ಮಣಿಪಾಲ, ಮೇ 17: ಅಮೆರಿಕೆಯ ಗಾಂಧಿ-ಕಿಂಗ್ ವಿದ್ವತ್ ವಿನಿಮಯ ಕಾರ್ಯಕ್ರಮದ ಅಂಗವಾಗಿ, ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ ಸಹಯೋಗದೊಂದಿಗೆ ಎರಡು ದಿನಗಳ ಉಡುಪಿ ಸೀರೆಗಳ ಪ್ರದರ್ಶನ ‘ನೇಯ್ಗೆ’ ಸಮಾರೋಪ ಸಮಾರಂಭ ನಡೆಯಿತು. ಮಣಿಪಾಲ ಮಹಿಳಾ ಸಮಾಜದ ಅಧ್ಯಕ್ಷೆ ಡಾ. ಸುಲತಾ ಭಂಡಾರಿ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಶಿವಳ್ಳಿ ನೇಕಾರರ ಸಮಾಜ ಉಡುಪಿಯ ಹಿರಿಯ ನೇಕಾರ ಜಾರ್ಜ್ ಅಮ್ಮನ್ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಇದೇ ಸಂದರ್ಭದಲ್ಲಿ ಕದಿಕೆ ಟ್ರಸ್ಟ್‌ನ ಅಧ್ಯಕ್ಷರಾದ ಮಮತಾ ರೈ, ಗಣೇಶ್ ರಾವ್, ಲಲಿತ ಕೆದಿಲಾಯ, ಜಿ.ಸಿ.ಪಿ.ಎ.ಎಸ್ ನ ಮುಖ್ಯಸ್ಥ ಪ್ರೊ.ವರದೇಶ್ ಹಿರೇಗಂಗೆ ಅತಿಥಿಗಳಾಗಿದ್ದರು.
ಉಡುಪಿ ಪ್ರದೇಶವು ಹತ್ತಿ / ನೂಲು ಅಥವಾ ಬಣ್ಣಗಳನ್ನು ತಯಾರಿಸಲಿಲ್ಲ ಆದರೆ ಇಲ್ಲಿನ ಜನತೆ ಬ್ರಿಟಿಷರ ವಿರುದ್ಧದ ಹೋರಾಟವಾಗಿ ಈ ಕೌಶಲ್ಯವನ್ನು ಅಭಿವೃದ್ಧಿಪಡಿಸಿದರು ಮತ್ತು ಗಾಂಧಿ ಚಳುವಳಿಯ ಸಮಯದಲ್ಲಿ ನೇಕಾರಿಕೆ ಬಹಳಷ್ಟು ಪ್ರಾಮುಖ್ಯತೆಯನ್ನು ಗಳಿಸಿತು. ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ “ಮೇಕ್ ಇನ್ ಇಂಡಿಯಾ” ಕಲ್ಪನೆಯ ಅಡಿಯಲ್ಲಿ ಖಾದಿಯನ್ನು ಉತ್ತೇಜಿಸಲಾಯಿತು. ಹಾಗೂ ಸಹಕಾರ ಸಂಘಗಳು ಈ ಹೊತ್ತಲ್ಲಿ ಪ್ರಾಮುಖ್ಯತೆಯನ್ನು ಪಡೆದುಕೊಂಡವು. ಒಂದು ಪ್ರತಿರೋಧವಾಗಿ ಆರಂಭವಾದ ಉಡುಪಿ ಸೀರೆಯ ನೇಯ್ಗೆ ಜನರ ಸ್ವರಾಜ್ ಚಳವಳಿಯಾಗಿ ಮುಂದುವರೆಯಿತು ಮತ್ತು ಉಡುಪಿ ಸೀರೆಗಳ ಉತ್ಪಾದನೆಯು ಇಲ್ಲಿನ ಸಂಸ್ಕೃತಿಯ ಭಾಗವೇ ಆಯಿತು, ಮತ್ತು ಹೆಚ್ಚಿನ ಮನೆಗಳು ಜಾತಿ ಮತ್ತು ಧರ್ಮವನ್ನು ಲೆಕ್ಕಿಸದೆ ನೇಕಾರಿಕೆಯನ್ನು ಪ್ರಾರಂಭಿಸಿದವು ಎಂದು ಉಡುಪಿ ನೇಕಾರ ಸಮಾಜದ ಸ್ಥಾಪಕ ಸದಸ್ಯರಲ್ಲಿ ಒಬ್ಬರಾದ ಯು.ರಾಮರಾವ್ ಅವರ ಪುತ್ರ ಗಣೇಶ್ ರಾವ್ ವಿವರಿಸಿದರು.
