ಮುದೂರು, ಮೇ 31: ಗ್ರಾಮೀಣಾಭಿವೃದ್ಧಿಯ ಪರಿಕಲ್ಪನೆಯನ್ನು ಸಾಕಾರಗೊಳಿಸುವಲ್ಲಿ ಗ್ರಾಮೀಣ ಅಧ್ಯಯನ ಶಿಬಿರಗಳು ಪ್ರಮುಖ ಪಾತ್ರ ನಿರ್ವಹಿಸುತ್ತದೆ ಎಂದು ಜಡ್ಕಲ್ ಗ್ರಾಮ ಪಂಚಾಯತ್ ಅಧ್ಯಕ್ಷೆ ವನಜಾಕ್ಷಿ ಶೆಟ್ಟಿ ಹೇಳಿದರು. ಬೈಂದೂರು ತಾಲೂಕಿನ ಜಡ್ಕಲ್ ಗ್ರಾಮದ ಮುದೂರಿನ ಉದಯನಗರದ ಕೊರಗ ಸಮುದಾಯ ಭವನದಲ್ಲಿ ಡಾ. ಪಿ. ದಯಾನಂದ ಪೈ- ಪಿ. ಸತೀಶ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ರಥಬೀದಿ ಮಂಗಳೂರು ಸಮಾಜಕಾರ್ಯ ವಿಭಾಗದ ಪ್ರಥಮ ಎಂ.ಎಸ್.ಡಬ್ಲ್ಯೂ ವಿದ್ಯಾರ್ಥಿಗಳ ಗ್ರಾಮೀಣ ಅಧ್ಯಯನ ಶಿಬಿರದ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡುತ್ತಿದ್ದರು. ವಿದ್ಯಾರ್ಥಿಗಳು ಮೂಡಿಸುವ ಅರಿವಿನಿಂದ ಸಾಮಾಜಿಕ ಬದಲಾವಣೆಯಾದರೆ ದೇಶ ಬಲಿಷ್ಠವಾಗುತ್ತದೆ ಎಂದರು. ಗ್ರಾಮೀಣ ಅಧ್ಯಯನ ಶಿಬಿರವನ್ನು ಪರಿಣಾಮಕಾರಿಯನ್ನಾಗಿಸಲು ಗ್ರಾಮಸ್ಥರ ಪಾಲ್ಗೊಳ್ಳುವಿಕೆ ಅತಿಮುಖ್ಯ ಎಂದರು.
ಗ್ರಾಮ ಪಂಚಾಯತ್ ಉಪಾಧ್ಯಕ್ಷ ಲಕ್ಷ್ಮಣ ಶೆಟ್ಟಿ ಮಾತನಾಡುತ್ತಾ, ಇಂತಹ ಶಿಬಿರಗಳು ಸಮಾಜ ಸುಧಾರಣೆಗೆ ಇಂಧನ ಒದಗಿಸುವುದರ ಜತೆಗೆ ಶಿಬಿರಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೂ ಕಾರಣವಾಗುತ್ತದೆ ಎಂದರು. ಚಿತ್ರಕೂಟ ಆಯುರ್ವೇದ ಚಿತ್ತೂರು ಸ್ಥಾಪಕರಾದ ಡಾ. ರಾಜೇಶ್ ಬಾಯರಿ ಮಾತನಾಡುತ್ತಾ, ಗ್ರಾಮೀಣ ಅಧ್ಯಯನ ಶಿಬಿರಗಳಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿ ಗ್ರಾಮಸ್ಥರಲ್ಲಿ ವಿವಿಧ ವಿಚಾರಗಳ ಬಗ್ಗೆ ಪರಿಣಾಮಕಾರಿಯಾದ ಅರಿವನ್ನು ಮೂಡಿಸಿದರೆ ಗ್ರಾಮೀಣಾಭಿವೃದ್ಧಿಯ ವೇಗ ಹೆಚ್ಚುತ್ತದೆ.
ಯುವಜನರಿಗೆ ತಮ್ಮ ನೈಜ ಸಾಮರ್ಥ್ಯದ ಅರಿವಾಗಬೇಕಾದರೆ ಶಿಬಿರ ಜೀವನ ಅವಶ್ಯಕವಾಗಿದೆ. ಸುಸಂಸ್ಕೃತ ಸಮಾಜ ನಿರ್ಮಾಣವಾಗುವಲ್ಲಿ ಇಂತಹ ಶಿಬಿರಗಳು ಹೆಚ್ಚೆಚ್ಚು ನಡೆಯಬೇಕು ಎಂದರು. ಜಾಗೃತಿ ಕರಪತ್ರಗಳನ್ನು ಇದೇ ಸಂದರ್ಭದಲ್ಲಿ ವೇದಿಕೆಯಲ್ಲಿದ್ದ ಗಣ್ಯರು ಬಿಡುಗಡೆಗೊಳಿಸಿದರು.
ಸ್ನಾತಕೋತ್ತರ ಸಮಾಜಕಾರ್ಯ ವಿಭಾಗದ ಸಂಯೋಜಕಿ ಅರುಣಾ ಕುಮಾರಿ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಶಿಬಿರದ ಯೋಜನೆಗಳ ಕುರಿತು ವಿಸ್ತ್ರತವಾದ ಮಾಹಿತಿಯನ್ನು ನೀಡಿದರು. ಗ್ರಾಮ ಪಂಚಾಯತ್ ಸದಸ್ಯರುಗಳಾದ ವಿದ್ಯಾವತಿ, ನಾಗೇಶ್, ಸುನೀತ, ಪಾರ್ವತಿ, ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ಸುಶೀಲ ನಾಡ, ಮುದೂರು ಕೊರಗ ಅಭಿವೃದ್ಧಿ ಸಂಘದ ಅಧ್ಯಕ್ಷೆ ಗಿರಿಜಾ, ಸಮಾಜಕಾರ್ಯ ಉಪನ್ಯಾಸಕರಾದ ಫಿರ್ದೋಸ್ ತೋನ್ಸೆ, ಮೆಹರೋಸ್ ತೋನ್ಸೆ, ಗಣೇಶ್, ಗ್ರಾಮಸ್ಥರು, ಸಮಾಜಕಾರ್ಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಉಪನ್ಯಾಸಕ ಗಣೇಶ್ ಪ್ರಸಾದ್ ಜಿ. ನಾಯಕ್ ಸ್ವಾಗತಿಸಿ, ಪ್ರಥಮ ಎಂ.ಎಸ್.ಡಬ್ಲ್ಯೂ ವಿದ್ಯಾರ್ಥಿಗಳಾದ ಶ್ರೇಯಾ ವಂದಿಸಿ, ನಿತೇಶ್ ಕಾರ್ಯಕ್ರಮ ನಿರೂಪಿಸಿದರು.