ಉಡುಪಿ, ಏ. 28: ಯುವಶಕ್ತಿಯ ಸಮರ್ಪಕವಾದ ಬಳಕೆಯಿಂದ ಈ ದೇಶಕ್ಕೆ ಒಳಿತಾಗಲಿದೆ. ನಾವು ಕ್ರಿಯಾಶೀಲರಾಗಿರಬೇಕಾದರೆ ದೈಹಿಕ ಮತ್ತು ಮಾನಸಿಕ ಆರೋಗ್ಯ ಬಹಳ ಮುಖ್ಯ. ಕ್ರೀಡೆ ನಮ್ಮನ್ನು ಈ ನಿಟ್ಟಿನಲ್ಲಿ ಸದಾಕಾಲ ಸಶಕ್ತರನ್ನಾಗಿಸುತ್ತದೆ ಎಂದು ಪೂರ್ಣಪ್ರಜ್ಞ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ಅಭಿಪ್ರಾಯಪಟ್ಟರು. ಅವರು ಮಂಗಳೂರು ವಿವಿ ಹಾಗೂ ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜು ಜಂಟಿಯಾಗಿ ಆಯೋಜಿಸಿದ ಮಹಿಳೆಯರ ಅಂತರ್ ಕಾಲೇಜು ವಾಲಿಬಾಲ್ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡುತ್ತಾ, ಮತದಾನದ ಮಹತ್ವವನ್ನೂ ವಿದ್ಯಾರ್ಥಿಗಳಿಗೆ ವಿವರಿಸಿದರು.
ಮಂಗಳೂರು ವಿವಿ ಕುಲಸಚಿವರಾದ ಡಾ. ಕಿಶೋರ್ ಕುಮಾರ್ ಸಿ.ಕೆ., ವಿದ್ಯಾಪೋಷಕ ಹಾಗೂ ಯಕ್ಷಗಾನ ಕಲಾರಂಗದ ಅಧ್ಯಕ್ಷರಾದ ಗಂಗಾಧರ ರಾವ್, ಕಾಲೇಜಿನ ಗೌರವ ಕಾರ್ಯದರ್ಶಿಗಳಾದ ಸಿ.ಎ.ಟಿ ಪ್ರಶಾಂತ್ ಹೊಳ್ಳ, ಆಡಳಿತ ಮಂಡಳಿಯ ಆಡಳಿತಾಧಿಕಾರಿಯಾದ ಡಾ.ಎ.ಪಿ.ಭಟ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಮಧುಕರ್ ಮುದ್ರಾಡಿ, ಪಂದ್ಯಾಟದ ಪರಿವೀಕ್ಷಕರಾದ ಸೂರಜ್ ಶೆಟ್ಟಿ, ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಸೂರಜ್ ಮರವಂತೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಡಾ.ಸುಕನ್ಯಾ ಮೇರಿ ಜೆ ವಹಿಸಿದ್ದರು. ಐಕ್ಯುಎಸಿ ಸಂಯೋಜಕರಾದ ವಿನಾಯಕ್ ಪೈ ಸ್ವಾಗತಿಸಿ, ವಾಣಿಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ನಾಗರಾಜ ಆಚಾರ್ಯ ವಂದಿಸಿದರು. ಆಂಗ್ಲ ವಿಭಾಗದ ಪ್ರಾಧ್ಯಾಪಕಿ ಜಯಶ್ರೀ ನಾಯಕ್ ಕಾರ್ಯಕ್ರಮ ನಿರೂಪಿಸಿದರು.