ಉಡುಪಿ, ಏ. 28: ರಾಹುಲ್ ಅವರು ಚುನಾವಣಾ ಪ್ರಚಾರಕ್ಕೆ ಹೋದ ಕಡೆ ಕಾಂಗ್ರೆಸ್ ಸೋತ ಇತಿಹಾಸವಿದೆ ಎಂದು ಹೇಳಿಕೆ ನೀಡಿದ ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷರ ಹೇಳಿಕೆ ಅವರ ಜಾಣ ಮರೆವನ್ನು ಪ್ರತಿಬಿಂಬಿಸುತ್ತದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು ಹೇಳಿದ್ದಾರೆ. ಪ್ರಧಾನಿಯಾಗಿ ದೇಶದ ಚುಕ್ಕಾಣಿ ಹಿಡಿದ ಮೋದಿಯವರು ಹಲವು ರಾಜ್ಯಗಳ ಚುನಾವಣೆಗಳಲ್ಲಿ ಪ್ರಚಾರಕ್ಕೆ ಹೋದರೂ ಅಧಿಕಾರವನ್ನು ಗಳಿಸುವಲ್ಲಿ ವಿಫಲರಾಗಿಲ್ಲವೇ? ಇದನ್ನು ಬಿಜೆಪಿ ಅಧ್ಯಕ್ಷರು ನೆನಪಿಸಿಕೊಳ್ಳಬೇಕಾಗಿದೆ.
ರಾಜಸ್ಥಾನ, ಹಿಮಾಚಲ ಪ್ರದೇಶ, ತಮಿಳುನಾಡು, ಪಶ್ಚಿಮ ಬಂಗಾಳ, ಆಂಧ್ರ, ಕೇರಳ ರಾಜ್ಯಗಳಿಗೆ ಮೋದಿಯವರು ಪ್ರಚಾರಕ್ಕೆ ತೆರಳಲಿಲ್ಲವೇ? ಆ ರಾಜ್ಯಗಳಲ್ಲಿ ಬಿಜೆಪಿ ಸೋಲಲು ಮೋದಿಯವರು ಕಾರಣರೇ? ಬಿಜೆಪಿ ಅಧ್ಯಕ್ಷರು ಇದನ್ನು ಸ್ವಷ್ಟೀಕರಿಸಬೇಕು. ರಾಹುಲ್ ಗಾಂಧಿಯವರು ಅದಾನಿ ಕುರಿತು ಹಗರಣವನ್ನು ಲೋಕಸಭೆಯಲ್ಲಿ ಎತ್ತಿದ ಕೆಲವೇ ದಿನಗಳಲ್ಲಿ ಅವರ ವಿರುದ್ಧ ಕೋರ್ಟ್ ತೀರ್ಪು ಬಂತು. 24 ಗಂಟೆ ಒಳಗೆ ಅವರನ್ನು ಸದಸ್ಯತನದಿಂದ ಅನರ್ಹಗೊಳಿಸಲಾಯಿತು. ಹಗರಣವನ್ನು ಮುನ್ನಲೆಗೆ ತರೆದಂತೆ ತಡೆಯಲಾಯಿತು. ವಿದ್ಯಾವಂತ ಹಾಗೂ ದೇಶ ವಿದೇಶಗಳ ಆಗು ಹೋಗುಗಳ ಸ್ವಷ್ಟ ಅರಿವಿರುವ ಎಲ್ಲರೊಂದಿಗೆ ಬೆರೆಯುವ ರಾಹುಲ್ ಅವರ ವ್ಯಕ್ತಿತ್ವವನ್ನು ಹಾಳುಗೆಡವಲು ಹಲವಾರು ಕೋಟಿ ಖರ್ಚು ಮಾಡಲಾಯಿತು. ಅಂದರೆ ಇದು ರಾಹುಲ್ ಬಗ್ಗೆ ಬಿಜೆಪಿಗೆ ಇರುವ ಭಯವಲ್ಲದೆ ಮತ್ತೇನು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು ಪ್ರಶ್ನಿಸಿದ್ದಾರೆ.
ಬಿಜೆಪಿ ಗೆಲ್ಲುವ ಸ್ಥಿತಿಯಲ್ಲಿ ಇಲ್ಲದಿದ್ದರಿಂದಲೇ ಹತಾಶರಾಗಿ ಈ ಹೇಳಿಕೆ ನೀಡುತ್ತಿದ್ದಾರೆ. ಭ್ರಷ್ಟ ರಾಜ್ಯ ಸರಕಾರದ ಬಗ್ಗೆ ಜನರು ಭ್ರಮ ನಿರಸನಗೊಂಡಿದ್ದಾರೆ. ಶಾಸಕರಿಗೆ ಅಮಿಷಗಳನ್ನು ಒಡ್ಡಿ ಐಟಿ ದಾಳಿಯಿಂದ ಭಯಪಡಿಸಿ ಆಪರೇಷನ್ ಕಮಲ ಮೂಲಕ ಬಿಜೆಪಿ ರಚಿಸಿದ ಸರಕಾರವನ್ನು ಜನತೆ ಮರೆತಿಲ್ಲ. ಬಹುಮತವಿಲ್ಲದೆ ಹಿಂಬಾಗಿಲಿನ ಮೂಲಕ ರಾಜ್ಯದಲ್ಲಿ ಅಧಿಕಾರವನ್ನು ಸ್ಥಾಪಿಸಿದ ಬಿಜೆಪಿಯು ಇತಿಹಾಸದಲ್ಲಿಯೇ ಅತ್ಯಂತ ಭ್ರಷ್ಟ ಸರಕಾರ ಎಂಬ ಅಪಕೀರ್ತಿಗೆ ಒಳಗಾಗಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು ಪ್ರಕಟಣೆಯ ಮೂಲಕ ಹೇಳಿಕೆ ನೀಡಿದ್ದಾರೆ.