ಹೆಬ್ರಿ, ಜೂ. 24: ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ, ಹೆಬ್ರಿ ತಾಲೂಕು ಘಟಕ ಹಾಗೂ ಎಸ್.ಆರ್ ಸಮೂಹ ಶಿಕ್ಷಣ ಸಂಸ್ಥೆ ಹೆಬ್ರಿ ಇವರ ಸಹಯೋಗದೊಂದಿಗೆ ‘ಕನ್ನಡ ಡಿಂಡಿಮ’ ಸರಣಿ ಕಾರ್ಯಕ್ರಮದನ್ವಯ ಎಸ್.ಎಸ್.ಎಲ್.ಸಿ ಪಬ್ಲಿಕ್ ಮತ್ತು ಪದವಿಪೂರ್ವ ವಾರ್ಷಿಕ ಪರೀಕ್ಷೆಯಲ್ಲಿ ಪೂರ್ಣ ಅಂಕ ಪಡೆದ ವಿದ್ಯಾರ್ಥಿಗಳಿಗೆ ಅಭಿನಂದನೆ ಮತ್ತು ಉಪನ್ಯಾಸ ಕಾರ್ಯಕ್ರಮ ಶನಿವಾರ ಎಸ್.ಆರ್.ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ಹೆಬ್ರಿ ಘಟಕದ ಅಧ್ಯಕ್ಷರಾದ ಶ್ರೀನಿವಾಸ ಭಂಡಾರಿ ವಹಿಸಿದ್ದರು. ಕನ್ನಡ ಡಿಂಡಿಮ ಕಾರ್ಯಕ್ರಮವನ್ನು ಎಸ್.ಆರ್.ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಎಚ್. ನಾಗರಾಜ ಶೆಟ್ಟಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಕನ್ನಡದ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು. ಕಲಿಯಲು ಮಾಧ್ಯಮ ಮುಖ್ಯವಲ್ಲ ಕಲಿಯುವ ಮನಸ್ಸು ಮುಖ್ಯ. ಮಾತೃಭಾಷೆಯಲ್ಲಿ ಉತ್ತಮ ಪ್ರತಿಭೆ ತೋರ್ಪಡಿಸಲು ಸಾಧ್ಯ. ಅಂತಹ ಎಲ್ಲಾ ಪ್ರತಿಭೆಗಳು ಇಂತಹ ಕಾರ್ಯಕ್ರಮಗಳ ಮೂಲಕ ಅನಾವರಣಗೊಳ್ಳಬೇಕು ಎಂದರು.
ಕ.ಸಾ.ಪ ಉಡುಪಿ ಜಿಲ್ಲಾಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗ ಆಶಯ ನುಡಿಗಳನ್ನಾಡಿದರು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಪ್ರಭಾಕರ ಶೆಟ್ಟಿ ಕೊಂಡಳ್ಳಿ ಮಾತನಾಡಿ, ಬೇವಿನ ಮರ ನೆಟ್ಟು ಮಾವಿನ ಫಲ ಪಡೆಯಲು ಸಾಧ್ಯವಿಲ್ಲ. ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ. ಸಾಧಿಸುವ ಛಲ ಬೇಕು ಎಂದು ಡಿ.ವಿ.ಜಿಯವರ ಕಗ್ಗ ಮರುಳ ಮುನಿಯನ ಕಗ್ಗ ಮತ್ತು ದೃಷ್ಟಾಂತ ಕಥೆಗಳ ಹಿನ್ನೆಲೆಯಲ್ಲಿ ವಿವರಿಸಿದರು.
ವೇದಿಕೆಯಲ್ಲಿ ಎಸ್ ಆರ್ ಸಮೂಹ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಸಪ್ನಾ ಎನ್ ಶೆಟ್ಟಿ, ಕ.ಸಾ.ಪ ಉಡುಪಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಪಿ.ವಿ ಆನಂದ ಸಾಲಿಗ್ರಾಮ, ಕಾರ್ಕಳ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಪ್ರವೀಣ್ ಕುಮಾರ್, ರಾಜ್ಯ ಸರಕಾರಿ ನೌಕರರ ಸಂಘದ ಹೆಬ್ರಿ ತಾಲೂಕು ಅಧ್ಯಕ್ಷರಾದ ಹರೀಶ್ ಪೂಜಾರಿ, ಉಡುಪಿ ಜಿಲ್ಲಾ ಕ.ಸಾ.ಪ ಪದಾಧಿಕಾರಿ ನರಸಿಂಹಮೂರ್ತಿ ಉಪಸ್ಥಿತರಿದ್ದರು.
ಎಸ್ ಆರ್ ಸಮೂಹ ಶಿಕ್ಷಣ ಸಂಸ್ಥೆಯ ಕನ್ನಡ ಉಪನ್ಯಾಸಕರಾದ ದೀಪಕ್ ಎನ್ ಸ್ವಾಗತಿಸಿ, ಕ.ಸಾ.ಪ ಗೌರವ ಕಾರ್ಯದರ್ಶಿ ಡಾ. ಪ್ರವೀಣ ಕುಮಾರ್ ವಂದಿಸಿದರು. ಕ.ಸಾ.ಪ ಗೌರವ ಕಾರ್ಯದರ್ಶಿ ಮಂಜುನಾಥ ಕೆ ಶಿವಪುರ ಕಾರ್ಯಕ್ರಮ ನಿರೂಪಿಸಿದರು. ಎಸ್ ಆರ್ ಸಂಸ್ಥೆಯ ವಿದ್ಯಾರ್ಥಿನಿ ಹರ್ಷಿತಾ ಪ್ರಾರ್ಥನೆಗೈದರು.
ಎಸ್.ಎಸ್.ಎಲ್.ಸಿ ಮತ್ತು ಪದವಿಪೂರ್ವ ವಾರ್ಷಿಕ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ ಪೂರ್ಣ ಅಂಕ ಪಡೆದ ಇಪ್ಪತ್ತೈದು ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಕನ್ನಡ ಭಾಷಾ ಶಿಕ್ಷಕರು, ಹೆಬ್ರಿ ಕ.ಸಾ.ಪ ಪದಾಧಿಕಾರಿಗಳು, ಹೆಬ್ರಿ ತಾಲೂಕು ವ್ಯಾಪ್ತಿಯ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು, ಪೋಷಕರು ಹಾಗೂ ಎಸ್.ಆರ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಭಾಗವಹಿಸಿದರು.