಗಿದ್ದೇವೆ ಮತ್ತು ಈ ರೀತಿಯ ಕಾರ್ಯಕ್ರಮ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆಯುತ ಇರಬೇಕು ಎಂದರು. ಮಕ್ಕಳಿಗೆ ಪೋಕ್ಸೋ, ಬಾಲಕಾರ್ಮಿಕತೆ, ಮಕ್ಕಳ ಅತಿಯಾದ ಮೊಬೈಲ್ ಬಳಕೆ ಇನ್ನಿತರ ವಿಚಾರಗಳ ಕುರಿತು ಕಿರು ಚಿತ್ರ ಪ್ರದರ್ಶನ ಮಾಡಿದರು. ಮಣಿಪಾಲ ಪೊಲೀಸ್ ಠಾಣೆಯ ಮಕ್ಕಳ ಕಲ್ಯಾಣ ಪೊಲೀಸ್ ಅಧಿಕಾರಿ ನಾಗೇಶ್, ಪೋಕ್ಸೋ ಕಾಯಿದೆ, ಬಾಲ್ಯವಿವಾಹ ನಿಷೇಧ ಕಾಯಿದೆ, ಮಕ್ಕಳ ಭಿಕ್ಷಾಟನೆ, ಕುರಿತು ಮಕ್ಕಳಿಗೆ ಮಾಹಿತಿ ನೀಡುವುದರ ಜೊತೆಗೆ ಸಂವಾದ ನಡೆಸಿದರು. ಸಂಪನ್ಮೂಲ ವ್ಯಕ್ತಿಗಳಾದ ಹೆಚ್. ಜಯವಂತ ರಾವ್ ಇವರು ಕಿರು ಚಿತ್ರದ ಕುರಿತಾಗಿ ಮಕ್ಕಳಿಗೆ ಚುಟುಕಾಗಿ ಮಾಹಿತಿ ನೀಡಿದರು.
80 ಬಡಗಬೆಟ್ಟು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ನಿರುಪಮಾ ಹೆಗ್ಡೆ, ಕಾರ್ಯದರ್ಶಿ ಶಕುಂತಲಾ, ನಾಗೇಶ್ ಮಕ್ಕಳ ಕಲ್ಯಾಣ ಪೊಲೀಸ್ ಅಧಿಕಾರಿ ಮಣಿಪಾಲ, ಸಿ.ಆರ್.ಪಿ ಶಾಲಾ ಶಿಕ್ಷಣ ಮತ್ತು ಸಾಕ್ಷರತ ಇಲಾಖೆ ಉಡುಪಿ ಪ್ರದೀಪ್, ಅಂಗನವಾಡಿ ಮೇಲ್ವಿಚಾರಕಿ ಶೋಭಾ ಶೆಟ್ಟಿ, ತಾಲೂಕು ಶಿಕ್ಷಣ ಸಂಪನ್ಮೂಲ ಕೇಂದ್ರ ಉಡುಪಿ ಸದಸ್ಯರಾದ ವಾಸು ಆಚಾರ್ ಮುಂತಾದವರು ಉಪಸ್ಥಿತರಿದ್ದರು. ಶಕುಂತಲಾ ಸ್ವಾಗತಿಸಿ, ಕೇಶವ್ ಕೋಟ್ಯಾನ್ ವಂದಿಸಿದರು. ಹೆಚ್ ಜಯವಂತ ರಾವ್ ಕಾರ್ಯಕ್ರಮ ನಿರೂಪಿಸಿದರು.