ಕಾರ್ಕಳ, ಮೇ 31: ದಿವ್ಯವಾದ ಸನ್ನಿಧಾನದಿಂದ ಯಶಸ್ವಿಯಾಗಬಹುದು. ಸಾಧನೆ ಮಾಡುತ್ತಾ ಎತ್ತರಕ್ಕೆ ಏರಬಹುದು. ಇತರ ಪ್ರಾಣಿಗಳಿಗೆ ಬುದ್ದಿಶಕ್ತಿ ಸೀಮಿತವಾಗಿದ್ದರೆ, ಭಗವಂತನು ಮನುಷ್ಯನಿಗೆ ಕೊಟ್ಟ ಅಸಾಧಾರಣ ಶಕ್ತಿಯೆಂದರೆ ಕ್ರೀಯಾಶೀಲವಾಗಿರುವ ಕೈಬೆರಳುಗಳು ಮತ್ತು ಅಪೂರ್ವವಾಗಿರುವ ಬುದ್ದಿ ಶಕ್ತಿ. ವಿದ್ಯೆಯ ಜೊತೆಗೆ ಬುದ್ದಿ ಇದ್ದರೆ ಪ್ರಪಂಚಕ್ಕೆ ಪೂರಕವಾಗುತ್ತದೆ. ಬೌದ್ಧಿಕ ಶಕ್ತಿಯನ್ನು, ಮನಃಶಕ್ತಿಯನ್ನು ಸತ್ಕರ್ಮದಿಂದ ಸದ್ವಿನಿಯೋಗ ಮಾಡಿದಾಗ ಶ್ರೇಷ್ಠವಾಗಿರುವುದನ್ನು ಪ್ರಪಂಚಕ್ಕೆ ನೀಡಬಹುದು ಎಂದು ಕುಕ್ಕೆ ಸುಬ್ರಹ್ಮಣ್ಯ ಮಠಾಧಿಪತಿ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮಿಜಿ ಹೇಳಿದರು. ಅವರು ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿರುವ ಶ್ರೀ ಮಹಾಗಣಪತಿ ದೇವಸ್ಥಾನದ ಹತ್ತನೇ ಪ್ರತಿಷ್ಠಾ ಮಹೋತ್ಸವ ಹಾಗೂ ಜ್ಞಾನಸುಧಾ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟನೆ ಮಾಡಿ ಆಶೀರ್ವಚನ ನೀಡಿದರು.
ವಿದ್ಯಾರ್ಥಿ ನಿಂತ ನೀರಾಗಿರದೆ ಬಹುಮುಖವಾಗಿ ಬೆಳೆಯಬೇಕು ಎಂಬ ಆಶಯದೊಂದಿಗೆ ಉತ್ತಮ ಪರಿಸರ ಮತ್ತು ಅವಕಾಶಗಳಿಂದ ಜ್ಞಾನದಧಾರೆಯನ್ನು ನೀಡಿ ಪ್ರತಿಭೆಗಳಾವರಣಗೊಳಿಸುತ್ತಿರುವ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ಅಧ್ಯಕ್ಷರಾದ ಡಾ.ಸುಧಾಕರ್ ಶೆಟ್ಟಿಯವರ ಕಾರ್ಯ ಶ್ಲಾಘನೀಯ ಎಂದರು.
ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾರ್ಕಳ ಶಾಸಕರಾದ ವಿ.ಸುನೀಲ್ ಕುಮಾರ್‌ರವರು, ಶಿಕ್ಷಣ ಕ್ಷೇತ್ರದಲ್ಲಿ ವಿಭಿನ್ನ ವ್ಯಕ್ತಿತ್ವ ಡಾ.ಸುಧಾಕರ್ ಶೆಟ್ಟಿಯವರದು. ಇಷ್ಟು ದೊಡ್ಡ ಪ್ರಮಾಣದ ಪ್ರತಿಭಾ ಪುರಸ್ಕಾರವನ್ನು ನೀಡುತ್ತಿರುವ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ಕಾರ್ಯ ಅಭಿನಂದನೀಯವಾದದ್ದು. ಶಿಕ್ಷಣವೆಂದರೆ ಕೇವಲ ಫಲಿತಾಂಶವಲ್ಲ, ಪದವಿ ಪತ್ರಗಳ ಸಂಗ್ರಹವಲ್ಲ. ಅಂಕಗಳಿಕೆಯು ಅಲ್ಲ. ಶಿಕ್ಷಣದ ಮೂಲಕ ನಮ್ಮೆಲ್ಲರ ಮೌಲ್ಯಗಳನ್ನು ಹೆಚ್ಚು ಮಾಡಿಕೊಳ್ಳುವಂತಾಗಬೇಕು. ಮೌಲ್ಯಗಳೇ ನಮ್ಮ ನಡತೆಗಳಾದಾಗ ನಮ್ಮ ವ್ಯಕ್ತಿತ್ವಕ್ಕೆ ಶೋಭೆ ಬರಲು ಸಾಧ್ಯ ಎಂದರು.
