ಕೋಟ: ಯಕ್ಷಗಾನದ ಹಳೆಯ ಸಂಪ್ರದಾಯಗಳನ್ನು ಉಳಿಸಿಕೊಂಡು ಪ್ರೇಕ್ಷಕರ ಅಭಿರುಚಿಗೆ ತಕ್ಕಂತೆ ಹೊಸ ಹೊಸ ಪ್ರಯೋಗಗಳು, ಬದಲಾವಣೆಗಳು ಆಗಬೇಕು ಎಂದು ಕರ್ಣಾಟಕ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಾಬಲೇಶ್ವರ ಎಂ.ಎಸ್ ಹೇಳಿದರು.
ಗುಂಡ್ಮಿಯ ಹಂಗಾರಕಟ್ಟೆ ಯಕ್ಷಗಾನ ಕಲಾಕೇಂದ್ರಕ್ಕೆ ಭಾನುವಾರ ಭೇಟಿ ನೀಡಿ ಯಕ್ಷಗಾನ ಪ್ರಾತ್ಯಕ್ಷಿಕೆ ವೀಕ್ಷಿಸಿ ಅವರು ಮಾತನಾಡಿದರು.
ಎಲ್ಲ ಕ್ಷೇತ್ರದಲ್ಲೂ ಬದಲಾವಣೆ ಆಗುತ್ತಿದೆ. ಯಕ್ಷಗಾನ ಕ್ಷೇತ್ರದಲ್ಲೂ ಇಂದು ಅನೇಕ ಬದಲಾವಣೆಗಳನ್ನು ಕಾಣುತ್ತಿದ್ದೇವೆ. ಕರಾವಳಿಗೆ ಯಕ್ಷಗಾನ ಸೀಮಿತವಾಗಿರದೇ ವಿವಿಧ ಭಾಷೆಗಳಲ್ಲಿಯೂ ಇದರ ಪ್ರಯೋಗಗಳು ಆಗಿ ದೇಶ ವಿದೇಶದ ಮೂಲೆ ಮೂಲೆಗೂ ಕಲೆಯ ಪ್ರಸಾರ ಹಾಗೂ ವಿಸ್ತಾರ ಆಗಬೇಕಾಗಿದೆ. ಇಂದು ಮಹಿಳೆಯರು, ಮಕ್ಕಳು ಯಕ್ಷಗಾನದಲ್ಲಿ ತಮ್ಮನ್ನು ತೊಡಗಿಸಿಕೊಂಡು ಯಕ್ಷಗಾನ ಕಲೆಯನ್ನು ವಿಸ್ತರಿಸುತ್ತಿರುವುದು ಶ್ಲಾಘನೀಯ ಎಂದರು.
ಇದೇ ಸಂದರ್ಭ ಅವರು ಕರ್ಣಾಟಕ ಬ್ಯಾಂಕ್‌ನ ವತಿಯಿಂದ ಯಕ್ಷಗಾನ ಕಲಾ ಕೇಂದ್ರಕ್ಕೆ ಜನರೇಟರ್ ನ್ನು ಕೊಡುಗೆಯಾಗಿ ನೀಡಿದರು. ಕಲಾ ಕೇಂದ್ರದ ವತಿಯಿಂದ ಮಹಾಬಲೇಶ್ವರ ಎಂ.ಎಸ್ ಅವರನ್ನು ಗೌರವಿಸಲಾಯಿತು.
ಕಲಾ ಕೇಂದ್ರದ ಗೌರವಾಧ್ಯಕ್ಷ ಹಾಗೂ ಉದ್ಯಮಿ ಆನಂದ್ ಸಿ ಕುಂದರ್, ಸಾಲಿಗ್ರಾಮ ಗುರುನರಸಿಂಹ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯ ಅನಂತ ಪದ್ಮನಾಭ ಐತಾಳ, ಹಿರಿಯರಾದ ರಾಮಕೃಷ್ಣ ಐತಾಳ, ಕಲಾ ಕೇಂದ್ರದ ಕಾರ್ಯದರ್ಶಿ ರಾಜಶೇಖರ ಹೆಬ್ಬಾರ್, ವೈಕುಂಠ ಹೇರ್ಳೆ ಉಪಸ್ಥಿತರಿದ್ದರು.