ಮಣಿಪಾಲ, ಮೇ 22: ಜಾಗತಿಕವಾಗಿ ಥಲಸ್ಸೆಮಿಯಾ ಕಾಯಿಲೆ ಕುರಿತು ಜಾಗೃತಿ ಮೂಡಿಸಲು ಮತ್ತು ಥಲಸ್ಸೆಮಿಯಾ ಪೀಡಿತ ಮಕ್ಕಳಿಗೆ ತಮ್ಮ ಆರೈಕೆದಾರರಿಗೆ ಬೆಂಬಲ ವ್ಯಕ್ತಪಡಿಸಲು ಪ್ರತಿ ವರ್ಷ ವಿಶ್ವ ಥಲಸ್ಸೆಮಿಯಾ ದಿನವನ್ನು ಆಚರಿಸಲಾಗುತ್ತದೆ. ಈ ವರ್ಷದ ಧ್ಯೇಯವಾಕ್ಯ ‘ಎಚ್ಚರಿಕೆಯಿಂದಿರಿ, ಹಂಚಿಕೊಳ್ಳಿ, ಕಾಳಜಿ : ಥಲಸ್ಸೆಮಿಯಾ ಕುರಿತು ಆರೈಕೆಯ ಅಂತರವನ್ನು ತಗ್ಗಿಸಲು ಶಿಕ್ಷಣವನ್ನು ಬಲಪಡಿಸುವುದು’. ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ಮಕ್ಕಳ ರಕ್ತಶಾಸ್ತ್ರ ಮತ್ತು ಕ್ಯಾನ್ಸರ್ ವಿಭಾಗವು ಸರ್ಕಾರೇತರ ಸಂಸ್ಥೆ (ಎನ್‌ಜಿಒ) ಡಿಕೆಎಂಎಸ್ ಸಹಕಾರದೊಂದಿಗೆ ಎಚ್‌ಎಲ್‌ಎ ಪರೀಕ್ಷಾ ಶಿಬಿರವನ್ನು ನಡೆಸಿತು.
ಶಿಬಿರದಲ್ಲಿ ರೋಗಿಗಳು ಮತ್ತು ಸಂಭಾವ್ಯ ದಾನಿಗಳ 50 ಎಚ್‌ಎಲ್‌ಎ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಈ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ.ಅರ್ಚನಾ ಎಂ.ವಿ. ಮಾತನಾಡಿ, ಎಚ್‌ಎಲ್‌ಎ ಟೈಪಿಂಗ್ ಮೂಳೆ ಮಜ್ಜೆಯ ಕಸಿ ಮಾಡಲು ಸಂಭಾವ್ಯ ದಾನಿಗಳನ್ನು ಗುರುತಿಸುವ ಮೊದಲ ಹೆಜ್ಜೆಯಾಗಿದೆ ಎಂದು ಹೇಳಿದರು. ವಿಭಾಗದ ಸ್ಥಾನಿಕ ವೈದ್ಯೆ ಡಾ.ಸ್ವಾತಿ ಪಿ.ಎಂ ಅವರು ಥಲಸ್ಸೇಮಿಯಾ ಮತ್ತು ಕಬ್ಬಿಣದ ಚೆಲೇಷನ್‌ನ ಅಗತ್ಯತೆಯ ಅವಲೋಕನವನ್ನು ನೀಡಿದರು. ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ರೋಗಿಗಳಿಗೆ ದೊರಯುವ ಆರ್ಥಿಕ ಸಹಾಯದ ಕುರಿತು ಸಹ ಪ್ರಾಧ್ಯಾಪಕ ಮತ್ತು ವಿಭಾಗದ ಮುಖ್ಯಸ್ಥ ಡಾ. ವಾಸುದೇವ ಭಟ್ ಕೆ ಮಾತನಾಡಿದರು.
ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ಅವರು ಸ್ಟೆಮ್ ಸೆಲ್ ಟ್ರಾನ್ಸ್‌ಪ್ಲ್ಯಾಂಟ್ ಚಿಕಿತ್ಸೆಯು ಥಲಸ್ಸೆಮಿಯಾ ಗುಣಪಡಿಸಲು ಅತ್ಯಂತ ಸೂಕ್ತ ಆಯ್ಕೆಯಾಗಿದೆ ಮತ್ತು ಈ ಸೌಲಭ್ಯವು ಕಸ್ತೂರ್ಬಾ ಆಸ್ಪತ್ರೆಯಲ್ಲಿ ಲಭ್ಯವಿರುವುದರಿಂದ ಈಗ ರೋಗಿಗಳು ಹೆಚ್ಚು ದೂರ ಪ್ರಯಾಣಿಸಬೇಕಾಗಿಲ್ಲ ಎಂದರು. ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ಡೀನ್ ಡಾ. ಪದ್ಮರಾಜ್ ಹೆಗ್ಡೆ ಅವರು ಇಡೀ ತಂಡದ ಪ್ರಯತ್ನವನ್ನು ಶ್ಲಾಘಿಸಿದರು.