ಉಡುಪಿ, ಜೂನ್ 2: ಕಾರ್ಕಳದ ಸರಕಾರಿ ಪ್ರೌಢಶಾಲೆಯಲ್ಲಿ ಖ್ಯಾತ ಉದ್ಯಮ ಸಂಸ್ಥೆಯಾದ ಬೋಳಾಸ್ ಆಗ್ರೋ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಸಿ.ಎಸ್.ಆರ್ ನಿಧಿಯಿಂದ ಮೂರೂವರೆ ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ನೂತನ ಕಂಪ್ಯೂಟರ್ ಲ್ಯಾಬನ್ನು ಉದ್ಘಾಟಿಸಲಾಯಿತು. ಬೋಳಾಸ್ ಉದ್ಯಮ ಸಂಸ್ಥೆಯ ಆಡಳಿತ ನಿರ್ದೇಶಕರಾದ ಬೋಳ ದಾಮೋದರ್ ಕಾಮತ್ ಅವರು ಈ ಕಂಪ್ಯೂಟರ್ ಲ್ಯಾಬನ್ನು ಉದ್ಘಾಟನೆ ಮಾಡಿ ವಿದ್ಯಾರ್ಥಿಗಳು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಮತ್ತು ಸರಕಾರಿ ಶಾಲೆಯ ವಿದ್ಯಾರ್ಥಿಗಳು ಜಾಗತಿಕ ಸವಾಲುಗಳನ್ನು ಎದುರಿಸಲು ಸಿದ್ಧವಾಗಬೇಕು ಎಂದು ಕರೆ ನೀಡಿದರು.
ಶಾಲೆಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅವರು ಪ್ರತಿಭಾ ಪುರಸ್ಕಾರ ನೆರವೇರಿಸಿ ತಮ್ಮ ಚೆರಿಟೆಬಲ್ ಟ್ರಸ್ಟ್ ವತಿಯಿಂದ ಕೂಡ ವಿದ್ಯಾರ್ಥಿವೇತನ ನಿಧಿಯನ್ನು ನೀಡುವುದಾಗಿ ಭರವಸೆ ನೀಡಿದರು. ಉದ್ಯಮಿ ನವೀನಚಂದ್ರ ಶೆಟ್ಟಿ ಅವರು ಎಸೆಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿಗೆ ತಮ್ಮ ವತಿಯಿಂದ ನಗದು ಬಹುಮಾನ ವಿತರಣೆ ಮಾಡಿದರು. ಉದ್ಯಮಿಗಳಾದ ನವೀನ್ ದೇವಾಡಿಗ, ಪ್ರೇಮಾನಂದ ಪೈ, ಕಮಲಾಕ್ಷ ಮೊಯ್ಲಿ, ಪುರಸಭಾ ಸದಸ್ಯರಾದ ಪ್ರಭಾ ಕಿಶೋರ್ ಅವರು ಕಾರ್ಯಕ್ರಮದಲ್ಲಿ ಅತಿಥಿಗಳಾಗಿದ್ದು ಮಕ್ಕಳಿಗೆ ವಿವಿಧ ಕೊಡುಗೆಗಳನ್ನು ಹಸ್ತಾಂತರಿಸಿದರು.
ಶಾಲೆಯ ಪರವಾಗಿ ಬೋಳ ದಾಮೋದರ್ ಕಾಮತ್ ಅವರನ್ನು ಸನ್ಮಾನಿಸಲಾಯಿತು. ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಇಂದಿರಾ ಸ್ವಾಗತಿಸಿರು. ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಮೋಹನ್ ಕಲಂಬಾಡಿ ಮತ್ತು ಸಮೂಹ ಸಂಪನ್ಮೂಲ ವ್ಯಕ್ತಿ ಸಂತೋಷ್ ಕುಮಾರ್ ಶೆಟ್ಟಿ ಶುಭ ಹಾರೈಸಿದರು. ಶಿಕ್ಷಕಿ ಶಾಂತಲಾ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಸುಮಾಮಣಿ ಪ್ರಸ್ತಾವನೆಗೈದರು. ಶಿಕ್ಷಕ ಅಶೋಕ್ ಕುಮಾರ್ ವಂದಿಸಿದರು.