ನಾನು 12 ನೇ ವಯಸ್ಸಿನಲ್ಲಿ ಉಡುಪಿ ಸೀರೆಗಳನ್ನು ನೇಯಲು ಪ್ರಾರಂಭಿಸಿದೆ ಮತ್ತು ನನಗೆ ಈಗ 80 ವರ್ಷ; ಇನ್ನೂ ಕಲಿಯಲು ಬಹಳಷ್ಟು ಇದೆ ಎಂದು ಭಾವಿಸುತ್ತೇನೆ. ವಿದ್ಯಾರ್ಥಿಗಳು ವಿಭಿನ್ನ ವಿಷಯಗಳನ್ನು ಕಲಿಯುವಂತೆ, ನೇಯ್ಗೆಯೂ ವಿಭಿನ್ನ ತಂತ್ರಗಳು ಮತ್ತು ಪ್ರಕ್ರಿಯೆಗಳನ್ನು ಹೊಂದಿದೆ ಮತ್ತು ಈ ಕಲಿಕೆ ನಿರಂತರ ಎಂದು ಉಡುಪಿಯ ಶಿವಳ್ಳಿ ವೀವರ್ಸ್ ಸೊಸೈಟಿಯ ಹಿರಿಯ ನೇಕಾರ ಜಾರ್ಜ್ ಅಮ್ಮನ್ ಹೇಳಿದರು. ಸುಲತಾ ಭಂಡಾರಿ ಸಭೆಯನ್ನುದ್ದೇಶಿಸಿ ಮಾತನಾಡಿ, ಉಡುಪಿ ಸೀರೆಗಳನ್ನು ಖರೀದಿಸಲು ಮತ್ತು ಈ ಸೀರೆಗಳ ಸಮಕಾಲೀನ ಬಳಕೆಯನ್ನು ಕಂಡುಕೊಳ್ಳಲು ಹೇಳಿದರು ಮತ್ತು ಇದರಿಂದ ನಮ್ಮ ಸಂಸ್ಕೃತಿಯು ಉಳಿದು ಆಧುನಿಕತೆಯ ಜೊತೆಗೆ ಸಾಗುತ್ತದೆ ಎಂದರು.
ಮಾಹೆಯ ಡಿಸೈನ್ ವಿಭಾಗದ ಮುಖ್ಯಸ್ಥೆ ಡಾ. ವೀಣಾ ರಾವ್ ಅವರು ಸಸ್ಟೈನಬಲ್ ಫೈಬರ್ ಫಾರ್ ಫ್ಯಾಶನ್ ವಿಷಯದ ಕುರಿತು ವಿಶೇಷ ಉಪನ್ಯಾಸವನ್ನು ನಡೆಸಿದರು. ಬಾಳೆ ಕಾಂಡದಿಂದ ನೂಲುಗಳನ್ನು ಹೊರತೆಗೆಯುವ ಪ್ರಕ್ರಿಯೆ ಮತ್ತು ಕೃಷಿ ತ್ಯಾಜ್ಯಗಳನ್ನು ಸುಸ್ಥಿರ ಫ್ಯಾಷನ್‌ಗಾಗಿ ಉಪಯುಕ್ತ ಸಂಪನ್ಮೂಲಗಳಾಗಿ ಪರಿವರ್ತಿಸುವುದು ಹೇಗೆ ಎಂದು ಅವರು ವಿವರಿಸಿದರು. ಈ ಹೊತ್ತಲ್ಲಿ ಬಾಳೆ ನಾರಿನಿಂದ ಬಟ್ಟೆ ತಯಾರಿಸುವ ಕಾರ್ಯಾಗಾರವನ್ನು ಸಹ ನಡೆಸಿದರು.
ಗಾಂಧೀ-ಕಿಂಗ್ ಫೆಲೋಗಳಾದ ಲಾವಣ್ಯ ಎನ್‌ಕೆ ಮತ್ತು ರಾಯ್ಡನ್ ಅವರು ತಮ್ಮ ಕಲೆ ಮತ್ತು ಪರಿಸರದ ಕುರಿತ ಶೋಧನೆಯ ಭಾಗವಾಗಿ “ನೇಯ್ಗೆ” ಕಾರ್ಯಕ್ರಮವನ್ನು ರೂಪಿಸಿದ ಅನುಭವವನ್ನು ಹಂಚಿಕೊಂಡರು. ಜಿಸಿಪಿಎಎಸ್ ನ ಹಳೆಯ ವಿದ್ಯಾರ್ಥಿನಿಯಾಗಿರುವ ಲಾವಣ್ಯ, ತನ್ನ ಸ್ನಾತಕೋತ್ತರ ಕೋರ್ಸ್, ಇಕೋಸಾಫಿಕಲ್ ಎಸ್ಥಟಿಕ್ಸ್, ಈ ಕಾರ್ಯಕ್ರಮ ವನ್ನು ಸಂಯೋಜಿಸಲು ಹೇಗೆ ಸಹಾಯ ಮಾಡಿತು ಎಂದು ಉಲ್ಲೇಖಿಸಿದರು. ಕೈಮಗ್ಗದ ಪ್ರಕ್ರಿಯೆ ಮತ್ತು ಉಡುಪಿ ಸೀರೆಯ ಕುರಿತ ಈ ಎರಡು ದಿನಗಳ ಪ್ರದರ್ಶನ-ಉಪನ್ಯಾಸ-ಕಾರ್ಯಾಗಾರ ಮಣಿಪಾಲ, ಉಡುಪಿ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಹೆಚ್ಚಿನ ಸಂಖ್ಯೆಯ ಜನರನ್ನು ಆಕರ್ಷಿಸಿತು.