ಉಡುಪಿ, ಮೇ. 5: ಕನ್ನಡ ಸಾಹಿತ್ಯ ಪರಿಷತ್, ಉಡುಪಿ ತಾಲ್ಲೂಕು ಘಟಕ ಹಾಗೂ ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜು ಉಡುಪಿ ಇವರ ಸಹಕಾರದಲ್ಲಿ ಉಡುಪಿಯ ಪಿಪಿಸಿಯ ಮಿನಿ ಆಡಿಟೋರಿಯಂನಲ್ಲಿ ಶುಕ್ರವಾರ ಸಾಹಿತ್ಯ ಪರಿಷತ್ತಿನ 109ನೇ ಸಂಸ್ಥಾಪನಾ ದಿನ ಆಚರಿಸಲಾಯಿತು.
ಕನ್ನಡ ಸಾಹಿತ್ಯ ಪರಿಷತ್ತಿಗೆ 109 ವರ್ಷಗಳ ಸಂಭ್ರಮ, ಕನ್ನಡ ನಾಡು, ನುಡಿ, ಸಂಸ್ಕೃತಿ ರಕ್ಷಣೆಗಾಗಿ 1915ರಲ್ಲಿ ಆಗಿನ ಮೈಸೂರು ಅರಸರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಳಜಿ ವಹಿಸಿ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿ ಪರಿಷತ್ ಸಂಸ್ಥಾಪನೆಗೊಳ್ಳಲು ಪ್ರಮುಖ ಕಾರಣರಾಗಿದ್ದರು. ಆಗಿನಿಂದ ಈಗಿನವರೆಗೂ ಹಲವು ಮಹನೀಯರು ಕನ್ನಡ ಕಟ್ಟುವ ಕಾರ್ಯದಲ್ಲಿ ತೊಡಗಿ ಕನ್ನಡ ನಾಡು, ನುಡಿ ಬೆಳವಣಿಗೆಗೆ ನೆರವಾಗಿದ್ದಾರೆ ಎಂದು ಸಾಹಿತಿ ನಾರಾಯಣ ಮಡಿ ತಮ್ಮ ಉಪನ್ಯಾಸದಲ್ಲಿ ತಿಳಿಸಿದರು.
ಸಮಾರಂಭವನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಸುಕನ್ಯಾ ಮೇರಿ ಜೆ ಅವರು ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಉಡುಪಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ರವಿರಾಜ್ ಎಚ್ ಪಿ ವಹಿಸಿದ್ದರು. ಇದೇ ಸಂದರ್ಭದಲ್ಲಿ ಯಕ್ಷಪ್ರೇಮಿ ನಾರಾಯಣ ಅವರ ಸ್ಮರಣಾರ್ಥ ದತ್ತಿ ಪುರಸ್ಕಾರವನ್ನು ಹಿರಿಯ ಯಕ್ಷಗಾನ ಕಲಾವಿದ ಕೂಡ್ಲಿ ದೇವದಾಸ್ ರಾವ್ ಅವರಿಗೆ ನೀಡಲಾಯಿತು.
ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ನಿವೃತ್ತ ವಿಜಯ ಬ್ಯಾಂಕ್ ಅಧಿಕಾರಿ ಭುವನ ಪ್ರಸಾದ್ ಹೆಗ್ಡೆ, ಕಲಾವಿದ, ಮೂಳೆರೋಗ ತಜ್ಞರಾದ ಡಾ. ಸುರೇಶ ಶೆಣೈ, ಯಕ್ಷಗಾನ ಕಲಾರಂಗದ ಉಪಾಧ್ಯಕ್ಷರಾದ ಎಸ್. ವಿ ಭಟ್ ಉಪಸ್ಥಿತರಿದ್ದರು. ಗೌರವ ಕಾರ್ಯದರ್ಶಿ ಜನಾರ್ಧನ ಕೊಡವೂರು ಸ್ವಾಗತಿಸಿ, ರಾಜೇಶ್ ಭಟ್ ಪಣಿಯಾಡಿ ಪರಿಚಯಿಸಿದರು. ಉಪನ್ಯಾಸಕಿ ಪ್ರಜ್ಞ ಮಾರ್ಪಳ್ಳಿ ವಂದಿಸಿದರು. ರಾಘವೇಂದ್ರ ಪ್ರಭು ಕರ್ವಾಲು ಕಾರ್ಯಕ್ರಮ ನಿರೂಪಿಸಿದರು.