ಉಡುಪಿ: ಪ್ರತಿಯೊಬ್ಬ ಮನುಷ್ಯನು ತನ್ನಲ್ಲಿರುವ ಶಕ್ತಿಯ ಅರಿವಾದಾಗ ಮಾತ್ರ ಅದ್ಭುತವನ್ನು ಸೃಷ್ಟಿಸಬಹುದು. ನಮ್ಮ ಯುವಜನರಿಗೆ ತಮ್ಮಲ್ಲಿರುವ ಶಕ್ತಿಯ ಅರಿವು ಮೂಡಿಸಲು ವಿವೇಕಾನಂದರ ಚಿಂತನೆಗಳು ಸಹಕಾರಿ ಎಂದು ಉಡುಪಿ ರೆಡ್‌ಕ್ರಾಸ್ ಸಂಸ್ಥೆಯ ಸಭಾಪತಿ ಬಸ್ರೂರು ರಾಜೀವ್ ಶೆಟ್ಟಿ ತಿಳಿಸಿದರು.
ಅವರು ಬುಧವಾರ ತೆಂಕನಿಡಿಯೂರಿನ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸಭಾಂಗಣದಲ್ಲಿ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಘಟಕ ಉಡುಪಿ ಹಾಗೂ ತೆಂಕನಿಡಿಯೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಎನ್.ಎಸ್.ಎಸ್ ಮತ್ತು ರೆಡ್‌ಕ್ರಾಸ್ ಘಟಕ ಇವರ ಸಂಯುಕ್ತ ಆಶ್ರಯದಲ್ಲಿ ಸ್ವಾಮಿ ವಿವೇಕಾನಂದರ ಜಯಂತಿ ಮತ್ತು ಪ್ರಥಮ ಚಿಕಿತ್ಸೆ ಅರಿವು ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ವಿವೇಕಾನಂದರ ಬೋಧನೆಗಳು ಬಹಳಷ್ಟು ಯುವ ಜನಾಂಗಕ್ಕೆ ಸ್ಫೂರ್ತಿದಾಯಕ. ಪ್ರಸ್ತುತ ನಮ್ಮ ದೇಶದಲ್ಲಿ ಶೇ. 62.25 ರಷ್ಟು ಯುವ ಜನರು ಇದ್ದಾರೆ. ವಿವೇಕಾನಂದರ ಆದರ್ಶ ಮತ್ತು ತತ್ವಗಳನ್ನು ಪಾಲಿಸುವುದರೊಂದಿಗೆ ಸದೃಢರಾಗಿ ಭವ್ಯ ಭಾರತವನ್ನು ನಿರ್ಮಾಣ ಮಾಡಲು ಮುಂದಾಗಬೇಕು ಎಂದರು.
ಯುವ ಜನರು ದೈನಂದಿನ ಕಾರ್ಯಗಳಲ್ಲಿ ಒಳಿತುಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಉತ್ತಮ ಆಚಾರ-ವಿಚಾರಗಳನ್ನು ಪಾಲಿಸಿದ್ದಲ್ಲಿ ತಾವು ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಲು ಸಾಧ್ಯ ಎಂದರು.
ಅಪಘಾತ ಅಥವಾ ಅವಘಡಗಳು ಸಂಭವಿಸಿದಾಗ ನೊಂದವರಿಗೆ ತತ್‌ಕ್ಷಣದಲ್ಲಿ ಪ್ರಥಮ ಚಿಕಿತ್ಸೆಯನ್ನು ನೀಡುವುದರಿಂದ ಅವರುಗಳನ್ನು ಪ್ರಾಣಾಪಾಯದಿಂದ ಕಾಪಾಡುವುದು ಸೇರಿದಂತೆ ಶಾಶ್ವತ ಅಂಗವಿಕಲತೆಯಿಂದ ದೂರ ಇರುವಂತೆ ಮಾಡಲು ಸಾಧ್ಯ. ಪ್ರಥಮ ಚಿಕಿತ್ಸೆ ನೀಡುವ ಬಗ್ಗೆ ಪ್ರತಿಯೊಬ್ಬರೂ ಮಾಹಿತಿ ಹೊಂದುವುದು ಅತ್ಯವಶ್ಯಕ ಎಂದರು.
ಪ್ರಾಚಾರ್ಯರಾದ ಡಾ. ಗಣನಾಥ್ ಶೆಟ್ಟಿ ಎಕ್ಕಾರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಯುವಜನರ ಬದುಕಿಗೆ ಕ್ರಾಂತಿಕಾರಿ ಶಕ್ತಿಯನ್ನು ತುಂಬುವ ಕೆಲಸವನ್ನು ವಿವೇಕಾನಂದರು ಮಾಡಿದರು.
ನಮ್ಮ ದೇಶದ ಮಹನೀಯರು, ದಾರ್ಶನಿಕರ ಜೀವನಶೈಲಿ ಹಾಗೂ ಅವರ ಬೋಧನೆಗಳ ಪುಸ್ತಕಗಳನ್ನು ಯುವಜನರು ತಪ್ಪದೇ ಓದಿ ತಮ್ಮ ಜೀವನದಲ್ಲಿ ಅವರ ತತ್ವಗಳನ್ನು ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯು ವಿಶ್ವದಾದ್ಯಂತ ಕ್ರಿಯಾಶೀಲವಾಗಿ ತನ್ನ ಚಟುವಟಿಕೆಯನ್ನು ನಡೆಸುತ್ತಿದೆ. ಯುದ್ಧ ಸೇರಿದಂತೆ ಇನ್ನಿತರ ಸಂಕಷ್ಟ ಕಾಲದಲ್ಲಿ ಸೇವೆಯನ್ನು ಮಾಡುವುದರೊಂದಿಗೆ ಲಕ್ಷಾಂತರ ಜನರ ಜೀವವನ್ನು ಉಳಿಸಿದೆ. ಈ ಸಂಸ್ಥೆಯ ಕೊಡುಗೆ ಅಪಾರವಾದದ್ದು ಎಂದರು.
ಈ ಸಂದರ್ಭದಲ್ಲಿ ಕ್ರೀಡಾಪಟು ಅಭಿನ್ ಮತ್ತು ರಂಗಭೂಮಿ ಕಲಾವಿದೆ ಭಾವನಾರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಡಾ. ಸುರೇಶ್ ಶೆಣೈ ಮತ್ತು ಡಾ. ಕೀರ್ತಿ ಪಾಲನ್ ರವರು ಪ್ರಥಮ ಚಿಕಿತ್ಸೆ ನೀಡುವ ಬಗ್ಗೆ ಪ್ರಾಯೋಗಿಕವಾಗಿ ಮಾಹಿತಿ ನೀಡಿದರು.
ರೆಡ್‌ಕ್ರಾಸ್ ಸಂಸ್ಥೆ ಉಡುಪಿ ಜಿಲ್ಲಾ ಘಟಕದ ಖಜಾಂಜಿ ಚಂದ್ರಶೇಖರ್ ಹಾಗೂ ಪದಾಧಿಕಾರಿಗಳು, ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ರೆಡ್‌ಕ್ರಾಸ್ ಸಂಚಾಲಕ ಡಾ. ಉದಯ ಶೆಟ್ಟಿ ಕೆ. ಸ್ವಾಗತಿಸಿ ನಿರೂಪಿಸಿದರು. ರೆಡ್‌ಕ್ರಾಸ್ ಘಟಕದ ಗೌರವ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಕೆ. ವಂದಿಸಿದರು.