ಉಡುಪಿ, ಮಾ. 24: ರಾಹುಲ್ ಗಾಂಧಿಯನ್ನು ತುರ್ತಾಗಿ ಸಂಸದ ಸ್ಥಾನದಿಂದ ಅನರ್ಹಗೊಳಿಸಿರುವುದು ನ್ಯಾಯಾಂಗ ಮತ್ತು ಶಾಸಕಾಂಗದ ನಿಯಮಾವಳಿಗೆ ವಿರುದ್ಧವಾಗಿದೆ. ಯಾವುದೇ ವ್ತಕ್ತಿಯ ವಿರುದ್ದ ನ್ಯಾಯಾಲಯ ತೀರ್ಪು ನೀಡಿದರೆ ಅಥವಾ ಶಿಕ್ಷೆಗೆ ಒಳಪಡಿಸಿದರೆ ಅವರಿಗೆ ಮೇಲ್ಮನವಿ ಸಲ್ಲಿಸಲು 30 ದಿನಗಳ ಕಾಲಾವಕಾಶ ಇರುತ್ತದೆ. ರಾಹುಲ್ ಗಾಂಧಿಗೆ ಎರಡು ವರ್ಷದ ಶಿಕ್ಷೆ ಪ್ರಕಟಿಸಿದ ನ್ಯಾಯಾಲಯವೇ “ಆದೇಶ ಪ್ರತಿ ಕೈ ಸೇರಿದ 30 ದಿನಗಳ ಒಳಗೆ ಮೇಲ್ಮನವಿ ಸಲ್ಲಿಸಬಹುದು. ಅಲ್ಲಿಯವರೆಗೆ ಜಾಮೀನು ಮಂಜೂರು ಮಾಡಲಾಗಿದೆ ಎಂದು ಆದೇಶ ನೀಡಿದೆ.
ಇನ್ನೂ ನ್ಯಾಯಾಲಯದ ಆದೇಶದ ಸರ್ಟಿಫೈಡ್ ಪ್ರತಿ ರಾಹುಲ್ ಗಾಂಧಿಗೇ ಲಭ್ಯವಾಗಿಲ್ಲ. ಸರ್ಟಿಫೈಡ್ ಕಾಪಿ ಬಂದ ಬಳಿಕವಷ್ಟೇ ರಾಹುಲ್ ಮೇಲ್ಮನವಿ ಸಲ್ಲಿಸಬಹುದು. 30 ದಿನಗಳ ಬಳಿಕವೂ ರಾಹುಲ್ ಗಾಂಧಿ ಮೇಲ್ಮನವಿ ಸಲ್ಲಿಸದೇ ಇದ್ದರೆ ಮಾತ್ರ ಸರ್ಟಿಫೈಡ್ ಕಾಪಿ ಪಡೆದುಕೊಂಡು ರಾಹುಲ್ ಗಾಂಧಿಯನ್ನು ಅನರ್ಹಗೊಳಿಸಬಹುದು. ಆದರೆ ಕರ್ನಾಟಕದಲ್ಲಿ ಚುನಾವಣೆ ನಡೆಯುತ್ತಿರುವುದರಿಂದ ತುರ್ತಾಗಿ ರಾಹುಲ್ ಗಾಂಧಿಯನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಬೇಕಿದೆ.
ಅದಕ್ಕಾಗಿ ಅಡ್ಡದಾರಿ ಹಿಡಿಯಲಾಗಿದೆ. ಬಿಜೆಪಿಯ ದ್ವೇಷದ, ಅನೈತಿಕ ರಾಜಕಾರಣದಿಂದ ದೇಶದಲ್ಲಿ ಪ್ರಜಾಪ್ರಭತ್ವದ ಕಗ್ಗೊಲೆಯಾಗಿದೆ ಎಂದು ಬಿಜೆಪಿಯ ಈ ನಡೆಯನ್ನು ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು ಹಾಗೂ ಜಿಲ್ಲಾ ವಕ್ತಾರ ಭಾಸ್ಕರ ರಾವ್ ಕಿದಿಯೂರು ಖಂಡಿಸಿದ್ದಾರೆ.