ಉಡುಪಿ, ಜೂ. 24: ಸರಕಾರಿ ಪಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಉಡುಪಿ 2022-23ನೇ ಸಾಲಿನ ವಾರ್ಷಿಕೋತ್ಸವ ಅಮೃತ್ ಗಾರ್ಡನ್ ನಲ್ಲಿ ಆಯೋಜಿಸಲಾಯಿತು. ಮುಖ್ಯ ಅತಿಥಿಗಳಾಗಿ ಉಡುಪಿ ಶಾಸಕ ಯಶ್‌ಪಾಲ್ ಎ. ಸುವರ್ಣ, ಉಡುಪಿ ವಿಧಾನಸಭಾ ಕ್ಷೇತದ ನಿಕಟಪೂರ್ವ ಶಾಸಕರಾದ ಕೆ.ರಘುಪತಿ ಭಟ್, ಕಾಲೇಜು ಶಿಕ್ಷಣ ಇಲಾಖೆಯ ನಿವೃತ್ತ ಹೆಚ್ಚುವರಿ ನಿರ್ದೇಶಕರಾದ ರಾಜಶೇಖರ ಹೆಬ್ಬಾರ್ ಭಾಗವಹಿಸಿದ್ದರು. ಸರಕಾರಿ ಕಾಲೇಜುಗಳಲ್ಲಿ ಮೊದಲಿಗೆ ಸ್ನಾತಕೋತ್ತರ ಪದವಿ ಕೋರ್ಸ್ಗಳನ್ನು ಆರಂಭಿಸಿದ ಹೆಗ್ಗಳಿಕೆಯಿರುವ ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಇದುವರೆಗೆ ಒಟ್ಟು 48 ರ‍್ಯಾಂಕ್‌ಗಳನ್ನು ಗಳಿಸಿ ಫಲಿತಾಂಶದಲ್ಲಿ ಸರಕಾರಿ ಕಾಲೇಜುಗಳಲ್ಲಿ ಇಡೀ ರಾಜ್ಯದಲ್ಲೇ ಅತ್ಯುನ್ನತ ಸ್ಥಾನದಲ್ಲಿರುವುದು ನಮಗೆಲ್ಲಾ ಹೆಮ್ಮೆಯ ವಿಷಯ ಎನ್ನುತ್ತಾ 2021-22ನೇ ಸಾಲಿನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ರ‍್ಯಾಂಕ್ ಗಳಿಸಿದ ಕಾಲೇಜಿನ 9 ವಿದ್ಯಾರ್ಥಿಗಳನ್ನು ಸನ್ಮಾನಿಸಿದರು.
ಪದವಿ ವಿಭಾಗದಲ್ಲಿ ದಿವ್ಯಾ (ಬಿ.ಎಸ್.ಡಬ್ಲ್ಯೂ) ತೃತೀಯ ರ‍್ಯಾಂಕ್, ಸ್ನಾತಕೋತ್ತರ ವಿಭಾಗದಲ್ಲಿ ಪ್ರಕಾಶ್ ಕೆ. (ಎಂ.ಎ. ಇತಿಹಾಸ) ಪ್ರಥಮ ರ‍್ಯಾಂಕ್, ರಕ್ಷಿತಾ (ಎಂ.ಎ. ಸಮಾಜಶಾಸ್ತ್ರ) ಪ್ರಥಮ ರ‍್ಯಾಂಕ್, ಕೊಲೀನ್ ಆಂಟೋನಿತಾ ಲೋಬೋ (ಎಂ.ಎ. ಇಂಗ್ಲೀಷ್) ಪ್ರಥಮ ರ‍್ಯಾಂಕ್, ರೈನಾ ಡಿಸೋಜಾ (ಎಂ.ಕಾಂ) ದ್ವಿತೀಯ ರ‍್ಯಾಂಕ್, ನವ್ಯಾ ಅಂಚನ್ (ಎಂ.ಕಾಂ) ಆರನೇ ರ‍್ಯಾಂಕ್, ರೀಮಾ ಸೀಮಾ (ಎಂ.ಕಾಂ) ಎಂಟನೇ ರ‍್ಯಾಂಕ್, ಅನುಷಾ ಶಂಕರ್ ನಾಯ್ಕ (ಎಂ.ಕಾಂ) ಬಂಬತ್ತನೇ ರ‍್ಯಾಂಕ್, ಪ್ರಣೀತಾ (ಎಂ.ಕಾಂ) ಹತ್ತನೇ ರ‍್ಯಾಂಕ್ ಪಡೆದಿದ್ದು ರ‍್ಯಾಂಕ್ ವಿಜೇತರನ್ನು ಕಾಲೇಜಿನ ಪರವಾಗಿ ಸನ್ಮಾನಿಸಲಾಯಿತು.
ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಸುರೇಶ್ ರೈ ಕೆ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ರಾಧಾಕೃಷ್ಣ, ಡಾ. ದುಗ್ಗಪ್ಪ ಕಜೆಕಾರ್, ಸಾಂಸ್ಕೃತಿಕ ಸಂಚಾಲಕರಾದ ಡಾ.ರಾಘವ ನಾಯ್ಕ್, ಕೃಷ್ಣ ಸಾಸ್ತಾನ, ಐಕ್ಯುಎಸಿ ಸಂಚಾಲಕರಾದ ಡಾ. ಮೇವಿ ಮಿರಾಂದ, ವಿದ್ಯಾರ್ಥಿ ನಾಯಕರಾದ ಯಮುನಪ್ಪ ಮತ್ತು ಸ್ಪಂದನ ಮಯ್ಯ, ಶಿಕ್ಷಕ-ರಕ್ಷಕ ಸಂಘದ ಸುಜಾತ, ದಯಾನಂದ ಶೆಟ್ಟಿ ಉಪಸ್ಥಿತರಿದ್ದರು. ಕನ್ನಡ ಸಹ ಪ್ರಾಧ್ಯಾಪಕರಾದ ವೆಂಕಟೇಶ್ ಹೆಚ್.ಕೆ ಕಾರ್ಯಕ್ರಮ ನಿರೂಪಿಸಿದರು.