ಕಾರ್ಕಳ ಜ್ಞಾನಸುಧಾ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಎಸ್.ಎಸ್.ಎಲ್.ಸಿ ಸಾಧಕ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಮತ್ತು ಉಡುಪಿ ಜ್ಞಾನಸುಧಾ ಪದವಿ ಪೂರ್ವಕಾಲೇಜು ನಾಗಬನ ಕ್ಯಾಂಪಸ್ ಮತ್ತು ಕಾರ್ಕಳ ಜ್ಞಾನಸುಧಾ ಪದವಿಪೂರ್ವ ಕಾಲೇಜಿನ ಪ್ರಥಮ ಹಾಗೂ ದ್ವಿತೀಯ ಪಿಯುಸಿ ಸಾಧಕ ವಿದ್ಯಾರ್ಥಿಗಳನ್ನು, ಜ್ಞಾನಸುಧಾ ಸಂಸ್ಥೆಯಲ್ಲಿ ಕಳೆದ 10 ವರ್ಷಗಳಿಂದ ಸೇವೆ ಸಲ್ಲಿಸಿದ ಬೋಧಕ ಮತ್ತು ಬೋಧಕೇತರ ಸಿಬ್ಬಂದ್ದಿವರ್ಗವನ್ನು ಗುರುತಿಸಿ ಗೌರವಿಸಲಾಯಿತು. ಟ್ರಸ್ಟಿನ ವತಿಯಿಂದ ೩೮ಲಕ್ಷ ವಿದ್ಯಾರ್ಥಿ ವೇತನ ವಿತರಿಸಲಾಯಿತು. ತ್ರಿವಿಧ ಜಿಗಿತದಲ್ಲಿ ರಾಜ್ಯಮಟ್ಟದಲ್ಲಿ ದ್ವಿತೀಯ ಸ್ಥಾನ ಗಳಿಸಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಕಾರ್ಕಳ ಜ್ಞಾನಸುಧಾ ಆಂಗ್ಲಮಾದ್ಯಮ ಪ್ರೌಢಶಾಲೆಯ ಪ್ರಣಯ್ ಶೆಟ್ಟಿ, ಜೊತೆಗೆ ಎನ್.ಐ.ಟಿ.ಕೆ ಸುರತ್ಕಲ್‌ನಲ್ಲಿ ಪಿ.ಎಚ್.ಡಿ ಪದವಿ ಪೂರೈಸಿದ ರಸಾಯನಶಾಸ್ತ್ರ ಉಪನ್ಯಾಸಕರಾದ ಡಾ. ಹರ್ಷ ಹಾಗೂ ರಾಜ್ಯಮಟ್ಟದಲ್ಲಿ ಆರ್ಮ್ ರೆಸ್ಲಿಂಗ್‌ನಲ್ಲಿ ಪ್ರಶಸ್ತಿ ಗಳಿಸಿದ ರಸಾಯನಶಾಸ್ತ್ರ ಉಪನ್ಯಾಸಕಿ ಅಕ್ಷತಾ ಜೆ.ಶೆಟ್ಟಿ ಸನ್ಮಾನಿಸಲಾಯಿತು.
ಗಣಿತನಗರದ ನೈವೇದ್ಯಸುಧಾದಲ್ಲಿ ಅಡುಗೆ ಸಹಾಯಕರಾಗಿದ್ದು ಇತ್ತೀಚೆಗೆ ಹೃದಯಾಘಾತದಿಂದ ಅಗಲಿದ ಫ್ರಾನ್ಸಿನ್ ಡಿ’ಸೋಜರವರಿಗೆ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್, ಜ್ಞಾನಸುಧಾ ಹಳೆ ವಿದ್ಯಾರ್ಥಿ ಸಂಘ ಮತ್ತು ಜ್ಞಾನಸುಧಾ ಉಪನ್ಯಾಸಕ ಸಿಬ್ಬಂದಿ ವರ್ಗದಿಂದ ಕೊಡಮಾಡಿದ 2 ಲಕ್ಷ ರೂಪಾಯಿಯನ್ನು ಅವರ ಧರ್ಮಪತ್ನಿ ಐರಿನ್ ಡಿ’ಸೋಜರವರಿಗೆ ಹಸ್ತಾಂತರಿಸಲಾಯಿತು. ಟ್ರಸ್ಟ್ ಅಧ್ಯಕ್ಷ ಡಾ. ಸುಧಾಕರ್ ಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡುತ್ತಾ ತಂದೆ, ತಾಯಿ, ಗುರುವಿನ ಪಾದಚರಣಕೆರಗಿ ಪಡೆದ ಜ್ಞಾನವು ಅಹಂಕಾರವನ್ನು ತರದೆ ಸಮಾಜ, ದೇಶದ ಮೇಲಿನ ಕಳಕಳಿಯಿಂದ ಮಮಕಾರವನ್ನು ತಂದುಕೊಟ್ಟು ರಾಷ್ಟ್ರಭಕ್ತಿ ಮೂಡಿಸುವಂತಾದಾಗ ನಮ್ಮಂತಹ ಶಿಕ್ಷಣ ಸಂಸ್ಥೆಗಳ ಕಾರ್ಯವು ಸಾರ್ಥಕವಾದಂತೆ ಎಂದರು.
ವೇದಿಕೆಯಲ್ಲಿ ಎಳ್ಳಾರೆ ಲಕ್ಷ್ಮೀ ಜನಾರ್ಧನ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಯೋಗೀಶ ಮಲ್ಯ, ಎಪಿಜಿಇಟಿ ಟ್ರಸ್ಟಿ ಹಾಗೂ ಬಳ್ಳಾರಿ ಜ್ಞಾನಾಮೃತ ಪಿಯು ಕಾಲೇಜಿನ ಅಧ್ಯಕ್ಷರಾದ ಎಂ.ಜಿ.ಗೌಡ್ ಉಪಸ್ಥಿತರಿದ್ದರು. ಆಂಗ್ಲಭಾಷಾ ಉಪನ್ಯಾಸಕಿ ಸಂಗೀತಾ ಕುಲಾಲ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.