ಉಡುಪಿ: ಕಾಪು ಪುರಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು 12 ವಾರ್ಡುಗಳಲ್ಲಿ ಗೆಲ್ಲಿಸಿ ಪೂರ್ಣ ಬಹುಮತ ನೀಡುವ ಮೂಲಕ ಮತದಾರರು ಬಿಜೆಪಿಯ ನವ ಕಾಪು ನಿರ್ಮಾಣದ ಸಂಕಲ್ಪಕ್ಕೆ ಶಕ್ತಿ ತುಂಬಿರುವುದಾಗಿ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್ಪಾಲ್ ಸುವರ್ಣ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜ್ಯ ಸರಕಾರದ ಜನಪರ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ ಹಾಗೂ ಪಕ್ಷದ ಪ್ರಣಾಳಿಕೆಯಲ್ಲಿ ಘೋಷಿಸಿರುವ ಯೋಜನೆಗಳು ಹಾಗೂ ಪುರಸಭೆಯಲ್ಲಿ ಸ್ವಚ್ಛ, ದಕ್ಷ ಮತ್ತು ಭ್ರಷ್ಟಾಚಾರ ಮುಕ್ತ ಆಡಳಿತಕ್ಕಾಗಿ ಜನತೆ ಬಿಜೆಪಿಯನ್ನು ಬೆಂಬಲಿಸಿದ್ದಾರೆ.
ರಾಷ್ಟ್ರೀಯವಾದಿ ಚಿಂತನೆಯ ನಿಷ್ಠಾವಂತ ಬಿಜೆಪಿ ಕಾರ್ಯಕರ್ತರ ಪರಿಶ್ರಮ ಹಾಗೂ ಪಕ್ಷದ ನಾಯಕರ ಸಾಮೂಹಿಕ ನೇತೃತ್ವದಲ್ಲಿ ಬಿಜೆಪಿಯ ಪ್ರಚಂಡ ಗೆಲುವಿನ ಮೂಲಕ ಕಾಂಗ್ರೆಸ್ ಪಕ್ಷದ ವೈಫಲ್ಯ ಹಾಗೂ ಅಪಪ್ರಚಾರದ ಮೂಲಕ ಮಾಜಿ ಸಚಿವರ ಗೆಲುವಿನ ವ್ಯರ್ಥ ಪ್ರಯತ್ನಕ್ಕೆ ಮತದಾರರು ಸೂಕ್ತ ಉತ್ತರ ನೀಡಿದ್ದಾರೆ.
ಮುಂಬರುವ ದಿನಗಳಲ್ಲಿ ಕಾಪು ಪುರಸಭಾ ವ್ಯಾಪ್ತಿಯಲ್ಲಿ ಪಕ್ಷವನ್ನು ತಳಮಟ್ಟದಿಂದ ಸಂಘಟಿಸುವ ನಿಟ್ಟಿನಲ್ಲಿ ಪಕ್ಷ ಕಾರ್ಯಪ್ರವೃತ್ತರಾಗಲಿದ್ದು ಕಾಪುವಿನ ಸಮಗ್ರ ಅಭಿವೃದ್ಧಿಗೆ ಪೂರಕವಾದ ಅಡಳಿತ ನೀಡುವಲ್ಲಿ ಬಿಜೆಪಿ ಯಶಸ್ವಿಯಾಗಲಿದೆ.
ರಾಷ್ಟ್ರವಿರೋಧಿ ಕೋಮುವಾದಿ ಚಿಂತನೆಯ ಎಸ್ ಡಿ ಪಿ ಐ ಪಕ್ಷದ ಅಭ್ಯರ್ಥಿಗಳ ಗೆಲುವು ಆಡಳಿತ ವ್ಯವಸ್ಥೆಗೆ ಮಾರಕಗಿದ್ದು, ಹಲವಾರು ದೇಶ ವಿರೋಧಿ ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗಿರುವ ಎಸ್ ಡಿ ಪಿ ಐ ಪಕ್ಷ ರಾಜಕೀಯವಾಗಿ ಕರಾವಳಿ ಭಾಗದಲ್ಲಿ ನೆಲೆಕಂಡು ಕೊಳ್ಳುತ್ತಿರುವುದು ದುರದೃಷ್ಟಕರ. ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತರ ಓಲೈಕೆಯ ನೀತಿ ಇದೀಗ ಕಾಂಗ್ರೆಸ್ ಪಕ್ಷಕ್ಕೆ ತಿರುಗುಬಾಣವಾಗಿದೆ ಎಂದು ಯಶ್ಪಾಲ್ ಸುವರ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.