ಉಡುಪಿ, ಮೇ 26: ಉಡುಪಿ, ದಕ್ಷಿಣ ಕನ್ನಡ ಜಿಲ್ಲೆ ಸಹಿತ ಕರಾವಳಿ ಪ್ರದೇಶ ಹಾಗೂ ರಾಜ್ಯದ ವಿವಿಧೆಡೆ ಕುಡಿಯುವ ನೀರಿನ ತೀವ್ರ ಸಮಸ್ಯೆ ತಲೆದೋರಿರುವ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಆರಂಭವನ್ನು 1 ವಾರಗಳ ಮುಂದೂಡುವಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಮನವಿ ಮಾಡಿದ್ದಾರೆ.
2023-24 ನೇ ಸಾಲಿನ ಶೈಕ್ಷಣಿಕ ವರ್ಷದ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳು ಶಿಕ್ಷಣ ಇಲಾಖೆಯ ಆದೇಶದಂತೆ ಮೇ 31 ರಂದು ಆರಂಭಗೊಳ್ಳಲಿದೆ. ಈ ಬಾರಿ ಮುಂಗಾರು ಮಳೆಯ ವಿಳಂಬದಿಂದಾಗಿ ರಾಜ್ಯದ ವಿವಿಧೆಡೆ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ.
ರಾಜ್ಯದ ಹಲವು ಶಾಲೆಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಸಮರ್ಪಕವಾಗಿಲ್ಲದ ಕಾರಣ ಶಾಲಾ ವಿದ್ಯಾರ್ಥಿಗಳಿಗೆ ಕುಡಿಯುವ ನೀರಿನ ಪೂರೈಕೆ, ಬಿಸಿಯೂಟ ಹಾಗೂ ಶಾಲೆಯ ಪರಿಸರದ ಶುಚಿತ್ವ ಕಾಪಾಡಲು ಕಷ್ಟ ಸಾಧ್ಯವಾಗಿದೆ.
ಇದರಿಂದ ಶಾಲಾ ವಿದ್ಯಾರ್ಥಿಗಳ ಆರೋಗ್ಯ ಹಾಗೂ ದೈನಂದಿನ ಚಟುವಟಿಕೆಗೆ ತೊಂದರೆಯಾಗಲಿದೆ.
ಸಮಸ್ಯೆಯ ಗಂಭೀರತೆಯನ್ನು ಪರಿಗಣಿಸಿ ಶಾಲಾ ಆರಂಭವನ್ನು ಒಂದು ವಾರಗಳ ಕಾಲ ಮುಂದೂಡಿಕೆಗೆ ಶಿಕ್ಷಣ ಇಲಾಖೆಗೆ ನಿರ್ದೇಶನ ನೀಡುವಂತೆ ಮುಖ್ಯ ಮಂತ್ರಿ ಹಾಗೂ ಸರಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಮನವಿ ಮಾಡಿದ್ದಾರೆ.