ಕೋಟ, ಜೂನ್ 18: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಶಿವರಾಮ ಕಾರಂತರ ಜೀವನವೇ ನಮಗೊಂದು ಪಾಠವಿದ್ದಂತೆ. ಅವರ ಬದುಕು ಬರಹವನ್ನು ಮುಂದಿನ ಜನಾಂಗಕ್ಕೆ ತಲುಪಿಸಲು ಕಾರಂತ ಥೀಮ್ ಪಾರ್ಕ್ ಸಹಕಾರಿ. ಮಕ್ಕಳಿಗಾಗಿ ಇಲ್ಲಿ ನಡೆಸುವ ಚಟುವಟಿಕೆಗಳು ಅನುಕರಣೀಯ ಎಂದು ಕಾರವಾರ ಸಹಾಯಕ ಆಯುಕ್ತರಾದ ಜಯಲಕ್ಷ್ಮೀ ರಾಯಕೋಡ್ ಹೇಳಿದರು. ಅವರು ಕೋಟದ ಡಾ. ಶಿವರಾಮ ಕಾರಂತ ಥೀಮ್ ಪಾರ್ಕ್ ಗೆ ಭೇಟಿ ನೀಡಿ ಕಾರಂತರ ಕಂಚಿನ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಗ್ರಂಥಾಲಯ, ಅಂಗನವಾಡಿ, ಆರ್ಟ್ ಗ್ಯಾಲರಿ, ಕಿರು ಸಭಾಂಗಣ, ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಭಟ್ಕಳ ಸಹಾಯಕ ಆಯುಕ್ತರಾದ ಮಮತಾ ದೇವಿ ಜಿ.ಎಸ್ ಮಾತನಾಡಿ, ಸಾಹಿತ್ಯ ಕ್ಷೇತ್ರಕ್ಕೆ ಕಾರಂತರ ಕೊಡುಗೆ ಅಪಾರವಾದುದು. ಅವರ ನುಡಿಮುತ್ತುಗಳು ಪ್ರಸ್ತುತ ಸನ್ನಿವೇಶಕ್ಕೆ ಹತ್ತಿರವಾಗಿದೆ, ಥೀಮ್ ಪಾರ್ಕ್ ಇನ್ನಷ್ಟು ಪ್ರಸಿದ್ಧಿ ಪಡೆಯಲಿ ಎಂದರು. ಕಾರಂತ ಪ್ರತಿಷ್ಠಾನದ ಟ್ರಸ್ಟಿ ಸುಬ್ರಾಯ ಆಚಾರ್ಯ, ಕುಂದಾಪುರ ತಾಲ್ಲೂಕು ಮಾಜಿ ಪಂಚಾಯತ್ ಸದಸ್ಯ ಕರಣ್ ಪೂಜಾರಿ, ಕೋಟ ಶ್ರೀನಿವಾಸ ಪೂಜಾರಿ ಅವರ ಆಪ್ತ ಸಹಾಯಕರಾದ ಹರೀಶ್ ಕುಮಾರ್ ಶೆಟ್ಟಿ, ವಿವೇಕ್ ಅಮೀನ್, ಕಾಪು ಶಾಸಕರ ಆಪ್ತ ಸಹಾಯಕ ಗಿರೀಶ್ ಕುಮಾರ್ ಶೆಟ್ಟಿ, ಥೀಮ್ ಪಾರ್ಕ್ ಸಿಬ್ಬಂದಿಗಳು ಉಪಸ್ಥಿತರಿದ್ದರು.