ಕೋಟ, ಏ. 20: ಕೋಟದ ಡಾ. ಶಿವರಾಮ ಕಾರಂತ ಥೀಮ್ ಪಾರ್ಕ್ ನಿಂದ ಅಮೃತೇಶ್ವರಿ ದೇವಾಸ್ಥಾನದ ರಸ್ತೆಯ ಉದ್ದಕ್ಕೂ ಮಕ್ಕಳ ಕೈಯಲ್ಲಿ ಭಿತ್ತಿಪತ್ರ, ಒಕ್ಕೊರಲ ಗಟ್ಟಿ ಧ್ವನಿಯ ಕೂಗು ಕೋಟ ಪೇಟೆಯ ಮೂಲೆ ಮೂಲೆಯಲ್ಲಿ ಪ್ರತಿಧ್ವನಿಸುತ್ತಿತ್ತು. ದಾರಿಯಲ್ಲಿ ಹೋಗುವ ಸಹಚಾರಿಗಳು ಅಶ್ಚರ್ಯದಿಂದ ಮಕ್ಕಳ ಕೂಗು, ಭಿತ್ತಿ ಪತ್ರ ನೋಡುತ್ತಾ ಮಂದಹಾಸ ಬೀರುತ್ತಿದ್ದರು. ಮಕ್ಕಳ ಬಾಯಲ್ಲಿ ನೂರಾರು ಮತದಾನ ಜಾಗೃತಿಯ ಘೋಷವಾಕ್ಯಗಳು ಮೊಳಗುತ್ತಿದ್ದವು. ಚುಣಾವಣೆ ಸಮೀಪಿಸುತ್ತಿದ್ದಂತೆ ಮಕ್ಕಳು ಮತದಾನದ ಬಗ್ಗೆ ಹಿರಿಯರಲ್ಲಿ ಜಾಗೃತಿ ಮೂಡಿಸಿದರು.
ಈ ದೃಶ್ಯ ಕಂಡುಬಂದಿದ್ದು ಡಾ. ಶಿವರಾಮ ಕಾರಂತ ಪ್ರತಿಷ್ಠಾನ (ರಿ.) ಕೋಟ, ಡಾ. ಶಿವರಾಮ ಕಾರಂತ ಟ್ರಸ್ಟ್ (ರಿ.) ಉಡುಪಿ, ಕೋಟತಟ್ಟು ಗ್ರಾಮ ಪಂಚಾಯತ್, ಉಡುಪಿ ಜಿಲ್ಲಾ ಸ್ವೀಪ್ ಸಮಿತಿ, ಗೀತಾನಂದ ಫೌಂಡೇಶನ್ ಮಣೂರು-ಪಡುಕರೆ, ಜೆ.ಸಿ.ಐ ಕಲ್ಯಾಣಪುರ, ಉಸಿರು ತರಬೇತಿ-ಅಧ್ಯಯನ ಕೇಂದ್ರ ಕೋಟ ಇವರ ಆಶ್ರಯದಲ್ಲಿ ದಿ.ಕೆ.ಸಿ. ಕುಂದರ್ ಸ್ಮರಣಾರ್ಥ ಕೋಟದ ಡಾ. ಶಿವರಾಮ ಕಾರಂತ ಥೀಮ್ ಪಾರ್ಕ್ ನಲ್ಲಿ ನಡೆಯುತ್ತಿರುವ ಮಕ್ಕಳ ಬೇಸಿಗೆ ಶಿಬಿರ ವಿಕಸನ-2023 (ಪರಿವರ್ತನೆಯ ತಂಗಾಳಿ) ಹತ್ತನೇ ದಿನ ಕಾರ್ಯಕ್ರಮದ ಅಂಗವಾಗಿ ಮತದಾನ ಜಾಗೃತಿ ಜಾಥಾ ಕಾರ್ಯಕ್ರಮ ಕೋಟದ ಡಾ. ಶಿವರಾಮ ಕಾರಂತ ಥೀಮ್ ಪಾರ್ಕ್ ನಿಂದ ಹೊರಟು ಅಮೃತೇಶ್ವರಿ ಮಾರ್ಗವಾಗಿ ಸಾಗಿ ಕೋಟತಟ್ಟು ಗ್ರಾಮ ಪಂಚಾಯತ್ ತನಕ ನಡೆಯಿತು.
ಜಾಥಾ ಉದ್ಘಾಟಿಸಿ ಮಾತನಾಡಿದ ಬ್ರಹ್ಮಾವರ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ಎಚ್ ವಿ ಇಬ್ರಾಹೀಂಪೂರ ಅವರು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಪ್ರತಿಯೊಬ್ಬ ನಾಗರಿಕನ ಹಕ್ಕಾಗಿದ್ದು ಮರೆಯದೇ ಮತದಾನ ಮಾಡುವುದು ಅವರ ಕರ್ತವ್ಯವಾಗಿರುತ್ತದೆ. ಮಕ್ಕಳು ಕೂಡಾ ಮತದಾನ ವ್ಯವಸ್ಥೆ ಬಗ್ಗೆ ಮಾಹಿತಿ ತಿಳಿದುಕೊಳ್ಳುವುದು ಉತ್ತಮ ಎಂದರು. ಸಿ.ಆರ್.ಪಿ ಸವಿತಾ, ಶಿಕ್ಷಣ ಫೌಂಡೇಶನ್‌ನ ಕಾರ್ಯಕ್ರಮ ಸಂಯೋಜಕರಾದ ರೀನಾ ಹೆಗ್ಡೆ, ಕೋಟತಟ್ಟು ಗ್ರಾಮ ಪಂಚಾಯತ್ ಪಿ.ಡಿ.ಓ ರವೀಂದ್ರ ರಾವ್, ಕಾರ್ಯದರ್ಶಿ ಸುಮತಿ ಅಂಚನ್, ಪಂಚಾಯತ್ ಸಿಬ್ಬಂದಿಗಳು, ಥೀಮ್ ಪಾರ್ಕ್ ಸಿಬ್ಬಂದಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ ಕುಮಾರ್ ನಿರೂಪಿಸಿದರು.