ಉಡುಪಿ: ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಕೆ. ರಾಘವೇಂದ್ರ ಕಿಣಿಯವರು ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಈ ಕುರಿತು ಉಡುಪಿ ಜಿಲ್ಲಾಧಿಕಾರಿಯವರಿಗೆ ಅವರು ಪತ್ರ ಬರೆದಿದ್ದು, ಸ್ವ ಇಚ್ಛೆಯಿಂದ ರಾಜೀನಾಮೆ ನೀಡುತ್ತಿರುವುದಾಗಿ ಹೇಳಿದ್ದಾರೆ.
ತನ್ನ ರಾಜೀನಾಮೆಯ ಕುರಿತು ’ಉಡುಪಿ ಬುಲೆಟಿನ್’ ಜೊತೆಗೆ ಮಾತನಾಡಿದ ನಿಕಟಪೂರ್ವ ಅಧ್ಯಕ್ಷ ಕೆ. ರಾಘವೇಂದ್ರ ಕಿಣಿಯವರು, ಮೂರು ವರ್ಷಗಳ ಅವಧಿಯಲ್ಲಿ ಇಬ್ಬರು ಅಧ್ಯಕ್ಷರ ಕಾಲಾವಧಿ ತಲಾ 18 ತಿಂಗಳು. ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷನಾಗಿ 18 ತಿಂಗಳ ಅವಧಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದೇನೆ.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಾಮಾನ್ಯ ಕಾರ್ಯಕರ್ತನಾಗಿರುವ ನಾನು, ನನಗೆ ವಹಿಸಿದ ಜವಾಬ್ದಾರಿಯ ಕಾಲಾವಧಿ ಮುಗಿದ ತಕ್ಷಣ ಅದನ್ನು ಬಿಟ್ಟುಕೊಡುತ್ತಿದ್ದೇನೆ. ಮುಂದಿನ ಅಧ್ಯಕ್ಷರಾಗಿ ಮನೋಹರ ಎಸ್ ಕಲ್ಮಾಡಿಯವರು ಯಶಸ್ವಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.
ತನ್ನ ಅಧಿಕಾರಾವಧಿಯಲ್ಲಿ ಉಡುಪಿ ಶಾಸಕ ಕೆ. ರಘುಪತಿ ಭಟ್ ನೇತೃತ್ವದಲ್ಲಿ ಅಂಬಾಗಿಲು- ಪೆರಂಪಳ್ಳಿ- ಮಣಿಪಾಲ ರಸ್ತೆಯನ್ನು ಟಿಡಿಆರ್ ರಸ್ತೆಯಾಗಿಸಿದ್ದು, ಶೇಕಡ 90 ರಷ್ಟು ಕಾಮಗಾರಿ ಪೂರ್ಣಗೊಂಡಿದೆ.
ಪ್ರಾಧಿಕಾರದ ಕಛೇರಿಯಲ್ಲಿ 28 ವರ್ಷಗಳಿಂದ ಕಾಲಮಿತಿಯಲ್ಲಿ ಅರ್ಜಿ ವಿಲೇವಾರಿಯಾಗುತ್ತಿರಲಿಲ್ಲ. ತನ್ನ ಅಧಿಕಾರಾವಧಿಯಲ್ಲಿ 30 ದಿನಗಳ ಒಳಗೆ ಅರ್ಜಿ ವಿಲೇವಾರಿಗೆ ವ್ಯವಸ್ಥೆ ಮಾಡಲಾಗಿದೆ.
ಕೆರೆ ಅಭಿವೃದ್ಧಿಗೆ 6 ಕೋಟಿ ಹಾಗೂ ಪಾರ್ಕ್ ಅಭಿವೃದ್ಧಿಗಾಗಿ 2 ಕೋಟಿ ಮಂಜೂರಾಗಿದೆ. ಅರ್ಜಿದಾರರು ಮುಂಬರುವ ದಿನಗಳಲ್ಲಿ ತಮ್ಮ ಅರ್ಜಿಯನ್ನು ಟ್ರಾಕ್ ಮಾಡಲು ಆಪ್ ವಿನ್ಯಾಸಗೊಳಿಸಲಾಗುತ್ತಿದ್ದು, ಜನವರಿ ತಿಂಗಳಲ್ಲಿ ಅದನ್ನು ಲೋಕಾರ್ಪಣೆ ಮಾಡುವ ಗುರಿ ಇದೆ. ಇದರಿಂದ ಹಂತಹಂತವಾಗಿ ಕಡತ ಯಾರ ಕೈಯಲ್ಲಿದೆ ಎಂಬುದನ್ನು ಅರ್ಜಿದಾರ ಟ್ರಾಕ್ ಮಾಡಬಹುದು. ಇದರಿಂದ ಮಧ್ಯವರ್ತಿಗಳ ಹಸ್ತಕ್ಷೇಪ ಇರುವುದಿಲ್ಲ ಎಂದು ರಾಘವೇಂದ್ರ ಕಿಣಿ ಹೇಳಿದರು.