ಗಂಗೊಳ್ಳಿ, ಜೂನ್ 3: ವಿದ್ಯಾರ್ಥಿಗಳು ಪಠ್ಯದ ಕಲಿಕೆಯ ಜೊತೆ ಜೊತೆಗೆ ತಮ್ಮ ಸರ್ವಾಂಗೀಣ ವ್ಯಕ್ತಿತ್ವದ ಅಭಿವೃದ್ಧಿಯ ಕಡೆಗೂ ಗಮನ ಹರಿಸಬೇಕು. ಉತ್ತಮ ವ್ಯಕ್ತಿತ್ವದಿಂದ ಯಶಸ್ಸು ಕಾಣಲು ಸಾಧ್ಯ ಎಂದು ಗಂಗೊಳ್ಳಿಯ ಜಿ.ಎಸ್.ವಿ.ಎಸ್ ಅಸೋಷಿಯೆಷನ್ ಅಧ್ಯಕ್ಷ ಡಾ. ಕಾಶಿನಾಥ್ ಪೈ ಅಭಿಪ್ರಾಯಪಟ್ಟರು. ಅವರು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಪ್ರಥಮ ಪಿಯುಸಿ ತರಗತಿಗಳ ಆರಂಭೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.
ಕಾಲೇಜಿನ ಸಂಸ್ಕೃತ ಉಪನ್ಯಾಸಕ ವೆಂಕಟೇಶಮೂರ್ತಿ ಎನ್. ಸಿ ಪಠ್ಯೇತರ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು. ದೈಹಿಕ ಶಿಕ್ಷಣ ಉಪನ್ಯಾಸಕರಾದ ನಾಗರಾಜ ಶೆಟ್ಟಿ ಕಾಲೇಜಿನ ಶಿಸ್ತು ನೀತಿ ನಿಯಮಗಳ ಕುರಿತು ಮಾತನಾಡಿದರು. ಕಾಲೇಜು ಕಛೇರಿಯ ದ್ವಿತೀಯ ದರ್ಜೆ ಸಹಾಯಕಿ ಪ್ರಮೋದ ಪೈ ಎಮ್. ಜಿ., ಕಛೇರಿ ಸೌಲಭ್ಯಗಳು ಮತ್ತು ವಿದ್ಯಾರ್ಥಿವೇತನದ ಮಾಹಿತಿ ನೀಡಿದರು.
ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಕವಿತಾ ಎಂ ಸಿ ಅಧ್ಯಕ್ಷತೆ ವಹಿಸಿದ್ದರು. ವಾಣಿಜ್ಯಶಾಸ್ತ್ರ ಉಪನ್ಯಾಸಕ ರಾಘವೇಂದ್ರ ಭಟ್ ಸಿಬ್ಬಂದಿ ವರ್ಗದವರನ್ನು ಪರಿಚಯಿಸಿದರು. ವಿದ್ಯಾರ್ಥಿ ಪ್ರತಿನಿಧಿಗಳಾಗಿ ಸನ್ನಿಧಿ ಮತ್ತು ಫರಾನ್ ಉಪಸ್ಥಿತರಿದ್ದರು. ಹಿಂದಿ ಉಪನ್ಯಾಸಕ ನಾರಾಯಣ ಈ ನಾಯ್ಕ್ ಪ್ರಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಇತಿಹಾಸ ಉಪನ್ಯಾಸಕ ಭಾಸ್ಕರ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಆಂಗ್ಲ ಭಾಷೆ ಉಪನ್ಯಾಸಕಿ ಸುಪ್ರೀತ ಆಚಾರ್ಯ ವಂದಿಸಿದರು.