ಕೋಟ: ಡಾ. ಶಿವರಾಮ ಕಾರಂತ ಪ್ರತಿಷ್ಠಾನ (ರಿ.) ಕೋಟ, ಕೋಟತಟ್ಟು ಗ್ರಾಮ ಪಂಚಾಯತ್ ಕೊಡಮಾಡುವ ರಂಗಕರ್ಮಿ ಬಹುಮುಖ ಪ್ರತಿಭೆ ದಿ. ಮಂಜುನಾಥ ಕೋಟ ಅವರ ಸ್ಮರಣಾರ್ಥ ಕೊಡಮಾಡುವ ತಿಂಗಳ ದತ್ತಿ ಪುರಸ್ಕಾರಕ್ಕೆ ರಂಗಕರ್ಮಿ ಬಿ.ಎಸ್ ರಾಮ್ ಶೆಟ್ಟಿ ಹಾರಾಡಿ ಅವರು ಆಯ್ಕೆಯಾಗಿದ್ದಾರೆ.
ಬಿ ಎಸ್ ರಾಮ್ ಶೆಟ್ಟಿ ಅವರು ವೃತ್ತಿಯಲ್ಲಿ ವಿದ್ಯಾ ಮಂದಿರ ಹಾರಾಡಿಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದು, ಭೂಮಿಕಾ(ರಿ.) ಎನ್ನುವ ರಂಗ ತಂಡ ಕಟ್ಟಿಕೊಂಡು ಹಲವಾರು ಯುವ ಪ್ರತಿಭೆಗಳನ್ನು ರಂಗಕ್ಕೆ ಪರಿಚಯಿಸಿದ್ದಾರೆ. ಕಳೆದ 28 ವರ್ಷಗಳಿಂದ ರಂಗಭೂಮಿಯಲ್ಲಿ ತೊಡಗಿಸಿಕೊಂಡಿರುವ ಇವರು ಹಲವಾರು ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ನಾಟಕ ನಿರ್ದೇಶಿಸಿದ್ದಾರೆ.
ಕನ್ನಡದ ಖ್ಯಾತ ನಾಟಕಗಾರರ ನಾಟಕಗಳನ್ನು ರಂಗಕ್ಕೆ ತಂದಿದ್ದಾರೆ. ಸಂಗ್ಯಾ ಬಾಳ್ಯಾ, ಮೃಗತ್ರಷ್ಣ, ಅಗ್ನಿಲೋಕ, ನಮ್ಮ ನಿಮ್ಮೊಳಗೊಬ್ಬ, ಅರಗಿನ ಬೆಟ್ಟ, ಮಾರನಾಯಕ, ಹುಲಿಯ ನೆರಳು, ಕತ್ಯಾಯಿನಿ, ವ್ರತ್ತದ ವ್ರತ್ತಂತ, ಗಿಡ ಮರ ಬಳ್ಳಿ, ಸೂರ್ಯಸ್ತದಿಂದ ಸೂರ್ಯೋದಯದವರೆಗೆ, ಆರದಿರಲಿ ಬೆಳಕು, ಅಲಿಬಾಬಾ ಮತ್ತು 40 ಕಳ್ಳರು, ಸೂರ್ಯ ಬಂದ, ಮಹಾಮಾಯಿ, ಶಿವಭೂತಿ, ಅವಿವೇಕಿ ರಾಜ ಮತ್ತು ಅರೆಹುಚ್ಚ ಮಂತ್ರಿ, ಸುಣ್ಣದ ಸುತ್ತ, ಹೀಗೆ ಹಲವಾರು ನಾಟಕಗಳನ್ನು ನಿರ್ದೇಶಿಸಿದ್ದಾರೆ.
3 ಬಾರಿ ರಾಷ್ಟ್ರಮಟ್ಟದ ನಾಟಕ ಸ್ಪರ್ಧೆಯಲ್ಲಿ ಶ್ರೇಷ್ಠ ನಿರ್ದೇಶಕ, 5 ಬಾರಿ ರಾಜ್ಯ ಮಟ್ಟದ ನಾಟಕ ಸ್ಪರ್ಧೆಯಲ್ಲಿ ಶ್ರೇಷ್ಠ ನಿರ್ದೇಶಕ, ಶ್ರೇಷ್ಠ ಬೆಳಕು, ರಂಗ ಪರಿಕರದಲ್ಲೂ ಬಹುಮಾನಗಳು ಲಭಿಸಿದೆ. ಅಲ್ಲದೇ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಸ್ವರ್ಣಕಮಲ ಕುವೆಂಪು ಪ್ರಶಸ್ತಿ, ಸಿ ಜಿ ಕೆ ರಂಗ ಪುರಸ್ಕಾರ, ರಂಗ ಸವ್ಯಸಾಚಿ ಪ್ರಶಸ್ತಿ ಕೂಡಾ ಲಭಿಸಿದೆ.
ಕೋಟದ ಡಾ. ಶಿವರಾಮ ಕಾರಂತ ಥೀಮ್ ಪಾರ್ಕ್ನಲ್ಲಿ 14 ರಂದು ಸಂಜೆ 6 ಗಂಟೆಗೆ ನಡೆಯುವ ದಿ. ಮಂಜುನಾಥ್ ಕೋಟ ದತ್ತಿ ಪುರಸ್ಕಾರ, ಯಕ್ಷಗಾನ ವಿಚಾರ ಗೋಷ್ಠಿ ಹಾಗೂ ಯಕ್ಷ ‘ಗಾನ’ ವೈಭವ ಕಾರ್ಯಕ್ರಮ ಒಡ್ಡೋಲಗ- 2022(ನೆನಪಿನ ಕಾವಳ) ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದೆಂದು ಕಾರಂತ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಆನಂದ್ ಸಿ ಕುಂದರ್, ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಅಶ್ವಿನಿ ದಿನೇಶ್, ಕಾರಂತ ಥೀಮ್ ಪಾರ್ಕ್ ವಿಶೇಷ ಕರ್ತವ್ಯಾಧಿಕಾರಿ ಪೂರ್ಣಿಮಾ, ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.