ಕೋಟ, ಮೇ 17: ಡಾ. ಶಿವರಾಮ ಕಾರಂತ ಥೀಮ್ ಪಾರ್ಕ್ ಆವರಣ ತುಂಬೆಲ್ಲ ಮಕ್ಕಳ ಗೆಜ್ಜೆ ಸದ್ದುಗಳ ಝೇಂಕಾರ, ಬಣ್ಣದ ಮುಖವರ್ಣಿಕೆಯಿಂದ ಮುದ್ದು ಮುದ್ದು ಮುಖಗಳ ಇನ್ನಷ್ಟು ಹೊಳಪು, ಯಕ್ಷಗಾನ ಉಡುಪಿನಿಂದ ಮತ್ತಷ್ಟು ಕಂಗೊಳಿಸುತ್ತಿರುವ ಪುಟಾಣಿ ದೇವರುಗಳು. ಅಪ್ಸರೆ ದೇವತೆಗಳಿಗಿಂತ ನಾವೇನೂ ಕಮ್ಮಿ ಇಲ್ಲ ಎನ್ನುವ 60 ಕ್ಕೂ ಮಿಕ್ಕಿ ಯಕ್ಷಗಾನ ಮಕ್ಕಳ ವೇಷಧಾರಿಗಳು ಅತ್ತಿಂದಿತ್ತ ಓಡಾಡುತ್ತಿದ್ದರೆ ನೋಡುಗರಿಗೆಲ್ಲ ಕಣ್ಣಿಗೆ ಹಬ್ಬವೇ ಸರಿ. ಇದು ಕಂಡುಬಂದಿದ್ದು ಕೋಟ ಕಾರಂತ ಥೀಮ್ ಪಾರ್ಕ್ ನಲ್ಲಿ.
ಡಾ. ಶಿವರಾಮ ಕಾರಂತ ಪ್ರತಿಷ್ಠಾನ (ರಿ.)ಕೋಟ, ಡಾ. ಶಿವರಾಮ ಕಾರಂತ ಟ್ರಸ್ಟ್ (ರಿ.) ಉಡುಪಿ, ಕೋಟತಟ್ಟು ಗ್ರಾಮ ಪಂಚಾಯತ್ ಆಶ್ರಯದಲ್ಲಿ ಕೋಟದ ಡಾ. ಶಿವರಾಮ ಕಾರಂತ ಥೀಮ್ ಪಾರ್ಕ್ನಲ್ಲಿ ನಡೆಯುತ್ತಿರುವ ರಂಗು ರಂಗಿನ ಯಕ್ಷಗಾನ ಬೇಸಿಗೆ ಶಿಬಿರ ಬಾಲವನ (ಬಣ್ಣದ ಓಕುಳಿ) ಸಮಾರೋಪ ಸಮಾರಂಭದ ಕಾರ್ಯಕ್ರಮದಲ್ಲಿ. ಮೇ 1 ರಿಂದ ಆರಂಭವಾದ ಯಕ್ಷಗಾನ ನೃತ್ಯ ತರಭೇತಿ ಹಾಗೂ ಯಕ್ಷಗಾನ ಪ್ರಸಂಗ ಪ್ರದರ್ಶನದ ಶಿಬಿರದಲ್ಲಿ ಸುಮಾರು ೬೦ಕ್ಕೂ ಮಿಕ್ಕಿ ಮಕ್ಕಳು ಭಾಗವಹಿಸಿದ್ದರು.
ಅವರು ಶಿಬಿರದಲ್ಲಿ ಕಲಿತದ್ದನ್ನು ಪ್ರೇಕ್ಷಕರ ಮುಂದೆ ಪ್ರಸ್ತುತ ಪಡಿಸುವ ಸಲುವಾಗಿ ಭಾಗವಹಿಸದ ಎಲ್ಲ ಮಕ್ಕಳಿಗೂ ಯಕ್ಷಗಾನ ವೇಷಭೂಷಣ ತೊಡಸಿ ವೇದಿಕೆಯಲ್ಲಿ ಪ್ರತಿಭೆ ಅನಾವರಣಕ್ಕೆ ಅವಕಾಶ ಕಲ್ಪಿಸಿ ಕೊಡಲಾಗಿತ್ತು. ಮಕ್ಕಳು ಯಕ್ಷಗಾನ ವೇಷದೊಂದಿಗೆ ಲಯಬದ್ದವಾಗಿ ಹೆಜ್ಜೆ ಹಾಕಿ ಪ್ರೇಕ್ಷಕರಿಂದ ಭೇಷ್ ಎನಿಸಿಕೊಂಡರು. ಅಲ್ಲದೇ ಬಬ್ರುವಾಹನ ಕಾಳಗ ಮಕ್ಕಳಿಂದ ಪ್ರಸಂಗ ಯಕ್ಷಗಾನ ಕೂಡ ಅಷ್ಟೇ ಅರ್ಥಪೂರ್ಣವಾಗಿ ನಡೆಸಿ ಎಲ್ಲರ ಗಮನಸೆಳೆದರು. ಶಿಬಿರದ ಗುರುಗಳಾದ ಕೊಯ್ಕೂರು ಸೀತಾರಾಮ ಶೆಟ್ಟಿ, ಸಂಗೀತಾ ಕಾರ್ತಟ್ಟು, ಗಣೇಶ್ ಕಾರ್ಕಡ, ಸ್ವಸ್ತಿಕ್ ವಡ್ಡರ್ಸೆ ಶ್ರಮ ಇಲ್ಲಿ ಮೆಚ್ಚಲೇಬೇಕು. ಒಟ್ಟಿನಲ್ಲಿ ಯಕ್ಷಗಾನಕ್ಕೆ ಹೊಸ ಭಾಷ್ಯ ಬರೆದ ಕಾರಂತರ ಓಡಾಡಿದ ಕೋಟದ ಮಣ್ಣಿನಲ್ಲಿ ಮಕ್ಕಳು ಯಕ್ಷಗಾನ ಗೆಜ್ಜೆ ಕಟ್ಟಿ ಓಡಾಡಿದ್ದು ಒಂದು ಅರ್ಥಪೂರ್ಣ ಕಾರ್ಯಕ್ರಮವೇ ಸರಿ. ಕಾರ್ಯಕ್ರಮದ ಆಯೋಜಕರಿಗೆ ಶ್ಲಾಘಿಸಲೇಬೇಕು.