ಕೋಟ, ಏ. 22: ಸಾಧಿಸುವ ಛಲವಿದ್ದರೆ ಸಾಧನೆ ಸಾಧ್ಯವಾಗುವುದು. ನಮ್ಮ ಗುರಿ ಕಡೆಗೆ ಎಷ್ಟು ಸಾಧ್ಯವೊ ಅಷ್ಟು ಪ್ರಾಮಾಣಿಕವಾಗಿ ಶ್ರಮ ವಹಿಸಿ ಕರ್ತವ್ಯ ನಿರ್ವಹಿಸದಾಗ ಖಂಡಿತವಾಗಿಯೂ ಯಶಸ್ಸು ದೊರೆಯುತ್ತದೆ. ಮಕ್ಕಳು ಚಿಕ್ಕ ವಯಸ್ಸಿನಲ್ಲಿಯೇ ಕನಸು ನನಸು ಮಾಡಿಕೊಳ್ಳಲು ಬೇಕಾದ ತಯಾರಿ ಆರಂಭಿಸಬೇಕು ಎಂದು ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್ ಹೇಳಿದರು.
ಅವರು ಡಾ. ಶಿವರಾಮ ಕಾರಂತ ಪ್ರತಿಷ್ಠಾನ(ರಿ.)ಕೋಟ, ಡಾ. ಶಿವರಾಮ ಕಾರಂತ ಟ್ರಸ್ಟ್ (ರಿ.) ಉಡುಪಿ, ಕೋಟತಟ್ಟು ಗ್ರಾಮ ಪಂಚಾಯತ್, ಗೀತಾನಂದ ಫೌಂಡೇಶನ್ ಮಣೂರು- ಪಡುಕರೆ, ಜೆ.ಸಿ.ಐ ಕಲ್ಯಾಣಪುರ, ಉಸಿರು ತರಬೇತಿ- ಅಧ್ಯಯನ ಕೇಂದ್ರ ಕೋಟ ಇವರ ಆಶ್ರಯದಲ್ಲಿ ದಿ.ಕೆ.ಸಿ. ಕುಂದರ್ ಸ್ಮರಣಾರ್ಥ ಕೋಟದ ಡಾ. ಶಿವರಾಮ ಕಾರಂತ ಥೀಮ್ ಪಾರ್ಕ್ ನಲ್ಲಿ ನಡೆಯುತ್ತಿರುವ ಮಕ್ಕಳ ಬೇಸಿಗೆ ಶಿಬಿರ ವಿಕಸನ-2023(ಪರಿವರ್ತನೆಯ ತಂಗಾಳಿ) ಕಾರ್ಯಕ್ರಮದ ಸಮಾರೋಪ ಸಮಾರಂಭ ಹಾಗೂ ದಿ.ಕೆ.ಸಿ ಕುಂದರ್ ಸ್ಮಾರಕ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.
ಉಡುಪಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ ಮಾತನಾಡಿ, ಕುಲಕಸುಬು ಬಗ್ಗೆ ಕೀಳರಿಮೆ ತೊರೆದು ಮುಂದುವರೆದಲ್ಲಿ ಯಶಸ್ಸು ಕಾಣಲು ಪ್ರಾಮಾಣಿಕ ಪ್ರಯತ್ನದಿಂದ ಸಾಧ್ಯ ಎಂದರು. ದಿ.ಕೆ.ಸಿ ಕುಂದರ್ ಸ್ಮಾರಕ ಪುರಸ್ಕಾರವನ್ನು ಕೋಟದ ಸಮುದ್ಯತಾ ಸಂಸ್ಥೆಗೆ ಹಾಗೂ ಕುಮಾರ್ ಕುಲಾಲ್ ಅವರಿಗೆ ಪ್ರದಾನ ಮಾಡಲಾಯಿತು.
ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ ಕುಮಾರ್ ಪ್ರಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಕಾರಂತ ಪ್ರತಿಷ್ಠಾನದ ಟ್ರಸ್ಟಿ ಸುಶೀಲ ಸೋಮಶೇಖರ್, ಸುಬ್ರಾಯ ಆಚಾರ್ಯ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹರೀಶ್ ಕುಮಾರ್ ಶೆಟ್ಟಿ, ಜೆ.ಸಿಐ ಕಲ್ಯಾಣಪುರ ಅಧ್ಯಕ್ಷೆ ಅನಿತಾ ನರೇಂದ್ರ ಕುಮಾರ್, ಶಿಬಿರದ ತಂಡದ ನಾಯಕರು ಉಪಸ್ಥಿತರಿದ್ದರು. ಶಿಬಿರಾರ್ಥಿ ಶರಧಿ ಐತಾಳ್ ನಿರೂಪಿಸಿದರು.